ಮತ್ತೊಂದು ಬೃಹತ್ ಭೂ ಅಕ್ರಮ ಲೋಕಾಯುಕ್ತದಲ್ಲಿ ದೂರು ದಾಖಲು

ರಾಜ್ಯ

ಬರೋಬ್ಬರಿ 300 ಕೋಟಿ ಸರ್ಕಾರಿ ಜಮೀನು ಪರಭಾರೆ ಮಾಡಿರುವ ಕುರಿತು ಲೋಕಾಯುಕ್ತದಲ್ಲಿ ದಾಖಲೆಗಳ ಸಮೇತ ದೂರು

ಬೆಂಗಳೂರು ನಗರ ಜಿಲ್ಲಾಡಳಿತದಲ್ಲಿ ಮತ್ತೊಂದು ಬೃಹತ್ ಭೂ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ವಿಶೇಷ ತಹಶೀಲ್ದಾರ್ ನಾಗರಾಜ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಬರೋಬ್ಬರಿ 300 ಕೋಟಿ ಸರ್ಕಾರಿ ಜಮೀನು ಪರಭಾರೆ ಮಾಡಿರುವ ಕುರಿತು ಲೋಕಾಯುಕ್ತದಲ್ಲಿ ದಾಖಲೆಗಳ ಸಮೇತ ದೂರು ದಾಖಲಾಗಿದೆ.

ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ದೊಡ್ಡ ತೋಗೂರು ಗ್ರಾಮದ ಸರ್ವೆ ನಂ 105 ರಲ್ಲಿ 7 ಎಕರೆ 20 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಲಾಗಿದೆ ಅಂತ ಆಘಾತಕಾರಿ ಅಂಶ ದೂರಿನಲ್ಲಿದೆ. ಮೂಲತಃ ಈ ಜಮೀನು ಸರ್ಕಾರಿ ಜಮೀನಾಗಿದ್ದು, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ ಎಂದು ಗೋಪಾಲ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಈ ಸರ್ಕಾರಿ ಆಸ್ತಿ ಕಬಳಿಕೆಗಾಗಿ ಭೂಗಳ್ಳರ ಜೊತೆ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ. ಸರ್ವೆ ನಂ 105ರಲ್ಲಿ ಸರ್ಕಾರಿ ಹೆಸರಿನಲ್ಲಿದ್ದ 7 ಎಕರೆ 20 ಗುಂಟೆ ಜಮೀನನ್ನು ಮರಿಯಪ್ಪ ಹೆಸರಿಗೆ 4 ಎಕರೆ, ಚಂಗಪ್ಪ ಹೆಸರಿಗೆ 1 ಎಕರೆ 20 ಗುಂಟೆ ಮತ್ತು ಗಂಗಪ್ಪ ಎನ್ನುವವರ ಹೆಸರಿಗೆ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಲೋಕಾಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಈ ಪರಭಾರೆ ಪ್ರಕ್ರಿಯೆ ನಡೆದಿದೆ. ಇದೇ ಜಮೀನಿನ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಇದನ್ನು ಮರೆಮಾಚಿ ಮೇಲಿನ ವ್ಯಕ್ತಿಗಳಿಗೆ ಆರ್​ಟಿಸಿ ಮಾಡಿಕೊಡಲಾಗಿದೆ.

ಈ ಹಗರಣದಲ್ಲಿ ಭೂಕಬಳಿಕೆಗೆ ವ್ಯವಸ್ಥಿತ ಪಿತೂರಿ ನಡೆದಿದೆ. ಅಧಿಕಾರಿಗಳು ಮತ್ತು ಮರಿಯಪ್ಪ, ಗಂಗಪ್ಪ, ಚಂಗಪ್ಪ ಹಾಗೂ ರಾಷ್ಟ್ರಕೂಟ ಬಿಲ್ಡರ್ಸ್​​ರವರು ಸೇರಿ ರಾಜರಾಜೇಶ್ವರಿ ನಗರದ ಸಬ್​ ರಿಜಿಸ್ಟ್ರಾರ್​ ಜೊತೆ ಶಾಮೀಲಾಗಿ 7 ಎಕರೆ 20 ಗುಂಟೆ ಜಮೀನನ್ನು ಸರ್ಕಾರಿ ಬೆಲೆ ಒಟ್ಟು 15 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡು ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. ಅಡ್ವಾನ್ಸ್​ ರೂಪದಲ್ಲಿ ಮರಿಯಪ್ಪ ಮತ್ತು ಇತರರು 2 ಕೋಟಿ 75 ಲಕ್ಷ ರೂಪಾಯಿಯನ್ನು ಆರ್​ಟಿಜಿಎಸ್​ ಮೂಲಕ ಪಡೆದಿದ್ದಾರೆ ಎಂದು ಇಸಿ ಮತ್ತು ರಿಜಿಸ್ಟ್ರಾರ್​ ಪ್ರತಿಗಳನ್ನು ದೂರಿನೊಟ್ಟಿಗೆ ಸಲ್ಲಿಸಲಾಗಿದೆ. ಈ ಬೃಹತ್​ ಭೂ ಹಗರಣದ ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆಗಳು ದಟ್ಟವಾಗಿವೆ.