ಪುಚ್ಚಮೊಗರಿನಲ್ಲಿ ಪೆಚ್ಚು ಮೋರೆ ಹಾಕಿದ ಪಿಡಿಒ.! ಸಿಂಗಂ ಸಂದೇಶ್ ಡೈನಾಮಿಕ್ ಸ್ಟೈಲಿಗೆ ಸಾರ್ವಜನಿಕರು ಫಿದಾ

ಕರಾವಳಿ

ಶಾಂತಿ ಭಂಗ ಕಡದುವವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಮೂಡಬಿದ್ರೆ ಇನ್ಸ್ ಪೆಕ್ಟರ್

ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್. ಮೂಡುಬಿದಿರೆ ಠಾಣೆಯಲ್ಲಿ ಸಂದೇಶ್ ಚಾರ್ಜ್ ತೆಗೆದುಕೊಳ್ಳುತ್ತಿದ್ದಂತೆ ಬಿಲ ಸೇರಿಕೊಂಡುಬಿಟ್ಟಿದ್ದಾರೆ ಖತರ್ನಾಕ್ ಖದೀಮರು. ಇಲ್ಲಿ ಧೋ ನಂಬರ್ ದಂಧೆಗಳಿಗೆ ಪುಲಿಸ್ಟಾಪ್ ಬಿದ್ದುಬಿಟ್ಟಿದೆ. ಆದರೂ ಕೆಲವೊಂದು ಕಿಡಿಗೇಡಿಗಳು ಶಾಂತಿಭಂಗ ಉಂಟು ಮಾಡಲು ರಾತ್ರೋರಾತ್ರಿ ಕಸರತ್ತು ನಡೆಸುತ್ತಿದ್ದರೂ ಯಾರಿಗೂ ಕ್ಯಾರೇ ಅನ್ನದೆ ತನ್ನ ಡೈನಾಮಿಕ್ ಸ್ಟೈಲಿನಲ್ಲಿ ಕಿಡಿಗೇಡಿಗಳಿಗೆ ಮೈ ಪರಚುಕೊಳ್ಳುವಂತೆ ಮಾಡುತ್ತಿದ್ದಾರೆ.

ಇತ್ತೀಚೆಗೆ ಪುಚ್ಚಮೊಗರುವಿನ ಶಾಂತಿರಾಜ ಕಾಲನಿಯ ಗಣಪತಿ ಕಟ್ಟೆಗೆ ಈದ್ ಮಿಲಾದ್ ಹಬ್ಬದ ನೆಪದಲ್ಲಿ ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಹಸಿರು ಧ್ವಜ ನೆಟ್ಟು ಹಿಂದೂ ಬಾಂಧವರ ಭಾವನೆಗೆ ದಕ್ಕೆ ತಂದು ಸ್ಥಳದಲ್ಲಿ ಬಿಗುವಿನ ವಾತಾವರಣಕ್ಕೆ ಕಾರಣವಾಗಿತ್ತು. ಆದರೆ ಅಲ್ಲಿನ ಶಾಂತಿಪ್ರಿಯ ಹಿಂದೂಗಳು ಯಾವುದೇ ಗಲಾಟೆಗೆ ಆಸ್ಪದ ಕೊಡದೆ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಹೊಸಬೆಟ್ಟು ಗ್ರಾಮ ಪಂಚಾಯತ್ ಅಧಿಕಾರಿಗಳು ಇದಕ್ಕೆ ಸ್ಪಂದಿಸದೆ ಇದ್ದುದರಿಂದ ಈ ಮಾಹಿತಿ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಅವರಿಗೆ ತಲುಪಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸಂದೇಶ್ ಸ್ಥಳಕ್ಕೆ ಪಿಡಿಒ ಕರೆಸಿ ಹಿಗ್ಗಾಮುಗ್ಗಾ ಬೆವರಿಳಿಸಿದ್ದಾರೆ. ಸಂದೇಶ್ ಖಡಕ್ ವಾರ್ನಿಂಗ್ ಗೆ ಪಿಡಿಒ ಪೆಚ್ಚುಮೋರೆ ಹಾಕಿ ನಿಲ್ಲುವಂತಾಯಿತು. ಸ್ಥಳೀಯರು ಹೊಸಬೆಟ್ಟು ಪಿಡಿಒ ಶೇಖರ್ ಗಮನಕ್ಕೆ ತಂದಿದ್ದರೂ ಪಿಡಿಒ ಬೇಜವಾಬ್ದಾರಿಯಿಂದ ವರ್ತಿಸಿ ತೆರವು ಮಾಡಿರಲಿಲ್ಲ. ಸ್ಥಳದಲ್ಲೇ ಕೆಂಡಾಮಂಡಲರಾದ ಇನ್ಸ್ ಪೆಕ್ಟರ್ ಸಂದೇಶ್ ‘ಇದರ ಮೇಲೆ ಬಾವುಟ ಹಾಕಲಿಕ್ಕೆ ಪರ್ಮೀಶನ್ ತೆಗೆದುಕೊಂಡಿದ್ದರಾ? ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ ‌ ಏನ್ ಮಾಡ್ತಾ ಇದ್ದೀಯಾ? ಅವರು ಪರ್ಮೀಶನ್ ತೆಗೊಂಡಿಲ್ಲ ಅಂದ್ರೆ ಪೊಲೀಸ್ ಕಂಪ್ಲೇಂಟ್ ಕೊಡಬೇಕು. ಮೊದಲು ಇವನನ್ನೇ ಆರೋಪಿ ಮಾಡಬೇಕು. ನಿನ್ನ ಅಧಿಕಾರ ಏನು ಅಂತ ನಿನಗೇ ಗೊತ್ತಿಲ್ಲ. ಸಂಬಂಧ ಇಲ್ಲ ಎಂದು ಹೇಳುವ ನೀನ್ಯಾಕೆ ಪಿಡಿಒ ಆಗಿದ್ದಿ’ ಎಂದು ಡೈನಾಮಿಕ್ ಸ್ಟೈಲಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸೆಪ್ಟೆಂಬರ್ 30 ರಂದು ನಡೆದಿದ್ದ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊನೆಗೆ ಪೊಲೀಸರೆ ಹಸಿರು ಧ್ವಜವನ್ನು ಗಣಪತಿ ಕಟ್ಟೆಯಿಂದ ತೆರವುಗೊಳಿಸಿದರು.

