ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ರಾಜ್ಯ ಸರಕಾರದ ತೀರಾ ಜನವಿರೋಧಿ, ಖಾಸಗೀಕರಣದ ಆದೇಶವನ್ನು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಮರ್ಥಿಸಿರುವುದು,
ಖಾಸಗೀಕರಣ ವಿರೋಧಿಸುತ್ತಿರುವವರನ್ನು ಅವಹೇಳನಗೈದಿರುವುದು ವಿಷಾದನೀಯ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಹೇಳಿದೆ. ಖಾಸಗೀ ಮೆಡಿಕಲ್ ಕಾಲೇಜುಗಳು ಸರಕಾರಿ ಆಸ್ಪತ್ರೆಗಳನ್ನು ಯಾವುದೆ ಫಲಾಪೇಕ್ಷೆ ಇಲ್ಲದೆ ತಳಮಟ್ಟದಿಂದಲೆ ಉದ್ದಾರ ಮಾಡುವ ಕುರಿತು ಹರೀಶ್ ಕುಮಾರ್ ಅವರಿಗೆ ಅಷ್ಟೊಂದು ನಂಬಿಕೆ ಇದ್ದಲ್ಲಿ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಸವಾಲು ಹಾಕಿದೆ.
ಸರಕಾರಿ ಆಸ್ಪತ್ರೆಗಳನ್ನು ಸೂಕ್ತ ಸೌಲಭ್ಯಗಳ ಸಹಿತ ನಡೆಸುವುದು ರಾಜ್ಯ ಸರಕಾರದ ಜವಾಬ್ದಾರಿ. ಅದಕ್ಕಾಗಿ ಆರೋಗ್ಯ ಇಲಾಖೆಯನ್ನು ಸರಕಾರ ಹೊಂದಿದೆ. ವೈದ್ಯರು, ಔಷಧಿ, ಯಂತ್ರೋಪಕರಣಗಳನ್ನು ಒದಗಿಸಿ ಆಸ್ಪತ್ರೆಗಳನ್ನು ಸರಕಾರಕ್ಕೆ ನಡೆಸಲು ಸಾಧ್ಯ ಆಗುವುದಿಲ್ಲ ಎಂಬುದು ನಂಬಲು ಸಾಧ್ಯ ವಿಲ್ಲದ ಸಂಗತಿ. ಸರಕಾರಗಳ ಆರ್ಥಿಕತೆ ತೀರಾ ದುರ್ಬಲ ಇದ್ದ 20ನೇ ಶತಮಾನದಲ್ಲಿಯು ಸಾರ್ವಜನಿಕ ಆಸ್ಪತ್ರೆಗಳನ್ನು ಸರಕಾರಗಳು ಸೂಕ್ತವಾಗಿ ನಿರ್ವಹಿಸಿವೆ. ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಬಜೆಟ್ ನ ಈ ಕಾಲದಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ, ಅದಕ್ಕಾಗಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂಬ ಮಾತನ್ನು ನಂಬಲು ಸಾಧ್ಯವಿಲ್ಲ. ಇದು ಬಲಾಡ್ಯ ಖಾಸಗಿ ಮೆಡಿಕಲ್ ಕಾಲೇಜು ಹಾಗು ಕಾರ್ಪೊರೇಟ್ ವೈದ್ಯಕೀಯ ಲಾಬಿಗಳ ಹಿತಾಸಕ್ತಿ ಹಾಗು ಲಾಭದ ಉದ್ದೇಶಕ್ಕೆ ರಾಜ್ಯ ಸರಕಾರ ಮಣಿದಿರುವುದು ಅಲ್ಲದೆ ಮತ್ತೇನಲ್ಲ ಎಂದು ಸಿಪಿಐಎಂ ಹೇಳಿದೆ.
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ಆಗಿತ್ತೆ.?
