ಬಜರಂಗದಳ ರೌಡಿ ಗೆ ‘ಮನ್ನಾ’.. ಕಾಂಗ್ರೆಸ್ ರೌಡಿಗೆ ‘ಕೋಳ’.. ಇನ್ಸ್ ಪೆಕ್ಟರ್ ನಡೆಯ ವಿರುದ್ಧ ಕೆರಳಿ ಕೆಂಡವಾಗಿದ್ದ ಕಾಂಗ್ರೆಸ್ ನಾಯಕರು..!
ರಾಜ್ಯದಾದ್ಯಂತ ತೀವ್ರ ಸಂಚಲನವನ್ನೇ ಸೃಷ್ಟಿಸಿದ್ದ, ಮುಖ್ಯಮಂತ್ರಿ ಮಂಗಳೂರು ಭೇಟಿಯ ಸಮಯದಲ್ಲಿ ಮಟ ಮಟ ಮಧ್ಯಾಹ್ನವೇ ಉಳ್ಳಾಲ ತಾಲೂಕಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಗೆ ದರೋಡೆಕೋರರು ನುಗ್ಗಿ 15 ಕೋಟಿ ಲಪಟಾಯಿಸಿ ಎಸ್ಕೇಪ್ ಆಗಿದ್ದರು. ಈ ಘಟನೆ ರಾಜ್ಯ ಸರಕಾರಕ್ಕೆ ತೀವ್ರ ಮುಜುಗರವನ್ನು ಸೃಷ್ಟಿಸಿತ್ತು. ಉತ್ತರ ಪ್ರದೇಶ, ಬಿಹಾರದಲ್ಲಿ ಕೇಳಿ ಬರುತ್ತಿದ್ದ ಇಂತಹ ಮಾದರಿಯ ದರೋಡೆ ಕೃತ್ಯ ಬುದ್ಧಿವಂತರ ಜಿಲ್ಲೆಯಲ್ಲೂ ನಡೆದಿರುವುದು ನಾಗರೀಕರನ್ನು ಬೆಚ್ಚಿಬೀಳಿಸಿತ್ತು. ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ಬಗ್ಗೆಯೂ ತೀವ್ರ ಚರ್ಚೆಯನ್ನು ಹುಟ್ಟು ಹಾಕಿತ್ತು.
ಕೋಟೆಕಾರ್ ಬ್ಯಾಂಕ್ ದರೋಡೆ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು. ಮಹಜರು ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿಗಳಿಗೆ ಶೂಟೌಟ್ ಕೂಡ ನಡೆದಿತ್ತು. ಆದರೆ ಪ್ರಕರಣದಲ್ಲಿ ಸ್ಥಳೀಯರನ್ನು ರಕ್ಷಿಸಲಾಗುತ್ತಿದೆ ಅನ್ನುವ ಆರೋಪಗಳು ಪೊಲೀಸ್ ಇಲಾಖೆಯ ಮೇಲೆ ಕೇಳಿ ಬಂದಿತ್ತು. ಕೋಟೆಕಾರ್ ಕೋಟಿ ರಾಬ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ವೈಫಲ್ಯ ಎದ್ದು ಕಾಣುತ್ತಿತ್ತು. ದರೋಡೆಕೋರರನ್ನು ಬಂಧಿಸಬೇಕಾದರೆ ಖರ್ಚಿಗೆ ಐದು ಲಕ್ಷ ರೂಪಾಯಿ ನೀಡುವಂತೆ ಬ್ಯಾಂಕಿನವರಲ್ಲಿ ಇನ್ಸ್ ಪೆಕ್ಟರ್ ಬಾಲಕೃಷ್ಣ ಪೀಡಿಸಿದ್ದರು ಅನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಬಗೆಗಿನ ದೂರುಗಳು ಸ್ಪೀಕರ್ ಯು.ಟಿ ಖಾದರ್ ಅವರಿಗೂ ತಲುಪಿತ್ತು. ಇನ್ಸ್ ಪೆಕ್ಟರ್ ಅವರ ಇಂತಹ ನಡವಳಿಕೆಯಿಂದ ಸ್ಥಳೀಯ ಶಾಸಕರು, ಸ್ಪೀಕರ್ ಆಗಿರುವ ಖಾದರ್ ಅವರಿಗೂ ತೀವ್ರ ಇರಿಸು ಮುರುಸನ್ನು ತರಿಸಿತ್ತು. ಇನ್ಸ್ ಪೆಕ್ಟರ್ ಬಾಲಕೃಷ್ಣ ಎತ್ತಂಗಡಿ ಪಕ್ಕಾ ಎಂದೇ ಹೇಳಲಾಗಿತ್ತು. ಇದೀಗ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ದೀರ್ಘ ಕಾಲದ ರಜೆ ನೀಡಿ ಕಳುಹಿಸಿಕೊಡಲಾಗಿದೆ ಅನ್ನುವ ಸುದ್ದಿ ಹೊರಬಿದ್ದಿದೆ.