ಅದೇ ರೀತಿ ಮೂಡಬಿದ್ರೆ ಜಂಕ್ಷನ್ ಬಳಿಯ ಸ್ವರಾಜ್ ಮೈದಾನದಲ್ಲಿ ಅನುಮತಿಯಿಲ್ಲದೆ ಆಳೆತ್ತರದ ಕೇಸರಿ ಧ್ವಜ ಹಾಕಿದ್ದನ್ನು ಸಾರ್ವಜನಿಕರು ಗಮನಕ್ಕೆ ತಂದಾಗ ಸ್ಥಳಕ್ಕೆ ತೆರಳಿ ಪುರಸಭಾ ಅಧಿಕಾರಿಗಳನ್ನು ಕರೆಸಿ ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಕೋಮು ಪ್ರಚೋದನೆಗೆ ತನ್ನ ಠಾಣಾ ವ್ಯಾಪ್ತಿಯಲ್ಲಿ ಅವಕಾಶವಿಲ್ಲ ಎಂಬ ಖಡಕ್ ಸಂದೇಶವನ್ನು ಶಾಂತಿ ಕದಡುವವರಿಗೆ ತಲುಪಿಸಿ ದ್ದಾರೆ.

ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಕಾರ್ಯ ಇದೀಗ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದ್ದು, ಅವರ ಸಮಯ ಪ್ರಜ್ಞೆಯನ್ನು ಸಾರ್ವಜನಿಕರು ಕೊಂಡಾಡುತ್ತಿದ್ದಾರೆ. ಇಂತಹ ಅಧಿಕಾರಿಗಳು ಪ್ರತಿ ಠಾಣೆಗಳಲ್ಲಿದ್ದರೆ ಅಲ್ಲಿ ಶಾಂತಿ ಕದಡಲು ಸಾಧ್ಯವಿಲ್ಲ. ಇನ್ಸ್ ಪೆಕ್ಟರ್ ಕಾರ್ಯವೈಖರಿಗೆ ಮೂಡಬಿದ್ರೆ ಶಾಂತಿ ಪ್ರಿಯ ಜನ ಫಿದಾ ಆಗಿದ್ದಾರೆ.