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಒಪ್ಪಂದ ಏರ್ಪಡಿಸುವ ಮುನ್ನ ರಾಜ್ಯದ ಕಾಂಗ್ರೆಸ್ ಸರಕಾರವು, ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಕೇಳಿದೆಯೆ, ಕನಿಷ್ಟ ಮಾಹಿತಿಯನ್ನಾದರು ನೀಡಿದೆಯೆ, ಜಿಲ್ಲಾ ಕಾಂಗ್ರೆಸ್ ನಲ್ಲಿ ಈ ಕುರಿತು ಚರ್ಚೆಗಳು ನಡೆದಿದೆಯೆ ಎಂಬುದನ್ನು ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾಗಿರುವ ಹರೀಶ್ ಕುಮಾರ್ ಅವರು ಮೊದಲು ಸ್ಪಷ್ಟಪಡಿಸಲಿ, ಆ ತರುವಾಯ ಖಾಸಗಿ ಮೆಡಿಕಲ್ ಕಾಲೇಜು, ಕಾರ್ಪೊರೇಟ್ ಆಸ್ಪತ್ರೆ ಲಾಬಿಗಳ ಪರವಾಗಿ ವಕಾಲತ್ತು ವಹಿಸಲಿ ಎಂದು ಸಿಪಿಐಎಂ ಹರೀಶ್ ಕುಮಾರ್ ಅವರನ್ನು ಖಾರವಾಗಿ ಪ್ರಶ್ನಿಸಿದೆ.
ಕಾಂಗ್ರೆಸ್ ಬಹುತೇಕ ಕಾರ್ಯಕರ್ತರು ಖಾಸಗೀಕರಣದ ವಿರುದ್ಧ ಇದ್ದಾರೆ, ಹರೀಶ್ ಕುಮಾರ್ ಸಹಿತ ಮೆಡಿಕಲ್ ಕಾಲೇಜು ಲಾಬಿಗಳ ಪರ ಇರುವ ಕೆಲವು ಅಧಿಕಾರಸ್ಥ ನಾಯಕರನ್ನು ಜನರ ಮುಂದೆ ಬಯಲು ಗೊಳಿಸಲಾಗುವುದು
ಕಾಂಗ್ರೆಸ್ ಪಕ್ಷದ ಜಿಲ್ಲೆಯ ಕೆಲವು ಪ್ರಮುಖ ನೇತಾರರು, ಎರಡನೆ ಹಂತದ ನಾಯಕರು, ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತರು ಸರಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಸಚಿವ ದಿನೇಶ್ ಗುಂಡೂರಾವ್ ಅವರ ನಿಲುವಿನ ವಿರುದ್ಧ ಇದ್ದಾರೆ. ಕಾರ್ಪೊರೇಟ್ ಆಸ್ಪತ್ರೆಗಳು, ಖಾಸಗಿ ಮೆಡಿಕಲ್ ಕಾಲೇಜುಗಳು ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಉಂಟುಮಾಡಿರುವ ಭಯಾನಕ ಸ್ಥಿತಿ, ವ್ಯಾಪಾರೀಕರಣ, ದುಬಾರಿ ಬಿಲ್ ಗಳು, ಅನಗತ್ಯ ಚಿಕಿತ್ಸೆಗಳ ಮೂಲಕ ರೋಗಿಗಳನ್ನು, ಅವರ ಕುಟುಂಬಸ್ಥರನ್ನು ಅಸಹಾಯಕತೆ, ಹತಾಷೆಗೆ ತಳ್ಳುತ್ತಿರುವುದರ ಕುರಿತಾಗಿ ಜನಸಾಮಾನ್ಯರಿಗೆ ವ್ಯಾಪಕ ಆಕ್ರೋಶ ಇದೆ. ಈ ಕುರಿತು ಬಹುತೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೂ ಅರಿವಿದೆ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಹಿತ ಮೆಡಿಕಲ್ ಕಾಲೇಜು ಮಾಲಕರ ಒಡನಾಟ ಹೊಂದಿರುವ ಕೆಲವೇ ಪ್ರಮುಖ ಅಧಿಕಾರಸ್ಥ ಕಾಂಗ್ರೆಸ್ ನಾಯಕರು ಮಾತ್ರ ಸರಕಾರಿ ಆಸ್ಪತ್ರೆಗಳ ಖಾಸಗೀಕರಣದ ಪರ ಇದ್ದಾರೆ. ಲಾಬಿ ನಡೆಸುತ್ತಿದ್ದಾರೆ. ಈ ಪಿತೂರಿಗಳನ್ನು, ಒಪ್ಪಂದದ ಹಿಂದಿರುವ ನಾಯಕರ ಹುನ್ನಾರಗಳನ್ನೂ ಮುಂದಿನ ದಿನಗಳಲ್ಲಿ ಜನರ ಮುಂದೆ ಬಯಲು ಪಡಿಸಲಾಗುವುದು ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
