ಆ ಒಂದು ವ್ಯವಹಾರವೇ ಜಿಯಾ ಮರ್ಡರ್ ಹಂತಕರನ್ನು ದುಷ್ಮನಿಯನ್ನಾಗಿಸಿತ್ತು.! ಪೊಲೀಸ್ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ
ಮಾರಿಪಳ್ಳ, ಫರಂಗಿಪೇಟೆ, ಅಡ್ಯಾರ್ ಕಣ್ಣೂರು ಸುತ್ತಮುತ್ತ ಸಾಬ್ರ ಗ್ಯಾಂಗ್ ವಾರ್ ಅಟ್ಟಹಾಸಕ್ಕೆ ಕುಖ್ಯಾತಿ. ಗಾಂಜಾ ಮಾಫಿಯಾ ಗ್ಯಾಂಗ್ ವಾರ್ ಗೆ ಇಲ್ಲಿ ಹಲವು ನೆತ್ತರು ಚೆಲ್ಲಿದೆ. ಇಲ್ಲಿನ ಗ್ಯಾಂಗ್ ವಾರ್ ಗೆ ರೋಸಿಹೋಗಿ ಈ ಊರೇ ಬಿಟ್ಟು ಹೋದ ಸಂಖ್ಯೆಗೇನೂ ಕಮ್ಮಿಯಿಲ್ಲ. ಇಲ್ಲಿನ ಕೆಲವು ಮುಸ್ಲಿಂ ಮುಖಂಡರು ಈ ಗ್ಯಾಂಗ್ ವಾರ್ ಗಳ ಮಧ್ಯೆ ರಾಜಿ ನಡೆಸಿ ಇವರ ಅಟ್ಟಹಾಸವನ್ನು ತಕ್ಕ ಮಟ್ಟಿಗೆ ತಹಬಂದಿಗೆ ತಂದಿದ್ದರು. ತಣ್ಣನೆ ಮಲಗಿದ್ದ ಸಾಬ್ರ ಗ್ಯಾಂಗ್ ವಾರ್ ಇದೀಗ ತಸ್ಲೀಂ ಹತ್ಯಾಯತ್ನದ ಮೂಲಕ ಮತ್ತೆ ಸುದ್ದಿಗೆ ಬಂದಿದೆ. ಮತ್ತೆ ಇಲ್ಲಿ ರಕ್ತದೋಕುಳಿ ಹರಿಯುತ್ತಾ ಅನ್ನುವ ಆತಂಕ ಎದುರಾಗಿದೆ . ತಣ್ಣಗಿದ್ದ ಸೀಬ್ರ ಮಕ್ಕಳ ಗ್ಯಾಂಗ್ ವಾರ್ ಒಮ್ಮೆಲೇ ಚಿಗಿತುಕೊಳ್ಳಲು ಕಾರಣವೇನು? ಆ ಒಂದು ವ್ಯವಹಾರದ ಜಿಡ್ಡೇ ಮತ್ತೆ ಫರಂಗಿಪೇಟೆ ಸುತ್ತಮುತ್ತಲಿನಲ್ಲಿ ಭಯದ ವಾತಾವರಣ ಸೃಷ್ಟಿಸಿತಾ?
2017 ರಲ್ಲಿ ಫರಂಗಿಪೇಟೆ ಜಂಕ್ಷನ್ ಬಳಿ ಜಿಯಾ, ಫಯಾಜ್ ಡಬ್ಬಲ್ ಮರ್ಡರ್ ನಡೆದಿತ್ತು. ಈ ಹತ್ಯೆ ಸಾಬ್ರ ಪಾತಕ ಲೋಕದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈ ಜೋಡಿ ಕೊಲೆಯಲ್ಲಿ ಜೊತೆಯಾಗಿ ಇದ್ದವರೇ ಪಲ್ಟಿ ಇಮ್ರಾನ್ ಮತ್ತು ತಸ್ಲೀಂ. ಇವರಿಬ್ಬರು ದೋಸ್ತ್ ಗಳೇ. ಆದರೆ ಪಾತಕ ಲೋಕದಲ್ಲಿ ಒಂದು ಕರಾರಿದೆ. ಇವತ್ತು ದೋಸ್ತ್ ಇದ್ದವರು, ನಾಳೆ ದುಷ್ಮನ್ ಆಗಿ ಬದಲಾಗಬಹುದು. ಜಿಯಾ ಮರ್ಡರ್ ನಲ್ಲಿ ಜೊತೆಗಿದ್ದವರೇ ಇವತ್ತು ಕಾದಾಡಿ ಪ್ರತ್ಯೇಕ ಗ್ಯಾಂಗ್ ಕಟ್ಟಿ ಮೆರೆಯುತ್ತಿದ್ದಾರೆ.

