ಮೂಡ ಸದಸ್ಯನ ಸುಲಿಗೆ ಪುರಾಣ.! ಈತನ ಹರ್ನಿಯಾ ರಿಪೇರಿಗೂ ಮೂಡಾದಿಂದ ಕಲೆಕ್ಷನ್.!

ಕರಾವಳಿ

ಮಂಗಳೂರು ಉರ್ವಸ್ಟೋರಿನಲ್ಲಿರುವ ಮೂಡ ಕಚೇರಿಗೆ ಹಿಡಿದ ಶನಿ ಬಿಡುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ರಗಳೆಯ ಮೂಲಕ ಸುದ್ಧಿಯಾಗುತ್ತಲೇ ಇದೆ. ಮೂಡದ ಈ ಹಿಂದಿನ ಆಯುಕ್ತ ಮನ್ಸೂರ್ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಜೈಲು ಪಾಲಾದರು. ಆ ನಂತರ ಬಂದ ಆಯುಕ್ತರು, ಅಧಿಕಾರಿಗಳು ಮೂಡದ ಕರ್ಮಕಥೆ ಬದಲಾಯಿಸುತ್ತಾರೆ ಅಂದುಕೊಂಡಿದ್ದೆವು. ಆದರೆ ಅವರು ಕೂಡ ಅದೇ ದಾರಿ ಹಿಡಿದರು. ಮೂಡದ ಸರಕಾರಿ ಅಧಿಕಾರಿಗಳ ಕಥೆ ನಿಮಗೆಲ್ಲ ಗೊತ್ತೇ ಇದೆ? ಇಲ್ಲಿ ಕಾಸು ಬಿಚ್ಚದೆ ಯಾವ ಕೆಲಸವೂ ನಡೆಯಲ್ಲ. ಒಂದೊಂದು ಫೈಲಿಗೂ ಇಂತಿಷ್ಟು ರೇಟ್ ಫಿಕ್ಸ್ ಮಾಡಿಕೊಂಡು ಕುಳಿತುಬಿಟ್ಟಿದ್ದಾರೆ. ಬಡವರು ಸಿಂಗಾಪುರಕ್ಕೆ ಹೋಗಿ ಬರಬಹುದು. ಆದರೆ ಮಂಗಳೂರಿನ ಮೂಡಕ್ಕೆ ಹೋಗಲಂತೂ ಸಾಧ್ಯವಿಲ್ಲ. ಬಡವರ ರಕ್ತ ಹೀರಲು ತಂಡವೇ ರೆಡಿಯಾಗಿ ಕೂತಿದೆ.

ಇತ್ತೀಚೆಗೆ ಓರ್ವ ದಲ್ಲಾಳಿ ಅಧಿಕಾರಿ ಕಚೇರಿಯಲ್ಲಿಲ್ಲದ ಸಂದರ್ಭ ಎಂಟ್ರಿಕೊಟ್ಟು ಅಲ್ಲಿದ್ದ ದಸ್ತಾವೇಜುಗಳನ್ನು ತಿದ್ದಿದ ವೀಡಿಯೋವೊಂದು ಭಾರೀ ವೈರಲ್ ಆಗಿತ್ತು. ಮೂಡದಲ್ಲಿ ದಲ್ಲಾಳಿಗಳದ್ದೇ ಅಧಿಪತ್ಯ ಅನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿತ್ತು.

ಮೂಡದ ಸರಕಾರಿ ಅಧಿಕಾರಿಗಳನ್ನು ಬಿಡಿ, ಸರಕಾರ ಮೂಡ ಸುಸೂತ್ರವಾಗಿ ನಡೆಯಲು, ಇಲ್ಲಿ ತಪ್ಪು ಸಂಭವಿಸಿದರೆ ಅದನ್ನು ಪ್ರಶ್ನಿಸಲು ಅಧ್ಯಕ್ಷರು, ನಾಮದಾರಿ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಿದೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಇಲ್ಲಿಯ ಸದಸ್ಯನೊಬ್ಬ ಅಧಿಕಾರಿಗಳು, ದಲ್ಲಾಳಿಗಳ ಜೊತೆ ಪೂರ್ತಿ ಕೈ ಜೋಡಿಸಿ ಸುಲಿಗೆ ಪ್ರಕರಣಕ್ಕೆ ಇಳಿದಿದ್ದಾರೆ. ಇದು ಆಶ್ಚರ್ಯವಾದರೂ ಸತ್ಯ.

