ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ಬೆಂಕಿ ಹಚ್ಚಿ ಒಂದೇ ಕುಟುಂಬದ 6 ಮಂದಿಯ ಜೀವಂತ ದಹನಕ್ಕೆ ಕಾರಣಕರ್ತನಾದ ಅಬ್ದುಲ್ ಷರೀಫ್ ಅಲಿಯಾಸ್ ಅಮೀರ್ ಜಾನ್‌ಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಮೈಸೂರಿನ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2018ರ ಏಪ್ರಿಲ್ 28ರಂದು ನೀಡಿದ್ದ ಆದೇಶವನ್ನು ವಿಭಾಗೀಯ ನ್ಯಾಯಪೀಠ ರದ್ದುಗೊಳಿಸಿದೆ.
ದುರ್ಘಟನೆಯು ಅನಿಲ ಸಿಲಿಂಡರ್‌ನಿಂದ ಸ್ಫೋಟಗೊಂಡ ಪ್ರಕರಣವಲ್ಲ. ಆರೋಪಿಯು ಪೆಟ್ರೋಲ್ ಸುರಿದು ಉದ್ದೇಶಪೂರ್ವಕವಾಗಿ ನಡೆಸಿರುವ ದುಷ್ಕೃತ್ಯ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಾಧಾರ ಮತ್ತು ಎಫ್‌ಎಸ್‌ಎಲ್ ವರದಿ ಇದ್ದರೂ ಈ ಅಂಶವನ್ನು ಪರಿಗಣಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿಫಲವಾಗಿದೆ’ ಎಂಬ ವಾದಾಂಶವನ್ನು ನ್ಯಾಯಪೀಠ ಪರಿಗಣಿಸಿದೆ.’ಸಾಕ್ಷ್ಯಾಧಾರಗಳ ಕೊರತೆಯನ್ನು ಮುಂದು ಮಾಡಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಬಂಧಿತರು ಮತ್ತು ಘಟನೆಯಲ್ಲಿ ಗಾಯಗಳೊಂದಿಗೆ ಬದುಕುಳಿದ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಪರಿಗಣಿಸುವಲ್ಲಿ ಸೆಷನ್ಸ್ ನ್ಯಾಯಾಲಯ ವಿಫಲವಾಗಿದೆ. ಲಭ್ಯವಿರುವ ದಾಖಲೆಗಳನ್ನು ಸೂಕ್ತ ದೃಷ್ಟಿಕೋನದಲ್ಲಿ ಶ್ಲಾಘಿಸಿಲ್ಲ. ಇದು ವಿಚಾರಣಾ ನ್ಯಾಯದಾನದ ವೈಫಲ್ಯ’ ಎಂಬ ರಾಜ್ಯ ಪ್ರಾಸಿಕ್ಯೂಷನ್ ವಾದಾಂಶವನ್ನು ಎತ್ತಿಹಿಡಿದಿದೆ.
ರಾಜ್ಯ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ ಅಪರಾಧಿಗೆ ಭಾರತೀಯ ದಂಡ ಸಂಹಿತೆ-1860ರ ಕಲಂ 302, 307 ಮತ್ತು 436ರ ಅಡಿಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿ ಅಬ್ದುಲ್ ಷರೀಫ್ ಸೆಷನ್ಸ್ ನ್ಯಾಯಾಲಯದಲ್ಲಿ ಶರಣಾಗುವಂತೆ ಆದೇಶಿಸಿದೆ.
ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಅಬ್ದುಲ್ ಷರೀಫ್ ಮತ್ತು ನಾಟಿ ವೈದ್ಯ ಮಹಮ್ಮದ್ ಅಮೀರ್ ಜಾನ್ ಕುಟುಂಬದ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆದು ವೈಷಮ್ಯ ಉಂಟಾಗಿತ್ತು. ಇದೇ ಸಿಟ್ಟಿನಲ್ಲಿ ಷರೀಫ್ 2013ರ ಏಪ್ರಿಲ್ 12ರಂದು ಮಧ್ಯರಾತ್ರಿ ಅಜೀಜ್ ನಗರದ ಬಿ.ಡಿ.ಕಾಲೋನಿಯಲ್ಲಿನ ಮಹಮ್ಮದ್ ಅಮೀರ್ ಜಾನ್ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ಘಟನೆಯಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ಒಟ್ಟು ಆರು ಮಂದಿ ಪ್ರಾಣ ಕಳೆದುಕೊಂಡಿದ್ದರು.
