ಕೊಡಗನ ಕೋಳಿ ನುಂಗಿತ್ತಾ.. ಬ್ಯಾರಿ ಭಾಷೆಯ ಮಲಾಮೆ ನುಂಗುತ್ತಾ.!!
ಕೊಡಗನ ಕೋಳಿ ನುಂಗಿತ್ತಾ ಅನ್ನುವ ಗಾದೆ ಮಾತಿನಂತೆ ಬ್ಯಾರಿ ಭಾಷೆಯನ್ನು ಮಲಾಮೆ ನುಂಗಬಹುದಾ ಅನ್ನುವ ಆತಂಕ ಇದೀಗ ಬ್ಯಾರಿ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಮ್ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ ತೀರದ ನವಾಯತರು ಮತ್ತು ಮಲಬಾರಿನ ಮಾಪಿಳ್ಳಗಳಿಗೆ ಸಮನಾದ ಒಂದು ಮಹತ್ವದ ಸಾಂಸ್ಕೃತಿಕ ಸಂಪ್ರದಾಯವಿದೆ.
ಬ್ಯಾರಿಗಳು ತುಳುನಾಡಿನ ಇತಿಹಾಸವನ್ನು ತೆಗೆದುಕೊಂಡರೆ ಅತ್ಯಂತ ಪ್ರಾಚೀನ ಮುಸ್ಲಿಮ್ ಜನಾಂಗವಾಗಿದ್ದಾರೆ. ಇಡೀ ಭಾರತದಲ್ಲೇ ಅತ್ಯಂತ ಪುರಾತನ ಮುಸ್ಲಿಮ್ ಸಮುದಾಯವಾಗಿರುವ ಬ್ಯಾರಿಗಳಿಗೆ 1200 ವರ್ಷಕ್ಕೂ ದೀರ್ಘವಾದ ನಿಖರ ಐತಿಹಾಸಿಕ ಹಿನ್ನಲೆಯಿದೆ. ತುಳು ಜನಪದ ಹಾಡಾಗಿರುವ ಪಾಡ್ದನ ಮತ್ತಿತರ ದಾಖಲೆಗಳು ಕೂಡಾ ಈ ಜನಾಂಗಕ್ಕೆ ತುಳುನಾಡು ಮತ್ತು ಅದರ ಸಂಸ್ಕೃತಿಯೊಂದಿಗೆ ಇದ್ದ ಅಂತರ್ಗತ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ.

ಇಷ್ಟೊಂದು ದೀರ್ಘ ಇತಿಹಾಸವಿರುವ ಬ್ಯಾರಿ ಭಾಷೆಯನ್ನು ಬ್ಯಾರಿ -ಮಲಾಮೆ ಎಂದು ಸಂಭೋಧಿಸುವ ಕೆಲವೊಂದು ಲೇಖಕರು ಹುಟ್ಟಿಕೊಂಡಿದ್ದು ಬ್ಯಾರಿಗೆ ಪರ್ಯಾಯವಾಗಿ ಮಲಾಮೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನಕ್ಕ್ ನಿಕ್ಕ್ ಅನ್ನುವುದು ಭಾಷೆಯಲ್ಲ. ಅದೊಂದು ಪದಬಳಕೆ ಅಷ್ಟೇ. ಮಂಗಳೂರು, ಬಂಟ್ವಾಳ, ಮೂಲ್ಕಿ, ಮೂಡಬಿದ್ರೆ ಕಡೆಗಳಲ್ಲಿ ಬ್ಯಾರಿ ಭಾಷೆಯಲ್ಲಿ ನಕ್ಕ್ ನಿಕ್ಕ್ ಪದ ಬಳಸುವವರು ಹೆಚ್ಚಾಗಿ ಕಾಣಸಿಗುವುದು. ನಕ್ಕ್ ನಿಕ್ಕ್ ಅನ್ನುವುದು ಬ್ಯಾರಿ ಭಾಷೆಯ ಜೀವಾಳ. ಅದೇ ರೀತಿ ಪುತ್ತೂರು ಕಡೆಯಲ್ಲಿ ಬ್ಯಾರಿ ಭಾಷಿಗರ ಪದಬಳಕೆ ಸ್ವಲ್ಪ ವ್ಯತ್ಯಾಸವಿದೆ; ಅವರು ಮಾತನಾಡುವ ಶೈಲಿ ಭಿನ್ನವಿದೆ. ಅದೇ ರೀತಿ ಉಳ್ಳಾಲ, ಕೇರಳದ ಗಡಿ ಭಾಗಗಳಲ್ಲಿ ಬಳಸುವ ಬ್ಯಾರಿ ಪದ ಬಳಕೆ ಯಲ್ಲೂ ವ್ಯತ್ಯಾಸವಿದೆ. ಕನ್ನಡದಲ್ಲಿ ಧಾರವಾಡ ಕನ್ನಡ, ಕುಂದಾಪ್ರ ಕನ್ನಡ, ಮಂಗಳೂರು ಕನ್ನಡ. ಆಯಾಯ ವ್ಯಾಪ್ತಿಗೆ ತಕ್ಕಂತೆ ಭಾಷೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗುತ್ತಿರುವುದು ಸಹಜ. ಅದೇ ಕಾರಣಕ್ಕೆ ಮಂಗಳೂರು ಕನ್ನಡ ಮಾತನಾಡುವವರು ನಮ್ಮದೇ ಕನ್ನಡ ಭಾಷೆ ಒರಿಜಿನಲ್ ಎಂದು ಗುದ್ದಾಟಕ್ಕೆ ಇಳಿದರೆ ಏನಾಗಬಹುದು?