ನಾವಿಲ್ಲಿ ಹೇಳಹೊರಟಿರುವುದು ಕಾಂಗ್ರೆಸ್ಸಿನ ಸ್ವಯಂ ಘೋಷಿತ ನಾಯಕ ಕಂ ಮೂಡ ನಾಮನಿರ್ದೇಶಿತ ಸದಸ್ಯನೊಬ್ಬನ ಸುಲಿಗೆ ದಂಧೆಯ ಬಗ್ಗೆ. ಮಂಗಳೂರಿನಲ್ಲಿ ಏನಾದರೂ ಘಟನೆ ಸಂಭವಿಸಿದರೆ ಮನವಿ ಮೂಲಕ ನಾಯಕರ ಮನೆ ಬಾಗಿಲಿಗೆ ಎಂಟ್ರಿಯಾಗುವ ಈ ಸದಸ್ಯ ಫೋಟೋಗೆ ಪೋಶ್ ಕೊಡುತ್ತಾ ತಾನೊಬ್ಬ ಸಮುದಾಯದ ಕಣ್ಮಣಿ ಎಂಬ ರೀತಿಯಲ್ಲಿ ಬಿಂಬಿಸಲು ಹೆಣೆಗಾಡುತ್ತಿದ್ದಾನೆ. ಎಲ್ಲಿ ಹೋದರೂ ಫೋಟೋ ಕ್ಲಿಕ್ಕಿಸುತ್ತಾನೆ. ಈ ಮೊದಲು ಮಂಗಳೂರು ಉತ್ತರದ ಮಾಜಿ ಶಾಸಕರೊಬ್ಬರ ಹಿಂದೆ ಮುಂದೆ ಗಿರಾಕಿ ಹೊಡೆಯುತ್ತಿದ್ದ. ಆತ್ಮೀಯ ರೀತಿಯಲ್ಲಿ ಇದ್ದ.‌ ಆದರೆ ಯಾವಾಗ ಮಾಜಿ ಶಾಸಕರು ರಾಜಕಾರಣದಲ್ಲಿ ಸವಕಲು ನಾಣ್ಯವಾದರೋ, ಆಗಲೇ ಮತ್ತೊಂದು ಕ್ಯಾಂಪಿಗೆ ನುಗ್ಗಿಬಿಟ್ಟ. ಸ್ಪೀಕರ್ ತನ್ನ ಕಿಸೆಯಲ್ಲಿದ್ದಾರೆ ಅನ್ನುತ್ತಾ ತಿರುಗಾಡುತ್ತಿದ್ದ. ಈತನ ಸುಲಿಗೆಯ ಬಗ್ಗೆ ಅರಿವಿರದ ನಾಯಕರು ಮೂಡದ ಸದಸ್ಯಗಿರಿಯನ್ನು ಕೊಟ್ಟು ಬಿಟ್ಟರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಎಬಿಸಿಡಿ ಗೊತ್ತಿಲ್ಲದ ಈತ ಚಿನ್ನದ ಮೊಟ್ಟೆ ಇಡುವ ಕೇಂದ್ರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾದುದೇ ತಡ ಸಿಕ್ಕಿದ್ದು ಸೀರುಂಡೆ ಅನ್ನುವಂತೆ ಸಿಕ್ಕಿದ್ದೆಲ್ಲವನ್ನೂ ನುಂಗಲು ಆರಂಭಿಸಿದ. ಈತ ಮೂಡ ಸದಸ್ಯನಾದ ವಾರದ ಅಂತರದಲ್ಲಿ ಹರ್ನಿಯಾ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ. ಲಕ್ಷಗಟ್ಟಲೆ ಬಿಲ್ ಆಗಿತ್ತು. ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಆಗಬೇಕಾದರೆ ಲಕ್ಷ ರೂಪಾಯಿ ಪಾವತಿಸಬೇಕಿತ್ತು. ಮೂಡದ ಸದಸ್ಯನಾಗಿ ಮೂರೇ ದಿನ ಕಳೆದಿತ್ತು. ನೇರವಾಗಿ ಅಧಿಕಾರಿಗಳಿಗೆ ಫೋನಾಯಿಸಿ ದುಡ್ಡು ಆರೇಂಜ್ ಮಾಡುವಂತೆ ಕೇಳಿಕೊಂಡಿದ್ದಾನಂತೆ. ಕೊನೆಗೆ ಬ್ರೋಕರ್ ಹಾಗೂ ಮೂಡ ಸಿಬ್ಬಂದಿಗಳು ಸೇರಿ ಲಕ್ಷ ರೂಪಾಯಿ ವಂತಿಗೆ ಮಾಡಿ ಕಳುಹಿಸಿಕೊಟ್ಟಿದ್ದಂತೆ.

