ಪ್ರತಿಭಟನಾ ರಹಿತ ಪರಿಹಾರೋಪಾಯ ಸಾಧ್ಯವೇ.?
ವಕ್ಫ್ ತಿದ್ದುಪಡಿ ಮಸೂದೆ 2024 ವರದಿಯನ್ನು ಸಂಸದೀಯ ಜಂಟಿ ಸಮಿತಿಯು ಲೋಕಸಭಾ ಸ್ಪೀಕರ್ ಅವರಿಗೆ ನೀಡಿರುವ ಹಿನ್ನಲೆಯಲ್ಲಿ 944 ಪುಟಗಳಿರುವ ವರದಿಯನ್ನು ಓದಿ ಅರ್ಥೈಸಿ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವ ಮತ್ತು ಕೆಲವೊಂದು ವಿವಾದಾತ್ಮಕ ತಿದ್ದುಪಡಿಗಳ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ಪ್ರಯತ್ನಗಳ ಭಾಗವಾಗಿ ಚರ್ಚೆ ಮತ್ತು ವಿಚಾರ ಗೋಷ್ಠಿಗಳು ನಡೆಯಬೇಕಾಗಿದೆ.
ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ದ ಮುಸ್ಲಿಂ ಕಮಿಟಿಯೊಂದು ಇತ್ತೀಚೆಗೆ ಮಂಗಳೂರಿನಲ್ಲಿ ಈ ಬಗ್ಗೆ ಸಭೆಯೊಂದನ್ನು ಕರೆದಿತ್ತು. ಗಮನಾರ್ಹ ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಅಲ್ಲಿ ಸೇರಿದ್ದರು.
ಸಭೆಯಲ್ಲಿ ಜಮಾತೆ ಇಸ್ಲಾಮಿ ಸಂಘಟನೆಯ ನಾಯಕರೊಬ್ಬರು ಬಹಳ ಅರ್ಥ ಪೂರ್ಣವಾಗಿ ಅಖಿಲ ಭಾರತ ಮಟ್ಟದಲ್ಲಿ ಮುಸ್ಲಿಮರ ಅಧಿಕೃತ ಸಂಸ್ಥೆಯೆಂದು ಸ್ವಯಂ ಘೋಷಿಸಿಕೊಂಡ ಸಂಸ್ಥೆಯೊಂದರ ನಿರ್ದೇಶನದಂತೆ ಮುಂದಿನ ಕ್ರಮಕ್ಕೆ (ಪ್ರತಿಭಟನೆಗೆ!) ಸಜ್ಜಾಗುವುದು ಉತ್ತಮ ಎಂಬ ಅಭಿಪ್ರಾಯ ನೀಡಿದರು (ಆ ಸಂಸ್ಥೆಯ ಕೆಲವೊಂದು ಅಸಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡೆಗಳಿಗೆ ವಿರೋಧವಿದೆ.)

ಸಮಾಜದ ವಿವಿಧ ಸ್ತರಗಳಲ್ಲಿ ಗುರುತಿಸಿಕೊಂಡಿರುವವರು ಮಿಶ್ರ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ಆ ಸಭೆಯಲ್ಲಿ ನೀಡಿದರಾದರೂ.. ಹೆಚ್ಚಿನ ಒಲವು ಮತ್ತು ಆಸಕ್ತಿ NRC/CAA ಮಾದರಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವತ್ತ ಹೆಚ್ಚು ಆಸಕ್ತಿ ವೇಧ್ಯವಾಗುತ್ತಿತ್ತು.
ಪ್ರತಿಭಟನೆಯ ಮೂಲಕ ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಮೊಟಕುಗೊಳಿಸಬಹುದು ಎಂಬ ಕಲ್ಪನೆ ಪ್ರಾಯೋಗಿಕವಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಾಮಾಣಿಕತೆಯೊಂದಿಗೆ ವರದಿಯನ್ನು ಸಂಪೂರ್ಣ ಓದಿ ಅರ್ಥೈಸಿದರೆ, ವಕ್ಫ್ ಮಂಡಳಿಗಳಲ್ಲಿ ಯಥೇಚ್ಛವಾಗಿ ತಿಂದು ತೇಗುವ ತಿಮಿಂಗಿಲಗಳನ್ನು ಒಂದಷ್ಟು ನಿಯಂತ್ರಿಸುವ ಅಸ್ತ್ರವಾಗಿ ತಿದ್ದುಪಡಿ
ಮಸೂದೆಯು ಸಹಾಯಕವಾಗುವಂತೆ ಕಂಡುಬರುತ್ತದೆ .
