ಕರಾವಳಿಯ ಹೊಟೇಲ್ ಗಳ ಹಗಲು ದರೋಡೆಗೆ ಕಡಿವಾಣ ಹಾಕುವವರು ಯಾರು..?
ಮಂಗಳೂರಿನ ಜನ ಬುದ್ಧಿವಂತರಂತೆ. ಓದಿನಲ್ಲಿ ಬುದ್ದಿವಂತ ಇರಬಹುದು ಅಷ್ಟೇ. ಆದರೆ ನಮ್ಮ ಕಾಲಬುಡದಲ್ಲೇ ಸುಲಿಗೆಕೋರರಿದ್ದರೂ ಅದನ್ನು ಪ್ರಶ್ನಿಸುವ ಕೆಲಸ ಮಾಡದೆ ಮೌನ ವಹಿಸಿರುವುದು ನೋಡುವಾಗ ಇವರು ಬುದ್ಧಿವಂತರೋ.. ತುಳುವಿನಲ್ಲಿ ಹೇಳುವಂತೆ ಬುದ್ಧಿ ‘ವಂತೆ’ ಎಂಬುದೋ ಗೊತ್ತಿಲ್ಲ. ಮಂಗಳೂರಿನಲ್ಲಿ ಲಕ್ಕಿ ಸ್ಕೀಂ ಗಳಂತವು ಹುಟ್ಟಿ ಇಲ್ಲಿನ ಬುದ್ಧಿವಂತರಿಗೆ ಉಂಡೆನಾಮ ಹಾಕಿದ್ದು ಇದೆ. ಬ್ಲೇಡ್ ಕಂಪೆನಿಗಳು ಇಲ್ಲಿರುವಷ್ಟು ಬೇರೆ ಕಡೆ ಎಲ್ಲೂ ಇಲ್ಲ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ದೋಚುವುದನ್ನೇ ಕಾಯಕ ಮಾಡಿಕೊಂಡಿದೆ. ಒಂದಾ..ಎರಡಾ.. ಇದೀಗ ಸೀ ಫುಡ್ ಹೆಸರಿನಲ್ಲಿ ಕೆಲವೊಂದು ರೆಸ್ಟೋರೆಂಟ್ ಗಳು ದುಬಾರಿ ದರ ವಿಧಿಸಿ ದೋಚುತ್ತಿದೆ. ಇಲ್ಲಿಯೇ ಫಿಶ್ ಗಳು ಯಥೇಚ್ಛವಾಗಿ ದೊರಕಿದರೂ, ರೆಸ್ಟೋರೆಂಟ್ ಗಳಲ್ಲಿ ಅಗ್ಗದ ದರದಲ್ಲಿ ನಮಗೆ ಸಿಗಬೇಕಿತ್ತು. ಆದರೆ ಇಲ್ಲಿ ಫಿಶ್ ತಿನ್ನಲು ಹೋದರಂತೂ ಆತನ ಜೇಬು ಖಾಲಿ..ಖಾಲಿ. ಇದು ಬುದ್ಧಿವಂತರ ಜಿಲ್ಲೆಯ ಕಥೆ ವ್ಯಥೆ.
ಕರಾವಳಿ.. ಅದರಲ್ಲೂ ಮಂಗಳೂರು ಮೀನಿನ ಖಾದ್ಯಕ್ಕೆ ಬಲು ಫೇಮಸ್. ಇದಕ್ಕೂ ಕಾರಣವಿದೆ. ಮಂಗಳೂರಿನ ಬಂದರಿನಲ್ಲಿ ಮೀನು ಸಿಗುವ ಕಾರಣ ದೂರದೂರುಗಳಿಂದ ಪ್ರವಾಸಿಗರು ಹಾಗೂ ಮಂಗಳೂರಿನ ಮೀನು ಪ್ರಿಯರು ಸ್ಥಳೀಯ ಸೀ ಫುಡ್ ರೆಸ್ಟೋರೆಂಟ್ ಗೆ ಎಡತಾಕುವುದು ಸತ್ಯ. ಕರಾವಳಿ ಶೈಲಿಯ ತಾಜಾ ಮೀನು ಸವಿಯಲು, ಅಂಜಲು ತವಾ ಫ್ರೈ ಸ್ವಾದ ಸವಿಯಲು ಮಂಗಳೂರಿನ ಪ್ರಮುಖ ರೆಸ್ಟೋರೆಂಟ್ ಗೆ ತೆರಳುತ್ತಾರೆ. ಅದರಲ್ಲೂ ಮಂಗಳೂರಿನಲ್ಲಿ ಫಿಶ್ ರೆಸ್ಟೋರೆಂಟ್ ಗಳು ಅಲ್ಲಲ್ಲಿ ತಲೆ ಎತ್ತಿ ನಿಂತಿದೆ. ಗ್ರಾಹಕರನ್ನು ಸೆಳೆಯಲು ವಿಧವಿಧದ ಹೆಸರನ್ನಿಟ್ಟುಕೊಂಡು ಕಾರ್ಯಾಚರಿಸುತ್ತಿದೆ. ಪಾಪ..ಮಧ್ಯಮ ವರ್ಗದವರು, ದೂರದ ಊರಿನವರು ಮೀನು ಖಾದ್ಯ ಸವಿಯಲು ಇಂತಹ ಹೊಟೇಲಿಗೆ ತೆರಳಿದರೆ..ಅವರ ಜೇಬು ಖಾಲಿ ಪಕ್ಕಾ.. ಒಂದೊಂದು ರೆಸ್ಟೋರೆಂಟ್ ನಲ್ಲಿ ಒಂದೊಂದು ರೇಟು.. ಬಹುತೇಕ ಸೀ ಫುಡ್ ರೆಸ್ಟೋರೆಂಟ್ ಗಳು ಗ್ರಾಹಕರನ್ನು ಸುಲಿಗೆ ಮಾಡಲೆಂದೇ ಹುಟ್ಟಿಕೊಂಡಿದೆ.