ಮೂಡದಲ್ಲಿ ನಾಲ್ವರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಈತ ವಾರಕ್ಕೆ ಕನಿಷ್ಠ 10,000 ರೂಪಾಯಿ ವಸೂಲಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾನಂತೆ! ಈ ನಾಮನಿರ್ದೇಶಿತ ಸದಸ್ಯನಿಗೆ, ಮೂಡದ ಎಬಿಸಿಡಿ ಗೊತ್ತಿಲ್ಲ. ಚಹಾ, ಬಿಸ್ಕತ್ತು ತಿನ್ನಲಷ್ಟೇ ಮೀಟಿಂಗ್ ಮಾಡುತ್ತಾರೆ. ಒಂದರ್ಥದಲ್ಲಿ ಇವರೆಲ್ಲ ರಬ್ಬರ್ ಸ್ಟ್ಯಾಂಪ್ ಗಳು. ತಾವು ಮೂಡದ ಸದಸ್ಯರಾಗಿದ್ದೇ ತಡ ಮುಖ್ಯಮಂತ್ರಿ ಆದವೆಂದು ಭಾವಿಸಿ ವಸೂಲಿ ಬಾಜಿಗೆ ಇಳಿದಿದ್ದಾನೆ ಬಿಸ್ಕಿಟ್ ಗಿರಾಕಿ!

ಮೂಡದಲ್ಲಿ ನಡೆಯುವ ಭ್ರಷ್ಟಾಚಾರ, ಬ್ರೋಕರ್ ಗಳ ಹಾವಳಿಯನ್ನು ತಡೆಯಬೇಕಿದ್ದ ಸದಸ್ಯ ಸ್ವತಹ ಬ್ರೋಕರ್ ಗಿರಿ ಕೆಲಸಕ್ಕೆ ಇಳಿದಿದ್ದು, ಬಡವರ ರಕ್ತ ಹೀರುತ್ತಿದ್ದಾನೆ. ಮೂಡದಲ್ಲಿ ವಸೂಲಿಗೆ ಇಳಿದಿರುವ ಸದಸ್ಯನೊಬ್ಬನ ಹೆಸರು ಈ ಹಿಂದೆ ಹನಿಟ್ರ್ಯಾಪ್ ಕೇಸಲ್ಲೂ ಕೇಳಿ ಬಂದಿತ್ತು. ಅಲ್ಲಿನ ನಾಗರೀಕರು ಈತನಿಗೆ ಘೆರಾವ್ ಹಾಕಿದ್ದರು. ಆದರೆ ಏನೋ ಪುಣ್ಯವೆಂಬಂತೆ ಎಫ್ ಐ ಆರ್ ನಲ್ಲಿ ಈತನ ಹೆಸರು ಇರಲಿಲ್ಲ. ಸ್ವಲ್ಪ ಜಾರಿಕೊಂಡ.