ಇನ್ಸ್ ಪೆಕ್ಟರ್ ಬಾಲಕೃಷ್ಣ ಈ ಹಿಂದೆ ಮೈಸೂರಿನ ಗುಂಡ್ಲುಪೇಟೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅಲ್ಲಿಯೂ ಅಮಾನತು ಆಗಿದ್ದರು ಅನ್ನುವ ಸುದ್ದಿ ಇದೆ. ಉಳ್ಳಾಲ ತಾಲೂಕಿನಾದ್ಯಂತ ನಡೆಯುತ್ತಿದ್ದ ಸಮಾಜ ಬಾಹಿರ ಕೃತ್ಯಗಳು, ಧೋ ನಂಬರ್ ದಂಧೆಗೆ ಪ್ರೋತ್ಸಾಹ ನೀಡುತ್ತಿದ್ದಾರಂತೆ. ಬೈರಾಸ್, ಮಟ್ಕಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮಂತ್ಲಿ ಮಾಮೂಲು ಪಡೆಯುತ್ತಿದ್ದಾರಂತೆ. ಸಾರ್ವಜನಿಕರು ಸಮಾಜಬಾಹಿರ ದಂಧೆಯ ವಿರುದ್ಧ ದೂರಿತ್ತರೂ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಅನ್ನುವ ಆರೋಪಗಳು ಇವರ ಮೇಲಿದೆ.
ಮೇಲ್ನೋಟಕ್ಕೆ ಕೋಟೆಕಾರ್ ಬ್ಯಾಂಕ್ ದರೋಡೆ ನಿರ್ಲಕ್ಷ್ಯಕ್ಕೆ ಇನ್ಸ್ ಪೆಕ್ಟರ್ ತಲೆದಂಡವಾಗಿದೆ ಅನ್ನಲಾಗುತ್ತಿದ್ದರೂ ಇದರ ಹಿಂದೆ ಬೇರೆಯದ್ದೇ ಕಾರಣವಿದೆಯಂತೆ. ಇನ್ಸ್ ಪೆಕ್ಟರ್ ಕಾರ್ಯ ನಿರ್ವಹಣೆ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದರು. ಇಲ್ಲಿಂದ ಎತ್ತಂಗಡಿ ಮಾಡುವಂತೆ ನಾಯಕರಲ್ಲಿ ಒತ್ತಡ ಹಾಕುತ್ತಿದ್ದಾರಂತೆ. ಇತ್ತೀಚೆಗೆ ತಲಪಾಡಿ ಟೋಲ್ ಗೇಟ್ ಬಳಿ ಶೆಟ್ಟಿ ಎಂಬಾತನೊಬ್ಬನಿದ್ದ. ಆತ ಬಜರಂಗದಳ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ. ಆತನ ಹೆಸರಿನಲ್ಲಿ ರೌಡಿ ಶೀಟರ್ ತೆರೆದಿತ್ತು. ಆದರೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಆತನನ್ನು ರೌಡಿ ಶೀಟರ್ ಪಟ್ಟಿಯಿಂದ ಹೆಸರು ತೆಗೆದು ಬಿಟ್ಟಿದ್ದರು. ಆದರೆ ಶೆಟ್ಟಿ ಹೆಸರಿನ ಮತ್ತೊಬ್ಬ ರೌಡಿ ಶೀಟರ್ ಇದ್ದ. ಆತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ. ಆದರೆ ಆತನನ್ನು ರೌಡಿ ಶೀಟರ್ ಪಟ್ಟಿಯಲ್ಲಿ ಹಾಗೆಯೇ ಉಳಿಸಿದ್ದರು. ಇನ್ಸ್ ಪೆಕ್ಟರ್ ಪಕ್ಷಪಾತೀಯವಾಗಿ ವರ್ತಿಸುತ್ತಿದ್ದಾರೆ. ಬಜರಂಗದಳ ಕಾರ್ಯಕರ್ತನಿಗೆ ಒಂದು ನ್ಯಾಯ, ಕಾಂಗ್ರೆಸ್ ಕಾರ್ಯಕರ್ತನಿಗೆ ಇನ್ನೊಂದು ನ್ಯಾಯನಾ? ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಕೆರಳಿ ಕೆಂಡವಾಗಿದ್ದರು. ಇದೀಗ ಕೋಟೆಕಾರ್ ಬ್ಯಾಂಕ್ ದರೋಡೆಯಲ್ಲಿ ಹಣಕ್ಕಾಗಿ ಪೀಡಿಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ಅಮಾನತು ಮಾಡುವಂತೆ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಾಯಕರು ಸೂಚಿಸಿದ್ದರು. ಹಿರಿಯ ಅಧಿಕಾರಿಗಳು ಇನ್ಸ್ ಪೆಕ್ಟರ್ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಅದು ಫಲಪ್ರದವಾಗಿಲ್ಲ. ಇದೀಗ ಒಂದು ತಿಂಗಳ ದೀರ್ಘ ರಜೆಯ ಮೇಲೆ ಕಳುಹಿಸಿಕೊಡಲಾಗಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.
