ಕೊಂಬ್ರ ಕೆರೆ, ಗೌರಿ ಕೆರೆ, ಕಡಲ ಕೆರೆ ಗುಳುಂ ಆಯ್ತು.. ಇದೀಗ ರೋಧಿಸುತ್ತಿದೆ ಕರಿಂಜೆ ನಿರೇಜಾಲು ಕೆರೆ!
ಮೂಡಬಿದಿರೆಯಲ್ಲಿ ಅಂದಾಜು ನೂರಾರು ಕೆರೆಗಳಿತ್ತು. ಆದರೆ ಈಗ ಉಳಿದಿರುವುದು ಬರೀ 30 ರಿಂದ 40 ಕೆರೆಗಳು ಮಾತ್ರ. ಇಡೀ ಮೂಡಬಿದಿರೆಗೆ ನೀರಿನ ಕೊರತೆ ನೀಗಿಸುತ್ತಿದ್ದ ಕೆರೆಗಳು ಮಾಯವಾಗಿಬಿಟ್ಟಿದೆ. ರಕ್ಷಣೆ ಮಾಡುವ ಹೆಸರಿನಲ್ಲಿ ಭಕ್ಷಣೆಗೆ ಇಳಿದಿದ್ದಾರೆ. ಐತಿಹಾಸಿಕವಾದ ಕೆರೆಗಳನ್ನು ಉಳಿಸುವ ಜವಾಬ್ದಾರಿ ಇಲ್ಲಿನ ನಾಗರೀಕರದ್ದು.
ಮೂಲ್ಕಿ -ಮೂಡಬಿದಿರೆ ಅವಳಿ ನಗರ ಸುಂದರ ತಾಣಗಳಲ್ಲೊಂದು. ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಾಚೀನ ಅರಮನೆಗಳು, ಜೈನ ಬಸದಿಗಳು, ಐತಿಹಾಸಿಕ ಕೆರೆಗಳು ಮೂಡಬಿದಿರೆಗೆ ಮುಕುಟದಂತಿದೆ. ಆದರೆ ಇತ್ತೀಚೆಗೆ ಮೂಲ್ಕಿ -ಮೂಡಬಿದಿರೆ ಪ್ರತ್ಯೇಕ ತಾಲೂಕಾಗಿ ಗುರುತಿಸಲ್ಪಟ್ಟಿದೆ. ಮೂಡಬಿದಿರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಜೈನರು ಆಳಿದ ಪ್ರದೇಶ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರೂಪದ ಜೈನ ಐತಿಹ್ಯಗಳು ಮೂಡಬಿದಿರೆಯಲ್ಲಿ ಕಾಣಸಿಗುತ್ತದೆ. ಮಹಾಕವಿ ರತ್ನಾಕರ ವರ್ಣಿ ಹುಟ್ಟಿದ ಊರು. ಸಂಶೋಧನಾ ವಿದ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರಕ್ಕೆ ಮೂಡಬಿದಿರೆಯಷ್ಟು ಪ್ರಸಕ್ತ ಸ್ಥಳ ಬೇರೊಂದಿಲ್ಲ.

ಮೂಡಬಿದಿರೆಯ ಸ್ಪೆಷಾಲಿಟಿ ಎಂದರೆ ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೆರೆಗಳು ಇಲ್ಲಿ ಇನ್ನೂ ಕೂಡ ಜೀವಂತವಿರುವುದು. ಒಂದು ಕಾಲದಲ್ಲಿ ಇಡೀ ಮೂಡಬಿದ್ರೆಗೆ ಕುಡಿಯುವ ನೀರಿನ ಮೂಲವಾದ ಕೆರೆ ಸಂಪೂರ್ಣ ಹದಗೆಟ್ಟಿದ್ದು, ಕುಡಿಯಲು ಹಾಗೂ ಕೃಷಿ ಉಪಯೋಗಕ್ಕೆ ನಿರ್ಮಾಣವಾದ ಕೆರೆ ನೀರು ಇಂದು ಯಾವ ಉಪಯೋಗಕ್ಕೂ ಬಾರದಂತೆ ಕಲುಷಿತಗೊಂದು ಬ್ರಹ್ಮ ರಾಕ್ಷಸನಂತೆ ಆವರಿಸಿದ ಜಲಕಳೆ ಅಂತರಗಂಗೆಯಿಂದ ಉಸಿರುಗಟ್ಟಿದ ಕೆರೆ ರೋಧಿಸುತ್ತಿದೆ.

