ಮಂಗಳೂರು ನಗರದಲ್ಲಿ ಅನಧಿಕೃತ ಬ್ಯಾನರ್ -ಫ್ಲೆಕ್ಸ್ ಗೆ ಬಿತ್ತು ಕಡಿವಾಣ.. ಮನಪಾ ಅಧಿಕಾರಿಗಳಿಗೆ ಬಿತ್ತು ಮೂಗುದಾರ.!

ಕರಾವಳಿ

ನಿರ್ಬಂಧಿತ ಪ್ರದೇಶದಲ್ಲಿ ಬ್ಯಾನರ್ ಅಳವಡಿಸಿದರೆ ಬೀಳುತ್ತೆ ಬಾರಿ ದಂಡ; ಆರೋಗ್ಯ ನಿರೀಕ್ಷಕ ಶೆಟ್ಟರ ಪವರ್ ಕಟ್

ಮನಪಾ ನೂತನ ಆಯುಕ್ತ ರವಿಚಂದ್ರ ನಾಯಕ್ ದಿಟ್ಟ ಕ್ರಮ ಶುರು..

ಹಂಡಾಲೆದ್ದು ಹೋಗಿದ್ದ ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತ ರವಿಚಂದ್ರ ನಾಯಕ್ ಸರ್ಜರಿ ನಡೆಸಲು ಮುಂದಾಗಿದ್ದಾರೆ. ಬ್ರೋಕರ್ ಗಳ ಅಡ್ಡೆ, ಲಂಚದ ಸಾಮ್ರಾಜ್ಯವಾಗಿ ಪರಿವರ್ತಿತವಾಗಿದ್ದ ಮಹಾನಗರ ಪಾಲಿಕೆಗೆ ದಕ್ಷ ಅಧಿಕಾರಿಯ ಎಂಟ್ರಿ ಹಲವಾರು ಲಂಚಬಾಕ ಅಧಿಕಾರಿಗಳ ಎದೆಯಲ್ಲಿ ಡವ ಡವ ಮೂಡಲು ಶುರುವಾಗಿದೆ. ಈ ಹಿಂದಿನ ಆಯುಕ್ತರಾಗಿದ್ದ ಆನಂದ್ ಕಾರ್ಬಾರು ಲಂಚಬಾಕರಿಗೆ ‘ಪರಮಾನಂದ’ ಅಡ್ಡೆಯಾಗಿತ್ತು. ಆದರೆ ನೂತನ ಆಯುಕ್ತ ರವಿಚಂದ್ರ ನಾಯಕ್ ಅದಕ್ಕೆಲ್ಲ ಬ್ರೇಕ್ ಹಾಕಿದ್ದು, ಅಧಿಕಾರ ವಹಿಸಿಕೊಂಡ ಎರಡೇ ದಿನಗಳಲ್ಲಿ ಅಧಿಕಾರಿಗಳಿಗೆ ಮೂಗುದಾರ ಹಾಕಿದ್ದಾರೆ. ಆಪರೇಷನ್ ಮಹಾನಗರ ಪಾಲಿಕೆಗೆ ಮುಂದಾಗಿದ್ದಾರೆ. ಮಂಗಳೂರು ಮೂಡಾದ ರೀತಿಯಲ್ಲೇ ಬ್ರೋಕರ್ ಗಳನ್ನು ನಿಯಂತ್ರಿಸಲು ಮೊದಲ ಹೆಜ್ಜೆ ಇಟ್ಟಿದ್ದಾರೆ. ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಭ್ರಷ್ಟಾಚಾರ ನಡೆಸಿದರೆ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸುವುದಾಗಿ ಹೇಳಿಕೆ ನೀಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಹತ್ತು ವರ್ಷಗಳಿಂದ ನಿವೃತ್ತಿಯಾದರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಆರೋಗ್ಯ ಅಧಿಕಾರಿ ಶೆಟ್ರು ರಿಗೆ ಬಿಸಿ ಮುಟ್ಟಿಸಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಟ್ರೇಡ್ ಲೈಸನ್ಸ್, ಜನನ ಮರಣ ಪತ್ರ ಹೀಗೆ ಪ್ರತಿಯೊಂದು ಕಡತದಲ್ಲೂ ಕಮಾಯಿ ಮಾಡುತ್ತಿದ್ದು, ಅಕ್ಷರಶಃ ಪಾಲಿಕೆಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು. ಇದೀಗ ಅವರ ಅಧಿಕಾರಕ್ಕೆ ಬ್ರೇಕ್ ಹಾಕಿ ಆದೇಶ ಹೊರಡಿಸಿದ್ದಾರೆ.

ಇನ್ನು ನಗರದ ಸೌಂದರ್ಯವನ್ನು ಹಾಳುಗೆಡವುತ್ತಿದ್ದ ಬ್ಯಾನರ್ -ಫ್ಲೆಕ್ಸ್ ವಿರುದ್ಧ ನೂತನ ಆಯುಕ್ತರು ದಿಟ್ಟ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಗರದಲ್ಲಿ ಅನಧಿಕೃತವಾಗಿ ನೇತಾಡುತ್ತಿದ್ದ ಬ್ಯಾನರ್ -ಫ್ಲೆಕ್ಸ್ ಗಳನ್ನು ಖುದ್ದು ಕಮೀಷನರ್ ಫೀಲ್ಡಿಗಿಳಿದು ತೆರವುಗೊಳಿಸಿದ್ದಾರೆ. ಅನುಮತಿ ಪಡೆಯದೆ ನಿರ್ಬಂಧಿತ ಪ್ರದೇಶಗಳಲ್ಲಿ ಬ್ಯಾನರ್ ಅಳವಡಿಸಿದರೆ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಭ್ರಷ್ಟಾಚಾರದ ಕೂಪವಾಗಿದ್ದ ಮಹಾನಗರ ಪಾಲಿಕೆಯಲ್ಲಿ ನೂತನ ಆಯುಕ್ತರ ದಿಟ್ಟ ನಡೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಈ ಮೊದಲು ಮಂಗಳೂರು ತಾಲೂಕು ಸಹಾಯಕ ಆಯುಕ್ತರಾಗಿದ್ದಾಗಲೂ ಹಲವಾರು ದಿಟ್ಟ ನಿರ್ಧಾರಗಳನ್ನು ಪಾಲಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಜನರೊಂದಿಗೆ ದರ್ಪ ತೊರದೆ, ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಉತ್ತಮ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಮುಂದಿನ ದಿನಗಳಲ್ಲಿ ಇಲ್ಲಿನ ಮಾಫಿಯಾಗಳಿಗೆ ಬಗ್ಗದೆ, ಆರಂಭ ಶೂರತ್ವ ಮಾತ್ರ ಆಗಿರದೆ ಕಡೆಯವರೆಗೂ ಇರಲಿ ಎಂದು ನಾಗರೀಕರು ಆಶಿಸುತ್ತಿದ್ದಾರೆ.