ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಪಿಂಚಣಿ ಪಡೆಯುವ ಅಧಿಕಾರವಿದೆ. ಮೊದಲನೇ ಪತ್ನಿ ಬದುಕಿದ್ದಾಗ ಎರಡನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹಾಗಾಗಿ ಎರಡನೇ ಪತ್ನಿಗೆ ಪಿಂಚಣಿಯ ಹಕ್ಕು ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರ್ಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಹಿಂದೂ ಧರ್ಮದಲ್ಲಿ ಏಕಪತ್ನಿತ್ವ ಚಾಲ್ತಿಯಲ್ಲಿದೆ. ಮೊದಲನೇ ಪತ್ನಿ ಜೀವಂತವಾಗಿರಬೇಕಾದರೆ ಎರಡನೇ ಮದುವೆಗೆ ಅವಕಾಶ ಇಲ್ಲ. ಹಾಗಾಗಿ ಅರ್ಜಿದಾರರು ಏನೇ ವಾದ ಮಾಡಿದರೂ ಅದಕ್ಕೆ ಯಾವುದೇ ಕಾಯಿದೆಯ ಬೆಂಬಲ ಇರುವುದಿಲ್ಲ. ಅವರಿಗೆ ಪಿಂಚಣಿಯ ಅರ್ಹತೆ ಇರುವುದಿಲ್ಲ. ಎರಡನೇ ಪತ್ನಿಯ ಮದುವೆ ಕಾನೂನಿನ ಕಣ್ಣಿನಲ್ಲಿ ಮದುವೆಯೇ ಅಲ್ಲ. ಹಿಂದೂ ವಿವಾಹ ಕಾಯ್ದೆ 1955 ರ ಪ್ರಕಾರ ದ್ವಿ ಪತ್ನಿತ್ವ ಅಪರಾಧವಾಗುತ್ತದೆ” ಎಂದು ಆದೇಶಿಸಿದೆ.