ಹನಿಟ್ರ್ಯಾಪ್ ಬಗೆದಷ್ಟು..ಬಿಚ್ಚಿಡುತ್ತಿದೆ.!

ಕರಾವಳಿ

ಪ್ರಖ್ಯಾತ ಧಾರ್ಮಿಕ ಪಂಡಿತರನ್ನೇ ಬಲೆಗೆ ಬೀಳಿಸುತ್ತಿದ್ದ ಹರಾಮಿಕೋರರು.!

ಹನಿಟ್ರ್ಯಾಪ್.. ಖದೀಮರು ಸುಲಭದಲ್ಲಿ ದುಡ್ಡು ಮಾಡಿಕೊಳ್ಳಲು ಕಂಡುಕೊಂಡ ಮಾರ್ಗ ಇದು. ಶ್ರೀಮಂತ ಉದ್ಯಮಿಗಳು, ಪ್ರಖ್ಯಾತರ ವೀಕ್ನೆಸ್ ತಿಳಿದು ಚೆಂದುಳ್ಳಿ ಚೆಲುವೆಯರ ಮೂಲಕ ಅವರನ್ನು ಬಲೆಗೆ ಬೀಳಿಸಿ ಅಲ್ಲಿ ನಡೆಯುವ ಸಕಲ ಆಟವನ್ನು ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಸಂತ್ರಸ್ತರನ್ನು ಜೀವನ ಪರ್ಯಂತ ದೋಚುವ ಕಾಯಕ ಮಾಡಿಕೊಂಡಿರುವ ಇಂತಹ ಖತರ್ನಾಕ್ ಗ್ಯಾಂಗ್ ಮಂಗಳೂರಿನಲ್ಲಿ ಅಲ್ಲಲ್ಲಿ ತಲೆ ಎತ್ತಿ ನಿಂತಿದೆ. ನಿರಂತರ ಬ್ಲ್ಯಾಕ್ ಮೇಲ್ ಗೆ ಸಿಲುಕಿದರೂ ಮಾನ ಮರ್ಯಾದೆಗೆ ಹೆದರಿ ಪೊಲೀಸ್ ದೂರು ಕೊಡಲು ಮುಂದಾಗುವುದಿಲ್ಲ. ಈ ಭಂಡ ಧೈರ್ಯದಿಂದಲೇ ಹನಿಟ್ರ್ಯಾಪ್ ದಂಧೆಕೋರರು ತಮ್ಮ ಆಟವನ್ನು ಅತ್ಯಂತ ವ್ಯವಸ್ಥಿತವಾಗಿಯೇ ನಡೆಸುತ್ತಿದ್ದಾರೆ. ಇಂತಹವರ ತಲೆ ಮಾಸಿದ ಕೆಲಸಕ್ಕೆ ಹಲವು ಕುಟುಂಬಗಳು ಬೀದಿಗೆ ಬಂದಿದೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದೂ ಇದೆ.

ಇದೀಗ ಮಂಗಳೂರಿನ ಪ್ರಖ್ಯಾತ ಉದ್ಯಮಿ, ಮುಸ್ಲಿಂ ಮುಖಂಡ ಮುಮ್ತಾಜ್ ಅಲಿ ಸುಸೈಡ್ ಹಿಂದೆ ಕೈಯಾಡಿಸಿದ್ದು ಇಂತಹದ್ದೇ ಹರಾಮಿಕೋರ ಹನಿಟ್ರ್ಯಾಪ್ ಖದೀಮರು. ಕೃಷ್ಣಾಪುರ ಜಮಾಅತ್ ಕಮಿಟಿಯ ಜಿಡ್ಡಿನಿಂದ ಈ ಹರಾಮಿಕೋರರು ಉದ್ಯಮಿಯ ವೀಕ್ನೆಸ್ ತಿಳಿದುಕೊಂಡು ಹುಡುಗಿಯ ಮೂಲಕವೇ ಹನಿಟ್ರ್ಯಾಪ್ ಗೆ ಕೆಡವಿದ್ದರು. ನಿರಂತರ ಬೆದರಿಸಿ ದುಡ್ಡು ಬಾಚಿಕೊಂಡಿದ್ದರು. ಮಾತ್ರವಲ್ಲ ಉದ್ಯಮಿ ಧಾರ್ಮಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಾಗ ಅವರ ವಿಡಿಯೋ ವನ್ನು ಮೊಬೈಲಿಗೆ ಕಳುಹಿಸಿ ನಿರಂತರ ಹಿಂಸಿಸುತ್ತಿದ್ದರು. ಆಕೆಯನ್ನು ಇಲ್ಲಿಗೆ ಕರೆಯಿಸಿ ರಂಪಾಟ ಮಾಡುವುದಾಗಿ ಬೆದರಿಸುತ್ತಿದ್ದರು. ಮಾತ್ರವಲ್ಲ ಆ ವಿಡಿಯೋ ವನ್ನು ಮಂಗಳೂರಿನ ಪ್ರಖ್ಯಾತ ಉದ್ಯಮಿಗಳ ಮೊಬೈಲಿಗೂ ಕಳುಹಿಸಿ ಇವರ ತೇಜೋವಧೆ ಮಾಡುತ್ತಿದ್ದರು. ಹೀಗೆ ದಿನಾಲೂ ಜೀವಂತವಾಗಿ ಸಾಯುವುದಕ್ಕಿಂತ ಒಮ್ಮೆಲೇ ಸತ್ತು ಬಿಟ್ಟರೆ ಎಲ್ಲವೂ ಮುಗಿದು ಹೋಗುತ್ತದೆ ಎಂದರಿತು ಅಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದರು ಆ ಉದ್ಯಮಿ. ಇಂತಹ ಹರಾಮಿಕೋರರಿಂದ ಸಮುದಾಯದ ನಾಯಕರೊಬ್ಬರನ್ನು ಮುಸ್ಲಿಂ ಸಮುದಾಯ ಕಳೆದುಕೊಳ್ಳುವಂತಾಯಿತು.

ಇವರ ಹನಿಟ್ರ್ಯಾಪ್ ಕರಾಳತೆ ಇದೊಂದೇ ಅಲ್ಲ. ಬಗೆದಷ್ಟು..ಬಿಚ್ಚಿಡುತ್ತಿದೆ. ರಾಜಕಾರಣಿಗಳ ಹಿಂದೆ ಮುಂದೆ ಸುತ್ತಾಡುತ್ತಾ ವೈಟ್ ಕಾಲರ್ ಬಟ್ಟೆ ತೊಟ್ಟು ಇವರು ಮಾಡುತ್ತಿದ್ದುದು ಮಾತ್ರ ಮನೆ ಹಾಳು ಕೆಲಸ. ಮಸೀದಿ ಕಮಿಟಿಯ ಪದಾಧಿಕಾರಿ ಕಂ ಮುಸ್ಲಿಂ ಸಂಘಟನೆಗಳಲ್ಲಿ ಗುರುತಿಸಿಕೊಂಡು ಪ್ರಖ್ಯಾತ ಉದ್ಯಮಿಗಳು, ಧಾರ್ಮಿಕ ಮುಖಂಡರನ್ನೇ ಬಲೆಗೆ ಬೀಳಿಸಿ ಬೋಳಿಸುತ್ತಿದ್ದರು. ಅದರಲ್ಲೂ ಈ ಟೀಮಿನಲ್ಲಿದ್ದ ಶಾಫಿ ನಂದಾವರ ಅನ್ನುವ ಖತರ್ನಾಕ್ ವ್ಯಕ್ತಿ ಈ ಹಿಂದೆ ಪ್ರಖ್ಯಾತ ಧಾರ್ಮಿಕ ಪ್ರಭಾಷಣಕಾರರೊಬ್ಬರನ್ನು ಹನಿಟ್ರ್ಯಾಪ್ ಹೆಸರಲ್ಲಿ ಬಲೆಗೆ ಬೀಳಿಸಿದ್ದ. ಈ ಪ್ರಭಾಷಣಕಾರರನ್ನು ಮಂಗಳೂರಿಗೆ ಮೊದಲು ಪರಿಚಯಿಸಿದ್ದೇ ನಾನು ಅನ್ನುತ್ತಾ ದೇರಳಕಟ್ಟೆಯ ಮನೆಯೊಂದರಲ್ಲಿ ಹೆಣ್ಣೊಬ್ಬಳ ನಂಬರ್ ಕೊಟ್ಟು ಅವರ ನಡುವೆ ನಡೆದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಟ್ಟುಕೊಂಡು ಆ ಪ್ರಭಾಷಣಕಾರರನ್ನು ಸುಲಿಯಲು ಪ್ರಯತ್ನಿಸಿದ್ದ ಅಸಾಮಿ ಈತ. ಧಮ್ಕಿ ನೀಡಿ ಡೇಟ್ ಪಡೆದು ದೊಡ್ಡ ಪ್ರಭಾಷಣ ವೇದಿಕೆ ನಿರ್ಮಿಸಿ ಅಲ್ಲಿ ಬಂದಿದ್ದ ದುಡ್ಡನ್ನೆಲ್ಲಾ ಸ್ವಾಹಾ ಮಾಡಿಕೊಂಡಿದ್ದ. ಈತನ ಉಪಟಳ ಜಾಸ್ತಿಯಾಗುತ್ತಿದ್ದಂತೆ ಆ ಪ್ರಭಾಷಣಕಾರ ಈತನ ಪೋನ್ ಕರೆಯನ್ನು ಸ್ವೀಕರಿಸುವುದನ್ನು ಬಿಟ್ಟು ಬಿಟ್ಟಿದ್ದರು. ಈತನ ಸಹವಾಸವೇ ಸಾಕು ಎಂದು ದೂರ ಹೋಗಿದ್ದರು. ನಂದಾವರ ಮಸೀದಿಯ ದುಡ್ಡನ್ನು ಬಿಡದೇ ಸ್ವಾಹಾ ಮಾಡಿಕೊಂಡಿದ್ದ ಈತನನ್ನು ಜಮಾಅತಿಗರೇ ನಾಲ್ಕು ತದುಕಿ ಊರಿನಿಂದ ಓಡಿಸಿಬಿಟ್ಟಿದ್ದರು. ಮೂಲತಃ ಪಡುಬಿದ್ರಿಯವನಾದ ಈತ ನಂದಾವರದ ನಂತರ ಸುರತ್ಕಲ್ ನಲ್ಲಿ ಬೀಡುಬಿಟ್ಟು ಇಲ್ಲಿನ ಮುಸ್ಲಿಂ ಮುಖಂಡನ ಸಾವಿಗೂ ಕಾರಣನಾಗಿದ್ದಾನೆ.

