ವಿಟ್ಲ: ಅಕ್ರಮ ಪ್ರವೇಶ ಮಾಡಿ, ತಂದೆ ಹಾಗೂ 6 ವರ್ಷದ ಮಗುವಿನ ಮೇಲೆ ಹಲ್ಲೆ; ರಾಕ್ಷಸೀ ಕೃತ್ಯ ಎಸಗಿದ ಆರೋಪಿ ವಿರುದ್ಧ FIR..

ಕರಾವಳಿ

ರಾತ್ರಿ ಹೊತ್ತು ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಪುಟಾಣಿ ಹಾಗೂ ತಂದೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಕ್ಷಸೀ ಕೃತ್ಯ ಎಸಗಿದ ಘಟನೆಯೊಂದು ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮೈರ ಎಂಬಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮೈರ ನಿವಾಸಿ ಯತೀಶ ಎಮ್. ಸಿ ಎಂಬವರು ಜ. 31ರಂದು ರಾತ್ರಿ 8:00 ಗಂಟೆ ಸುಮಾರಿಗೆ ಮನೆಯ ಅಂಗಳದಲ್ಲಿ ಮಗುವಿನ ಜೊತೆ ಆಟವಾಡುತ್ತಿದ್ದರು. ಆ ಸಂದರ್ಭ ಏಕಾಏಕಿ ಮನೆಯಂಗಳಕ್ಕೆ ನುಗ್ಗಿದ ಮೋಹನ ಗೌಡ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮನೆ ಮಾಲೀಕ ಯತೀಶ ಎಂಬವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಇದೇ ಸಂದರ್ಭ ಯತೀಶನ ಜೊತೆಯಲ್ಲಿದ್ದ ಆರು ವರ್ಷ ಪ್ರಾಯದ ಪುಟಾಣಿಯ ಮೇಲೆಯೂ ರಾಕ್ಷಸೀ ಕೃತ್ಯ ಎಸಗಿದ್ದ ಬಗ್ಗೆ ಗಾಯಾಳು ಯತೀಶ್ ದೂರಿನಲ್ಲಿ ವಿವರಿಸಿದ್ದಾರೆ.

ಮನೆಯಲ್ಲಿದ್ದ ಯತೀಶ್ ಅವರ ತಾಯಿ ಮತ್ತು ಪತ್ನಿ ಬೊಬ್ಬೆ ಹಾಕಿದಾಗ ಆರೋಪಿ ಮೋಹನ್ ಗೌಡ ಕತ್ತಲಲ್ಲಿ ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದ ಬಳಿಕ ದೊಣ್ಣೆ ಯೊಂದಿಗೆ ಬಂದ ಆರೋಪಿ ಮೋಹನ್ ಗೌಡ ಮನೆಯಲ್ಲಿದ್ದ ಇತರರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾನೆಂದು ದೂರಿನಲ್ಲಿ ವಿವರಿಸಿದ್ದಾರೆ. ಈ ಸಂದರ್ಭ ಯತೀಶ್ ರವರ ತಾಯಿ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದಾಗ ಯತೀಶ್ ರವರ ತಾಯಿಯ ಮೇಲೂ ದೊಣ್ಣೆಯಿಂದ ಹಲ್ಲೆ ನಡೆಸಿ ಆರೋಪಿ ರಾಕ್ಷಸೀ ಕೃತ್ಯ ಎಸಗಿದ ಬಗ್ಗೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಆರೋಪಿ ಪರಾರಿಯಾದ ಬಳಿಕ ಗಾಯಾಳು ಯತೀಶ್ ಅವರನ್ನು ಸಂಬಂಧಿಕರು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿ ಮೋಹನ್ ಗೌಡ ಈ ಹಿಂದೆಯೂ ಕೆಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕಾರಣ ಯತೀಶ್ ಮನೆಯವರು ಪ್ರಾಣ ಭಯದಲ್ಲೇ ಬದುಕುವಂತಾಗಿದೆ.

6 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿ ರಾಕ್ಷಸೀ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ವಿಫಲರಾಗಿದ್ದಾರೆ ಎಂದು ಗಾಯಾಳು ಮನೆಯವರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ 2023 (Us-115(2) 118(1) 329(4) 352 351(2)ಪ್ರಕರಣ ದಾಖಲಾಗಿದೆ.