ಮೂಡದಲ್ಲಿ ದಲ್ಲಾಳಿಯೊಬ್ಬ ದಸ್ತಾವೇಜು ತಿದ್ದಿ ಸುದ್ಧಿಯಾದ ನಂತರ ಮೂಡಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಅರ್ಜಿಗೆ ಹಿಂಬರಹ ಕೊಟ್ಟು ಕಳುಹಿಸುತ್ತಾರೆ. ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಈ ಪುಣ್ಯಾತ್ಮ ಮಹಾಶಯ ಅಧ್ಯಕ್ಷರಲ್ಲಿ ಹೇಳುತ್ತಾ ಇದ್ದಾನಂತೆ. ಈಗ ಇರುವ ರೀತಿಯಲ್ಲೇ ಇರಲಿ. ಸಾರ್ವಜನಿಕರು ಯಾರನ್ನು ಒಳಗೆ ಬಿಡುವುದು ಬೇಡ. ಹೀಗೆಯೇ ಇದ್ದರೆ ನಾವು ಸಖತ್ ದುಡ್ಡು ಮಾಡಬಹುದು. ಇವರೆಲ್ಲ ಜನರ ಸೇವೆ ಮಾಡುವುದಕ್ಕಾ ಅಥವಾ ತಾವು ವಸೂಲಿ ಮಾಡಿ ದುಂಡಗೆ ಬೆಳೆಯಲು ಸದಸ್ಯರಾಗಿರುವುದಾ..?

ಮೂಡ ಸದಸ್ಯರ ಸುಲಿಗೆ ಕಂಡು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇವರನ್ನು ಇಲ್ಲಿ ಮೇಯಲು ಬಿಟ್ಟಿದ್ದಾರೆ. ಮೂಡ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಇವರಿಗೆ ಮೇವು ಕೊಡಬೇಕಂತೆ. ಎಂತಹ ವಿಚಿತ್ರ ಅಲ್ವ. ಒಬ್ಬೊಬ್ಬ ಅಧಿಕಾರಿಗಳು ತಿಂಗಳ ಬಾಬ್ತು ಈತನಿಗೆ 500 ರಂತೆ ಸಂದಾಯ ಮಾಡಬೇಕಂತೆ!

ಈ ಸದಸ್ಯನ ಸುಲಿಗೆ ದಂಧೆಗೆ ವಕೀಲರೊಬ್ಬರು ಸಾಥ್ ಕೊಡುತ್ತಿದ್ದಾರಂತೆ. ಇಲ್ಲಿಯೇ ತರಬೇತಿ ಪಡೆಯುವುದಂತೆ. ವಿಶೇಷ ಜಿಲ್ಲಾಧಿಕಾರಿಯ ಹಳೆಯ ಭೂ ಪರಿವರ್ತನೆಯನ್ನು ತಯಾರಿಸುತ್ತಾರೆ. ಸರಕಾರದ ಬೊಕ್ಕಸಕ್ಕೆ ಬರುವಂತಹ ಅಭಿವೃದ್ಧಿ ಶುಲ್ಕವನ್ನು ಪಾವತಿಸದಂತೆ ಭೂ ಪರಿವರ್ತನೆ ತಿದ್ದುತ್ತಾರೆ. ಮೂಡದ ಕಡತಗಳಲ್ಲಿ ಏರುಪೇರು ನಡೆಸಿ ಸಖತ್ತು ದುಡ್ಡು ಗಳಿಸುತ್ತಿದ್ದಾರೆ. ಇಲ್ಲಿ ನಕಲಿ ಡಾಕ್ಯುಮೆಂಟ್ ಗಳು ಕೂಡಾ ತಯಾರಾಗುತ್ತಿದೆಯಂತೆ. ಬಾಕಿ ಮುಂದಕ್ಕೆ ನೋಡೋಣ.