ಸುರತ್ಕಲ್ ಉದ್ಯಮಿಯ ಹನಿಟ್ರ್ಯಾಪ್ ವಿಚಾರದಲ್ಲೂ ಈ ಪ್ರಭಾಷಣಕಾರರನ್ನು ಎಳೆದು ತರುವ ಪ್ರಯತ್ನ ಮಾಡಿದ್ದ. ಪಂಚಾತಿಕೆ ನಡೆಸುವಂತೆ ಇದೇ ಗ್ಯಾಂಗಿನಲ್ಲಿರುವ ಮತ್ತೊಬ್ಬ ಖತರ್ನಾಕ್ ಮೂಲಕ ಪ್ರಯತ್ನಿಸಿದ್ದ. ಆದರೆ ಒಮ್ಮೆ ಗುಂಡಿಗೆ ಬಿದ್ದಿದ್ದು ಸಾಕು ಅಂತ ಆ ಧಾರ್ಮಿಕ ಪಂಡಿತರು ಇತ್ತ ತಲೆ ಹಾಕಲೇ ಇಲ್ಲ. ಧಾರ್ಮಿಕ ಪಂಡಿತರು, ಉದ್ಯಮಿಗಳ ಸ್ನೇಹ ಬೆಳೆಸಿ ಅವರ ವೀಕ್ನೆಸ್ ತಿಳಿದುಕೊಂಡು ಗಂಡು ಮಕ್ಕಳು, ಹೆಣ್ಣು ಮಕ್ಕಳನ್ನು ಸಪ್ಲೈ ಮಾಡುತ್ತಿದ್ದ ಈ ಗ್ಯಾಂಗ್ ಅದನ್ನು ವಿಡಿಯೋ ಮಾಡಿ ದುಡ್ಡು ಪೀಕಿಸುತ್ತಿದ್ದರು. ಇವರ ಖತರ್ನಾಕ್ ಆಟಕ್ಕೆ ಹಲವರು ಬಲಿಪಶು ಆಗಿದ್ದಾರೆ ಅನ್ನುವ ಮಾಹಿತಿ ಒಂದೊಂದಾಗಿಯೇ ಹೊರಬರುತ್ತಿದೆ. ಆದರೆ ಮರ್ಯಾದೆಗೆ ಹೆದರಿ ಯಾರೂ ಪೊಲೀಸರಿಗೂ ದೂರು ಕೊಟ್ಟಿಲ್ಲ. ಆದರೆ ಇವರ ಕಿರುಕುಳ ತಾಳಲಾರದೇ ಮುಮ್ತಾಜ್ ಅಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪೊಲೀಸ್ ಇಲಾಖೆ ಇಂತಹ ಖತರ್ನಾಕ್ ಗ್ಯಾಂಗ್ ನ ಮೇಲೆ ಗಂಭೀರ ರೀತಿಯ ಕ್ರಮ ಕೈಗೊಳ್ಳಬೇಕಿದೆ. ಮುಸ್ಲಿಂ ಸಮುದಾಯವು ಇಂತಹ ಹಲಾಲುಕೋರರನ್ನು ಸಮುದಾಯದಿಂದಲೇ ಬಹಿಷ್ಕರಿಸಬೇಕಾಗಿದೆ. ಇಲ್ಲವಾದರೆ ಮುಮ್ತಾಜ್ ಅಲಿ ಯಂತೆ ಇನ್ನೂ ಹಲವಾರು ಮುಸ್ಲಿಂ ಮುಖಂಡರು, ಸಮಾಜದ ಗಣ್ಯರು ಸಾವಿಗೆ ಶರಣಾದರೂ ಅಚ್ಚರಿ ಇಲ್ಲ.