ಗಳಸ್ಯ ಕಂಠಸ್ಯ ದೋಸ್ತ್ ಆಗಿದ್ದ ಇಮ್ರಾನ್, ತಸ್ಲೀಂ ಮಧ್ಯೆ ಹಗೆತನ ಮೂಡಲು ಕಾರಣವಾಗಿದ್ದು ಮನ್ಸೂರ್ ನ ಆ ಒಂದು ವ್ಯವಹಾರ. ಮನ್ಸೂರ್ ಜೊತೆಗೆ ವ್ಯವಹಾರದಲ್ಲಿ ಭಾಗಿಯಾಗಿದ್ದ ತಸ್ಲೀಂ ನಂತರ ಮನ್ಸೂರ್ ನೊಂದಿಗೆ ದೂರ ಹೋಗಿ ತನ್ನದೇ ಆದ ಸ್ವಂತ ವ್ಯವಹಾರ ನಡೆಸಲು ಆರಂಭಿಸಿದ್ದ. ಮನ್ಸೂರ್ ನಿಗೆ ಪ್ರತಿಸ್ಪರ್ಧಿ ಒಡ್ಡುವ ರೀತಿಯಲ್ಲಿ ತನ್ನ ವ್ಯವಹಾರವನ್ನು ಮುಂದುವರಿಸಿದ್ದ. ಇದು ಇವರಿಬ್ಬರ ನಡುವೆ ವೈಷಮ್ಯಕ್ಕೆ ಕಾರಣವಾಗಿತ್ತು. ತಸ್ಲೀಂ ತನಗೆ ಎದುರಾಗಿಯೇ ಬೆಳೆಯುತ್ತಿರುವುದನ್ನು ಕಂಡು ಆತನ ದೋಸ್ತ್ ಅನ್ನೇ ಮನ್ಸೂರ್ ತನ್ನ ಕಡೆಗೆ ‘ಪಲ್ಟಿ ‘ ಮಾಡಿಬಿಟ್ಟ. ಒಂದಾಗಿ ಇದ್ದ ಗ್ಯಾಂಗ್ ಹೋಳಾಗಿ ಹೋಗಿತ್ತು. ಪರಸ್ಪರ ಕತ್ತಿಮಸೆಯಲು ಆರಂಭಿಸಿಬಿಟ್ಟರು. ನಿನ್ನೆ ರಾತ್ರಿ ಮನ್ಸೂರ್ ಕಡೆಯ ಹುಡುಗನೊಬ್ಬನಿಗೆ ತಸ್ಲೀಂ ಗೀರಿದ್ದನಂತೆ. ಈ ವಿಚಾರವನ್ನು ಆ ಯುವಕ ಮನ್ಸೂರ್ ಕಡೆಯವರಿಗೆ ತಿಳಿಸಿದ್ದ. ಈ ಬಗ್ಗೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಾಲ್ಕು ಮಾರ್ಗದ ಬಳಿ ಬರುವಂತೆ ತಸ್ಲೀಂ ಕೆರಳುವ ಮಾತುಗಳನ್ನು ಆಡಿದ್ದ. ಮನ್ಸೂರ್, ಇಮ್ರಾನ್ ಕಡೆಯವರು ಮಧ್ಯರಾತ್ರಿ ತಸ್ಲೀಂ ಮತ್ತಾತನ ಕಡೆಯ ಶಾಕೀರ್ ಮೇಲೆ ಯದ್ವಾತದ್ವಾ ತಲವಾರು ದಾಳಿ ಬೀಸಿದ್ದಾರೆ. ತಲವಾರು ಏಟಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದೀಗ ನಡೆದಿರುವ ಗ್ಯಾಂಗ್ ವಾರ್ ನಿಲ್ಲುವ ಸಾಧ್ಯತೆ ಕಡಿಮೆ. ಯಾರಾದರೊಬ್ಬರ ಹೆಣ ಬೀಳಬಹುದು ಅನ್ನುವ ಮಾತುಗಳು ಈ ಪರಿಸರದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಹಲವು ಸಮಯಗಳಿಂದ ಈ ಪರಿಸರದಲ್ಲಿ ಸಣ್ಣ ಮಟ್ಟಿನ ಗ್ಯಾಂಗ್ ವಾರ್ ಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಇದು ಹತ್ಯಾಯತ್ನ ದವರೆಗೂ ಮುಂದುವರಿದಿದೆ ಅನ್ನುವ ಮಾತುಗಳು ಹರಿದಾಡುತ್ತಿದೆ. ಈ ಪರಿಸರದಲ್ಲಿ ಗಾಂಜಾ, ಡ್ರಗ್ಸ್ ಮಟ್ಟ ಹಾಕಲು ಪೊಲೀಸ್ ಇಲಾಖೆ ವಿಫಲರಾಗಿರುವುದು ಗ್ಯಾಂಗ್ ಕಟ್ಟಿಕೊಂಡು ಪರಸ್ಪರ ಹೊಡೆದಾಡಿ ಕೊಳ್ಳುವಷ್ಟು ಮಟ್ಟಕ್ಕೆ ಬೆಳೆದಿದೆ ಅನ್ನಲಾಗಿದೆ. ಈ ವ್ಯಾಪ್ತಿಯಲ್ಲಿ ಈ ಹಿಂದೆ ಆಟೋ ಚಾಲಕ ರಿಫಾಯಿ, ಇಜಾಝ್ ಕಣ್ಣೂರು, ಪುತ್ತ ಕಣ್ಣೂರು, ನೂರುದ್ದೀನ್, ನೌಶಾದ್, ಅಡ್ಯಾರ್ ಜಿಯಾ, ಫಯಾಜ್ ಸಾಲು ಸಾಲು ಹೆಣಗಳು ಬೀಳಲು ಹಾಗೂ ಮಾದ ಹನೀಫ್ ಹತ್ಯಾಯತ್ನ ಪ್ರಕರಣ ನಡೆಯಲು ಕಾರಣವಾಗಿದ್ದು ಪೊಲೀಸ್ ವೈಫಲ್ಯದಿಂದಾಗಿಯೇ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿ. ಇಲ್ಲವಾದರೆ ಇಲ್ಲಿ ರಿವೇಂಜ್ ಗೇಮ್ ನಡೆಯುವುದು ಪಕ್ಕಾ.
