5 ಸಾವಿರ ನಕಲಿ ವೀಸಾ ಮಾರಾಟ ಮಾಡಿ, ಬರೋಬ್ಬರಿ 300 ಕೋಟಿ ರೂ. ಸಂಪಾದನೆ
ನಕಲಿ ವೀಸಾಗಳನ್ನು ತಯಾರಿಸಿ, ಎಂಟರಿಂದ ಹತ್ತು ಲಕ್ಷ ರೂಪಾಯಿಗಳಿಗೆ ಒಂದೊಂದು ನಕಲಿ ವೀಸಾ ಮಾರಾಟ ಮಾಡುತ್ತಿದ್ದ ಗ್ಯಾಂಗ್ ವೊಂದರ ಜಾಲವನ್ನು ದೆಹಲಿ ಪೊಲೀಸರು ಬೇಧಿಸಿದ್ದಾರೆ. ಸರಿ-ಸುಮಾರು ಐದು ವರ್ಷಗಳಿಂದ ಹೊಸದಿಲ್ಲಿಯಲ್ಲಿ ನಕಲಿ ವೀಸಾ ದಂಧೆ ನಡೆಸಿದ ಖದೀಮರು, 5 ಸಾವಿರ ನಕಲಿ ವೀಸಾ ಮಾರಾಟ ಮಾಡಿ ಬರೋಬ್ಬರಿ 300 ಕೋಟಿ ಸಂಪಾದಿಸಿದ್ದಾರೆ. ವಿದೇಶಗಳಿಗೆ ಹೋಗಿ ಉತ್ತಮ ಆದಾಯದೊಂದಿಗೆ ಐಷಾರಾಮಿ ಜೀವನ ನಡೆಸಬೇಕು ಎಂದುಕೊಂಡವರಿಗೆ ಅರ್ಹತೆ, ನಿಯಮ ಯಾವುದೂ ಇಲ್ಲದೆಯೇ ವಿದೇಶ ಪ್ರಯಾಣ ಸುಲಭಗೊಳಿಸುವಂಥ ದಂಧೆಯೊಂದು ಇತ್ತೀಚೆಗಿನ ವರ್ಷಗಳಲ್ಲಿ ತೀವ್ರಗೊಂಡಿತ್ತು. ಹೊಸದಿಲ್ಲಿಯ ತಿಲಕ್ನಗರದ ಕಾರ್ಖಾನೆಯೇ ಇದರ ಮೂಲ ಕೇಂದ್ರ ಜಾಲ.
ಈ ಜಾಲವನ್ನು ಬೇಧಿಸಿದ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 16 ನೇಪಾಲಿ ಪಾಸ್ ಪೋರ್ಟ್, 2 ಭಾರತೀಯ ಪಾಸ್ಪೋರ್ಟ್ಗಳ ಜತೆಗೆ ಕೆಲವು ನಕಲಿ ಶೆಂಜೆನ್ ವೀಸಾ ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ 23 ಸ್ಟಾಂಪ್, 30 ವೀಸಾ ಸ್ಟಿಕರ್, ಲ್ಯಾಮಿನೇಟಿಂಗ್ ಹಾಳೆ, ಲ್ಯಾಪ್ಟಾಪ್ ಸಹಿತ ಹಲವು ವಸ್ತುಗಳನ್ನು ವಶಪಡಿಸಿಕೊಂಡಿ ರುವುದಾಗಿ ತಿಳಿದು ಬಂದಿದೆ.
ಹರಿಯಾಣ ಮೂಲದ ಸಂದೀಪ್ ಎಂಬಾತ ಸೆಪ್ಟಂಬರ್ ತಿಂಗಳ 2 ರಂದು ಸ್ವೀಡನ್ ನ ನಕಲಿ ವೀಸಾ ಬಳಸಿ ಇಟಲಿಗೆ ತೆರಳಲು ಮುಂದಾಗಿದ್ದ ವೇಳೆ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ. ಆತನ ಬೆನ್ನು ಹತ್ತಿದ ಪೊಲೀಸರಿಗೆ ಈ ಜಾಲದ ಸುಳಿವು ಸಿಕ್ಕಿತ್ತು. ಬಳಿಕ ವೀಸಾ ಏಜೆಂಟ್ ಗಳಾದ ಶಿವ ಗೌತಮ್, ಅಸೀಪ್ ಅಲಿ, ನವೀನ್ ರಾಣಾ, ಬಲ್ಬಿರ್ ಸಿಂಗ್, ಜಸ್ವೀಂದರ್ ಸಿಂಗ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಿಲಕ್ನಗರ ಫ್ಯಾಕ್ಟರಿಯ ಕರಾಳ ಮುಖ ಬಯಲಾಗಿದೆ. ಅನಂತರ ಪೊಲೀಸರು ಫ್ಯಾಕ್ಟರಿ ನಡೆಸುತ್ತಿರುವ ಮನೋಜ್ ಮೋಂಗಾನನ್ನು ಬಂಧಿಸಿದಾಗ 5 ವರ್ಷಗಳಿಂದ ನಡೆಯುತ್ತಿದ್ದ ದಂಧೆಯ ಸಂಪೂರ್ಣ ವಿವರ ಬಹಿರಂಗವಾಯಿತು.