ಇದೀಗ ಬ್ಯಾರಿ ಭಾಷೆಯು ಸಂಪನ್ನವಾಗಿ ಪಸರುತ್ತಿರುವುದರಿಂದ, ಬ್ಯಾರಿ ಎಂದು ಹೇಳಲು ನಾಚಿಕೆಪಟ್ಟ ಕಾಲದಲ್ಲಿ ಇಂದು ಬ್ಯಾರಿ ಎಂದು ಹೇಳಲು ಧೈರ್ಯ ತೋರಿಸುತ್ತಿದ್ದಾರೆ. ಈ ನಡುವೆ ಬ್ಯಾರಿ ಭಾಷಿಕರಲ್ಲಿ ಕೆಲವರು ಮಲಾಮೆ ಯನ್ನು ಪರ್ಯಾಯವಾಗಿ ಬಳಸಲು ಮುಂದಾಗಿರುವುದು ಭವಿಷ್ಯದಲ್ಲಿ ಭಾಷೆಗೆ ದೊಡ್ಡ ತೊಡಕಾಗಿದೆ. ನಕ್ಕ್ ನಿಕ್ಕ್ ರೀತಿಯಲ್ಲಿ ಮಲಾಮೆ ಕೂಡ ಪದ ಬಳಕೆ ಅಷ್ಟೇ. ಅದು ಭಾಷೆ ಆಗಿರಲು ಸಾಧ್ಯವಿಲ್ಲ. ಇಂದು ಬ್ಯಾರಿಗೆ ಸಂಬಂಧಪಟ್ಟ ವಿಚಾರದಲ್ಲಿ ಮಲಾಮೆ ಮಾತನ್ನಾಡುವವರು ಮೀಸಲಾತಿ ಕೇಳುವ ಹಂತಕ್ಕೆ ತಲುಪಿದ್ದಾರೆ ಅನ್ನುವುದು ಸೋಜಿಗ. ಬ್ಯಾರಿ ಅಧ್ಯಯನ ಪೀಠ, ಬ್ಯಾರಿ ಪ್ರಶಸ್ತಿ ನೀಡುವ ವಿಚಾರ, ಬ್ಯಾರಿ ಅಕಾಡೆಮಿ ಸದಸ್ಯರಲ್ಲೂ ಮಲಾಮೆ ಮಾತನ್ನಾಡುವವರಿಗೂ ಒಂದು ಮೀಸಲಾತಿ ಇದ್ದೇ ಇದೆ. ಮಲಾಮೆಯವರ ಒಂದು ಕೂಟವೇ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಬ್ಯಾರಿ ಅಕಾಡೆಮಿಯ ಈ ಹಿಂದಿನ ಬಹುತೇಕ ಅಧ್ಯಕ್ಷರು, ಈಗಿನ ಅಧ್ಯಕ್ಷರು ಹಾಗೂ ಬ್ಯಾರಿ ಅಕಾಡೆಮಿಯ ಈಗಿನ ಬಹುತೇಕ ಸದಸ್ಯರು ಮಲಾಮೆ ಭಾಷಿಕರೇ ಅಧಿಕ. ನಕ್ಕ್ ನಿಕ್ಕ್ ರವರಿಗಿಂತ ಮಲಾಮೆಗೆ ಜಾಸ್ತಿಯೇ ಪ್ರಚಾರ ಕೊಡಲಾಗುತ್ತಿದೆ. ನೂತನ ಬ್ಯಾರಿ ಭವನ ನಿರ್ಮಾಣಗೊಳ್ಳುವುದು ಕೂಡ ಮಲಾಮೆ ಹೆಚ್ಚಾಗಿ ಮಾತನ್ನಾಡುವ ಪ್ರದೇಶದಲ್ಲಿ. ಸೈಲೆಂಟಾಗಿ ಕೂತಿರುವ ನಕ್ಕ್ ನಿಕ್ಕ್ ಅನ್ನು ಹೈಜಾಕ್ ಮಾಡಿ ಮಲಾಮೆ ಹೆಸರಿನಲ್ಲಿ ಮಲಾಮತ್ತಿಗೆ ಒಂದು ತಂಡ ಕಾರ್ಯಾಚರಿಸುತ್ತಿರುವುದು ಬ್ಯಾರಿ ನಕ್ಕ್ ನಿಕ್ಕ್ ಮಾತನ್ನಾಡುವವರು ತೆರೆಗೆ ಸರಿಯುತ್ತಿರುವುದು ಭವಿಷ್ಯದಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಬ್ಯಾರಿ ಬದಲು ಮಲಾಮೆ ವಿಜೃಂಭಿಸಿದರೂ ಅಚ್ಚರಿಯಿಲ್ಲ. ಈ ಬಗ್ಗೆ ಬ್ಯಾರಿ ಸಮುದಾಯದ ಪ್ರಜ್ಞಾವಂತರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಅಗತ್ಯವಿದೆ.