ಮೂಡಬಿದಿರೆ ಪೊಲೀಸ್ ಠಾಣೆ ಸನಿಹದಲ್ಲಿ ‘ಕೊಂಬ್ರ ಕೆರೆ’ ಅನ್ನುವ ಐತಿಹಾಸಿಕ ಕೆರೆ ಇತ್ತು. ಮೂಡಬಿದ್ರೆ ಆಸುಪಾಸಿನವರಿಗೆ ಈ ಕೆರೆ ನೀರು ಕೊಡುವ ಜಲಾನಯನ ವಾಗಿತ್ತು. ಬೃಹತ್ತಾದ ದೊಡ್ಡ ಕೆರೆ ಕೊಂಬ್ರಕೆರೆ ಇಂದು ಮಾಯವಾಗಿದೆ. ದೊಡ್ಡವರು ಇದನ್ನು ಕಬಳಿಕೆ ಮಾಡಿ ಕೆರೆಯನ್ನೇ ನುಂಗಿ ಬಿಟ್ಟಿದ್ದಾರೆ. ಅಧಿಕಾರಿಗಳು ಕೂಡಾ ಅಂದು ಸಾಥ್ ಕೊಟ್ಟಿದ್ದರು. ಇವತ್ತು ಬೃಹತ್ ಕೆರೆ ಇದ್ದ ಜಾಗದಲ್ಲಿ ವಿದ್ಯಾ ಸಮುಚ್ಚಯ ಗಳು, ವಾಣಿಜ್ಯ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಮೋದಿಯ ಚಿಂತನೆ ಇರುವವರು ಈ ಕೆರೆಯನ್ನು ಕಬಳಿಕೆ ಮಾಡಿ ಸ್ವಂತಕ್ಕೆ ಉಪಯೋಗಿಸುತ್ತಿದ್ದಾರೆ.

ಇನ್ನು ಮೂಡಬಿದಿರೆಯ ಆಸುಪಾಸಿನಲ್ಲಿರುವ ‘ಗೌರಿ’ ಕೆರೆಗೂ ಅಪಾಯ ಕಾದಿದೆ. ಈ ಕೆರೆಯ ಸುತ್ತಮುತ್ತ ಮನೆಗಳು ನಿರ್ಮಾಣಗೊಂಡಿದ್ದು, ಭವಿಷ್ಯದಲ್ಲಿ ಗೌರಿ ಕೆರೆಯನ್ನು ದುರ್ಬೀನು ಹಿಡಿದು ಹುಡುಕುವ ಪರಿಸ್ಥಿತಿ ಬರಬಹುದು. ಇನ್ನು 18 ಜೈನ ಬಸದಿ ಇದ್ದಂತೆ 18 ಕೆರೆಗಳು ಇದ್ದವು. ಐತಿಹಾಸಿಕ ದಾಖಲೆಯೇ ಇದನ್ನು ಹೇಳುತ್ತದೆ. ಆದರೆ ಈಗ ಹುಡುಕಿದರೂ ಒಂದು ಕೆರೆ ಸಿಗುತ್ತಿಲ್ಲ. ಐತಿಹಾಸಿಕ ಕೆರೆ ಅಂತ ಬೋರ್ಡ್ ಮಾತ್ರ ಕಾಣುತ್ತಿದೆ. ಆ ಕೆರೆಗಳು ಎಲ್ಲಿ ಹೋದವು? ಅನಾದಿ ಕಾಲದಿಂದಲೂ ಇರುವ ಕೆರೆಗಳು ನಾಶವಾಗಿಬಿಟ್ಟಿದೆ. ‘ಕಡಲ ಕೆರೆ ‘ ಕೂಡ ಉಳಿಸುವವರು ಇಲ್ಲದಂತಾಗಿದೆ. ಅದೇ ರೀತಿ ಕರಿಂಜೆ ಗ್ರಾಮದ ಕೆರೆಯೂ ಅವನತಿಯತ್ತ ಸಾಗುತ್ತಿದೆ. ಕನಿಷ್ಠ ಪಕ್ಷ ಅದನ್ನಾದರೂ ಉಳಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ. ಹೀಗೆ ಜಲಾನಯನವನ್ನು ಉಳಿಸಬೇಕಾದರೆ, ಭವಿಷ್ಯದಲ್ಲಿ ಪ್ರಾಕೃತಿಕ ಅನಾಹುತ ತಪ್ಪಿಸಬೇಕಾದರೆ ಸಾರ್ವಜನಿಕ ಕೆರೆಗಳನ್ನು ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ಇದೆ.
ಕರಿಂಜ ಕೆರೆ:
ಮೂಡಬಿದ್ರೆಯ ಕರಿಂಜ ಗ್ರಾಮದ ಸರ್ವೇ ನಂಬರ್ 35/8 ರಲ್ಲಿರುವ 50 ಸೆಂಟ್ಸ್ ವಿಸ್ತೀರ್ಣದ ನೀರೆಜಾಲು ಎಂಬಲ್ಲಿ ಅತೀ ಪುರಾತನವಾದ ಸರಕಾರಿ ಜಾಗದಲ್ಲಿ ಸಾರ್ವಜನಿಕ ಕೆರೆಯೊಂದು ವಿಶಾಲವಾದ ಪ್ರದೇಶದಲ್ಲಿ ಇತ್ತು. 1981-91 ರ ಸಮಯದಲ್ಲಿ ಕರಿಂಜೆ ಗ್ರಾಮದ ಗಿರಿಯಪ್ಪ, ಜೋಸೆಫ್ ಸೇರಿದಂತೆ ಹತ್ತಾರು ಕುಟುಂಬಗಳಿಗೆ ಈ ಕೆರೆಯ ನೀರೇ ಜೀವ ಸೆಲೆ. ಅವರ ಮೂಲಭೂತ ಅಗತ್ಯಗಳಿಗೆ, ಬಟ್ಟೆ ಒಗೆಯಲು, ಕುಡಿಯಲು ಈ ನೀರನ್ನೇ ಆಶ್ರಯಿಸುತ್ತಿದ್ದರು. ಈ ಕೆರೆಯ ನೀರಿನಿಂದಲೇ ಸುಮಾರು 8 ರಿಂದ 10 ಮನೆಯವರು ವರ್ಷಕ್ಕೆ 3 ಬೆಳೆ ಬೆಳೆಯುವಷ್ಟು ನೀರು ದೊರೆಯುತ್ತಿತ್ತು. ಇಂತಹ ಕೆರೆಯನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ಪಹಣಿ ಪತ್ರದಲ್ಲಿ ತೋಡು ಆಗಿ ಪರಿವರ್ತಿಸಿದ್ದರು. ಅಂದಿನ ಅಧಿಕಾರಿಗಳ ವೈಫಲ್ಯದಿಂದ ಪುರಾತನ ಕೆರೆ ಅಕ್ರಮಕಾರರ ಕಬಳಿಕೆಗೆ ಒಳಗಾಗಿ ನಶಿಸುವ ಹಂತಕ್ಕೆ ತಲುಪಿದೆ. ಮಧ್ಯವಯಸ್ಕ ಸ್ಥಳೀಯರಿಗೆ (35 ವರ್ಷ ಮೇಲ್ಪಟ್ಟವರು) ಅಲ್ಲಿನ ಕೆರೆಯನ್ನು ಕಣ್ಣಾರೆ ಕಂಡವರಾಗಿದ್ದಾರೆ. ಈಜಲು, ಬಟ್ಟೆ ಒಗೆಯಲು ಈ ಕೆರೆಯನ್ನೆ ಬಳಸುತ್ತಿದ್ದಾರೆ. ಆದರೆ ಸ್ಥಳೀಯ ಪ್ರಭಾವಿಯೊಬ್ಬರು ಈ ಕೆರೆಯನ್ನು ಕಬಳಿಕೆ ಮಾಡಿಕೊಂಡಿದ್ದು ಇದೀಗ ಸ್ಥಳೀಯರು ಅಲ್ಲಿಗೆ ತೆರಳದಂತೆ ಬೇಲಿ, ಗೇಟು ಹಾಕಿದ್ದಾರೆ. ಶೇಕಡಾ 75 ರಷ್ಟು ಕೆರೆ ಪ್ರದೇಶವನ್ನು ಆಕ್ರಮಿಸಿ ಕೆರೆಗೆ ಮಣ್ಣು ತುಂಬಿಸಿ ತೋಟ ಇಟ್ಟಿದ್ದಾರೆ. ಕೆರೆ ಉಳಿಸುವ ಹೋರಾಟಕ್ಕಿಳಿದವರ ಮೇಲೆಯೇ ಕೇಸು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಹೈಕೋರ್ಟ್ ಗೆ ಕೊಂಡು ಹೋಗಿದ್ದಾರೆ. ಇದೀಗ ಅಲ್ಲಿ ಕೆರೆ ಇರಲಿಲ್ಲ ಎಂದು ಹೈಕೋರ್ಟ್ ಗೆ ಹೋದವರು 1992 ರ ಸಮಯದಲ್ಲಿ ಈ ಕೆರೆಗೆ ಆಕಸ್ಮಿಕವಾಗಿ ಬಿದ್ದು ಸ್ಥಳೀಯರೇ ರಕ್ಷಿಸಿದ್ದರು. ಇವತ್ತು ಕೆರೆ ಇಲ್ಲ ಎಂದು ವಾದಿಸುವವರು ಅಂದು ಅದೇ ಕೆರೆಗೆ ಬಿದ್ದು ಪ್ರಾಣ ಉಳಿಸಿಕೊಂಡಿದ್ದರು ಅನ್ನುವುದೇ ವಿಚಿತ್ರ. ಈ ಕೆರೆಯನ್ನು ಒತ್ತುವರಿ ಮಾಡಿಕೊಂಡವರು ಎಕರೆಗಟ್ಟಲೆ ಜಾಗ ಇದ್ದವರು. ಆದರೆ ಇದನ್ನು ಕುಟುಂಬದ ಸಮಸ್ಯೆ ಎಂದು ಬಿಂಬಿಸಿ ಸ್ಥಳೀಯರು ಮೂಗು ತೂರಿಸದಂತೆ ಷಡ್ಯಂತ್ರ ಮಾಡಿದ್ದಾರೆ. ಈ ಕೆರೆಯನ್ನು 2003 ರಲ್ಲಿ ಹೂಳೆತ್ತುವ ಕಾರ್ಯ ನಡೆಸಿದ್ದರು. ಆನಂತರ ಕೇಸ್ ಕೋರ್ಟಿನಲ್ಲಿದೆ ಎಂದು ಹೇಳಿ ಸಂಬಂಧ ಪಟ್ಟ ಇಲಾಖೆ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕೆರೆ ಉಳಿಸಲು ಹೋರಾಟಕ್ಕೆ ಇಳಿದವರು ಕೋರ್ಟ್ ಅಲೆದಾಡುತ್ತಿದ್ದಾರೆ. ನ್ಯಾಯ ಮರೀಚಿಕೆಯಾಗಿದೆ.
