ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗಳ ಮೇಲೆ ಶುಕ್ರವಾರದಂದು ಪೊಲೀಸ್, ಗಣಿ ಮತ್ತು ಕಂದಾಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಸರಿ ಸುಮಾರು 23 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಂದಾಯ, ಗಣಿ ಇಲಾಖೆ ಮತ್ತು ಪೊಲೀಸರ ಜಂಟಿಯಾಗಿ ತಂಡಕಟ್ಟಿ ನೇತ್ರಾವತಿ ನದಿ ತೀರದ ವಳಚ್ಚಿಲ್, ಮಾರಿಪಳ್ಳ, ಪುದು ಮತ್ತಿತರ ಕಡೆ ಬೃಹತ್ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 23 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ.ಬೋಟುಗಳ ಒಟ್ಟು ಅಂದಾಜು ಮೌಲ್ಯ ರೂ. 46 ಲಕ್ಷ ರೂಪಾಯಿಗಳಾಗಿದ್ದು, ಇವುಗಳನ್ನು ಜಪ್ತಿಮಾಡಿ ಸದ್ಯ ಅಡ್ಯಾರ್ ಕಟ್ಟೆ ಸಮೀಪದ ಜಾಗದಲ್ಲಿ ತಂದಿಡಲಾಗಿದೆ.

ಮಂಗಳೂರು ಉಪ-ವಿಭಾಗಾಧಿಕಾರಿ ಹರ್ಷವರ್ಧನ್ ರವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯ ಕಾರ್ಯಾಚರಣೆಯಲ್ಲಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾದ ಗಿರೀಶ್ ಮೋಹನ್, ಕೃಷ್ಣವೇಣಿ, ಮಹದೇಶ್ವರ್ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