ಮಂಗಳೂರಿನಲ್ಲಿ ಹಲವಾರು ಫೇಮಸ್ ಸೀ ಫುಡ್ ರೆಸ್ಟೋರೆಂಟ್ ಗಳಿವೆ. ಇಲ್ಲಿನ ಮೀನು ಸವಿಯಲು ದೂರದ ಊರುಗಳಿಂದ, ರೈಲು ಗಳಿಂದ ಜನರು ಬರುವುದಿದೆ. ಕೇವಲ ಮೀನಿನ ಸ್ವಾದ ಸವಿಯಲು ಬರುವವರ ಸಂಖ್ಯೆಯೇ ಜಾಸ್ತಿ. ಒಮ್ಮೆ ಹೋದವರು ಮತ್ತೆ ಅಲ್ಲಿಗೆ ಹೋಗುವುದು ಡೌಟು. ಒಮ್ಮೆಗೆ 3 ರಿಂದ 4 ಸಾವಿರದಷ್ಟು ಬಿಲ್ಲು ಅಲ್ಲಿ ಪಾವತಿಸಬೇಕಾಗುತ್ತದೆ. ಇದು ಹಗಲು ದರೋಡೆ ಅನ್ನದೇ ಬೇರೆ ಏನು..?
ಮಂಗಳೂರಿಗೆ ಮೀನು ಏನು ದುಬೈ, ಅಮೇರಿಕಾ ದಿಂದ ಸಪ್ಲೇ ಆಗುವುದಲ್ಲ. ಮಂಗಳೂರಿನ ಕಡಲ ಕಿನಾರೆಯಿಂದ ಮೀನನ್ನು ತಂದು ದುಪ್ಪಟ್ಟು ದರ ವಿಧಿಸುತ್ತದೆ ರೆಸ್ಟೋರೆಂಟ್ ಗಳು. ಒಂದೊಂದು ರೆಸ್ಟೋರೆಂಟ್ ಗಳಲ್ಲಿ ಒಂದೊಂದು ದರ. ಎಲ್ಲಾ ರೆಸ್ಟೋರೆಂಟ್ ಗಳು ಒಂದೇ ಕಡೆಯಿಂದ ಮೀನು ತರಿಸಿಕೊಂಡರೂ ಒಂದೊಂದು ರೆಸ್ಟೋರೆಂಟ್ ಗಳಲ್ಲಿ ಒಂದೊಂದು ರೇಟು. ಇದು ಲೂಟೀಸ್ ಅಲ್ಲವೇ.. ಗ್ರಾಹಕರಿಗೆ ಕೆಲವು ಪ್ರಖ್ಯಾತ ರೆಸ್ಟೋರೆಂಟ್ ಗಳು ಉಂಡೆನಾಮ ಹಾಕುತ್ತಿದೆ.

ಮಂಗಳೂರಿನಲ್ಲಿ ಶಿಕ್ಷಣ, ಆಸ್ಪತ್ರೆ ವ್ಯಾಪಾರೀಕರಣ ವಾದಂತೆ ಇಲ್ಲಿನ ಹೊಟೇಲ್ ಗಳು ಅದೇ ಸಾಲಿಗೆ ಸೇರುತ್ತಿದೆ. ಒಂದೊಂದು ರೆಸ್ಟೋರೆಂಟ್ ಗಳಲ್ಲಿ ಅಂಜಲು ತವಾ ಫ್ರೈ ಗೆ ಕನಿಷ್ಠ 600 ರಿಂದ 1000 ರೂಪಾಯಿ ದರ ವಿಧಿಸಲಾಗುತ್ತದೆ. ಮೀನು ಸಿಗದ ಘಟ್ಟದ ಮೇಲೆ ಹಾಗೂ ಬೆಂಗಳೂರಿನ ಹೊಟೇಲ್ ಗಳಲ್ಲಿ ಮೀನಿನ ದರ ನಿಯಮಿತವಾಗಿರುತ್ತದೆ. ಆದರೆ ಮಂಗಳೂರಿನಲ್ಲಿ ಮಾತ್ರ ಗಗನಕ್ಕೇರಿದೆ. ಇದ್ಯಾವ ನ್ಯಾಯ ಅಲ್ಲವೇ..?
ಇಂತಹ ದುಬಾರಿ ಹೊಟೇಲ್ ಗಳ ಬಗ್ಗೆ ಜನ ಎಚ್ಚೆತ್ತು ಕೊಳ್ಳಬೇಕಿದೆ. ಸಂಬಂಧಪಟ್ಟ ಇಲಾಖೆಗಳು ಕೂಡ ಹಗಲು ದರೋಡೆ ನಡೆಸುವ ರೆಸ್ಟೋರೆಂಟ್ ಗಳಿಗೆ ಬಿಸಿ ಮುಟ್ಟಿಸಬೇಕಿದೆ. ಜನರ ಜೇಬು ದೋಚಲು ಹುಟ್ಟಿಕೊಂಡಿರುವ ಕೆಲವು ಪ್ರಖ್ಯಾತ ಸೀ ಫುಡ್ ರೆಸ್ಟೋರೆಂಟ್ ಗಳಿಗೆ ತಕ್ಕ ಪಾಠ ಕಲಿಸಬೇಕಿದೆ.