ವಕ್ಫ್ ನಾಮ, ವಾಕಿಫ್, ಮುತವಲ್ಲಿ ಎಂಬಿತ್ಯಾದಿ.. ಪರಿಕಲ್ಪನೆಗಳಿಲ್ಲದ ವಕ್ಫ್ ಕಾಯಿದೆಯ ವ್ಯಾಪ್ತಿಗೆ ತಂದ ಧಾರ್ಮಿಕ ಸ್ಥಳಗಳಾದ ಮಸೀದಿ, ದಫನ ಭೂಮಿ ಹಾಗು ಇನ್ನಿತರ ವಕ್ಫ್ ಎಂದು ಗುರುತಿಸಲಾದ ಸ್ಥಳಗಳನ್ನು ಸರಕಾರಿ ಜಮೀನುಗಳ ಒತ್ತುವರಿ ಎಂಬ ವ್ಯಾಖ್ಯಾನ ಮತ್ತು ನಿರ್ಧರಣೆಗಳಿಗೆ ಪೂರಕವಾಗುವಂತೆ ಅತ್ಯಂತ ವಿವಾದಿತ ತಿದ್ದುಪಡಿ “WAQF BY USER” ಎಂಬ ನಿಭಂದನೆಯ ರದ್ದುಪಡಿಸುವಿಕೆಯು ಆಘಾತಕಾರಿಯಾಗಲಿದೆ.
NRC/CAA ಕಾಯಿದೆಗಳ ಅನುಷ್ಠಾನವನ್ನು ವ್ಯಕ್ತಿಯು ದೇಶವೊಂದರಲ್ಲಿ ವಾಸಿಸಲು ಅವಶ್ಯಕವಾದ ಪೌರತ್ವ ದಾಖಲೆಗಳಿಗಾಗಿ ಉದ್ದೇಶಿಸಲಾಗಿತ್ತು. “ವಕ್ಫ್ ಬೈ ಯೂಸರ್” ನಿಭಂದನೆಯ ರದ್ದುಪಡಿಸುವಿಕೆಯು ಧಾರ್ಮಿಕ ಸ್ಥಳಗಳ ಮಾಲಕತ್ವದ (ಟೈಟಲ್) ದಾಖಲೆಗಳ ಧೃಢೀಕರಣಕ್ಕಾಗಿ ಹುಟ್ಟುಹಾಕಲಾಗಿದೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ವಕ್ಫ್ ಪರಿಕಲ್ಪನೆಗಳಿಲ್ಲದೆ ವಕ್ಫ್ ಎಂದು ಗುರುತಿಸಲಾದ ಆಸ್ತಿಗಳ ರಕ್ಷಣೆಗೆ ಪ್ರತಿಭಟನಾ ರಹಿತ ಪರಿಹಾರೋಪಾಯ ಮಾರ್ಗಗಳನ್ನು ಕಂಡುಕೊಳ್ಳಲು ಮುಸ್ಲಿಂ ಸೆಂಟ್ರಲ್ ಕಮಿಟಿಯು ತನ್ನೊಳಗೆ ವಕ್ಫ್ ವಿಷಯಗಳಲ್ಲಿ ಪರಿಣತಿಯಿರುವ ನ್ಯಾಯವಾದಿಗಳು, ಇಸ್ಲಾಮಿಕ್ ವಿದ್ವಾಂಸರು , ವಿಷಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರುವ ಬುದ್ಧಿಜೀವಿ ಚಿಂತಕರ ಮಂಡಳಿಯೊಂದನ್ನು (Board) ರಚಿಸಿದರೆ.., ನಮ್ಮ ಪರಿಚಯವೇ ಇಲ್ಲದ ದೂರದ ದೆಹಲಿಯ ಬೋರ್ಡಿನ ನಿರ್ದೇಶನಗಳಿಗೆ ಕಾಯುವ ಅವಕಾಶವಿರಲಾರದು.
