ಬೆಳ್ತಂಗಡಿ: ಮಡಿವಾಳ ಕುಟುಂಬದ ಪಡಿತರ ಚೀಟಿಯಲ್ಲಿ ಬಂಟ ಸಮುದಾಯದ ಹೆಸರು ಸೇರ್ಪಡೆ..!

ಕರಾವಳಿ

ವಿಕಲಚೇತನ ಹೆಸರಿನಲ್ಲಿ ಮಂಜೂರಾಗಿರುವ ನ್ಯಾಯಬೆಲೆ ಅಂಗಡಿ ಮುಕ್ಕಲು ಷಡ್ಯಂತ್ರ.. ಆಹಾರ ಇಲಾಖೆ ಅಧಿಕಾರಿಗಳು ಸಾಥ್.

ಬೆಳ್ತಂಗಡಿ ತಾಲೂಕಿನ ಕೋಡಿಬೆಟ್ಟು ನಿವಾಸಿಯಾಗಿರುವ ತ್ಯಾಂಪಣ್ಣ ಮಡಿವಾಳರ ಪತ್ನಿಯಾಗಿರುವ ಅಮಿತಾ ಎಂಬವರು ನಂ. 110100157404 ನ ಆದ್ಯತಾ ಕುಟುಂಬಕ್ಕೆ ಮೀಸಲಾಗಿರುವ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದು, ಪಡಿತರ ಚೀಟಿಯಲ್ಲಿ ಅವರ ಮಗಳಾದ ಕೆ.ನಿಕ್ಷಿತಾ ಳ ಹೆಸರು ಇದೆ . ಕೆ. ನಿಕ್ಷಿತಾ ಎಂಬಾಕೆ ವಿಕಲಚೇತನಳಾಗಿದ್ದು , ಮನೆಯಲ್ಲಿಯೇ ಇರುತ್ತಾಳೆ. ಆಕೆಯ ಹೆಸರಿನಲ್ಲಿ 21 ಎಂವಿಎಸ್ಎಸ್ ಗುರುವಾಯನಕೆರೆ ನ್ಯಾಯಬೆಲೆ ಅಂಗಡಿಯ ಪರವಾನಗಿ ಇರುತ್ತದೆ. ವಿಕಲಚೇತನಳಾದ ಆಕೆಗೆ ನ್ಯಾಯಬೆಲೆ ಅಂಗಡಿಯನ್ನು ನಡೆಸಲು ಅಸಾಧ್ಯವಾದರಿಂದ ಪರಿಚಯಸ್ಥರೇ ಆಗಿರುವ ತನ್ನದೇ ಗ್ರಾಮದ ಸುಮ ಪ್ರಭಾಕರ್ ಎಂಬವರು ಕೆ.ನಿಕ್ಷಿತಾಳ ಹೆಸರಿನಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ತನ್ನ ಗಂಡ ಪ್ರಭಾಕರ ಶೆಟ್ಟಿಯವರ ಹೆಸರಿನಲ್ಲಿರುವ ಅಂಗಡಿ ಕೋಣೆಯಲ್ಲಿ ನಡೆಸುತ್ತಿದ್ದು, ಈ ಮಧ್ಯೆ ವಿಕಲಚೇತನಳಾಗಿರುವ ಕೆ.ನಿಕ್ಷಿತಾಳ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡ ಸುಮ ಪ್ರಭಾಕರ್ ಮತ್ತು ಪ್ರಭಾಕರ ಶೆಟ್ಟಿ ಎಂಬವರು ಕಾನೂನು ಬಾಹಿರವಾಗಿ ಸರ್ಕಾರಕ್ಕೆ ಮತ್ತು ವಿಕಲಚೇತನಳಾಗಿರುವ ಕೆ. ನಿಕ್ಷಿತಾಳಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮಿತಾ ಮಡಿವಾಳ ಅವರ ಮನೆಯ ಪಡಿತರ ಚೀಟಿಯಲ್ಲಿ ಸುಮ ಪ್ರಭಾಕರ್ ಅವರ ಹೆಸರನ್ನು ಸೇರ್ಪಡೆಗೊಳಿಸಿ ಸರ್ಕಾರದ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ. ಇದರಿಂದಾಗಿ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ವಿಕಲಚೇತನರ ಕುಟುಂಬವನ್ನು ವಂಚಿಸಿ ದುರುಪಯೋಗ ಮಾಡಿಕೊಂಡಿದ್ದಾರೆ. ವಿಕಲಚೇತನ ಕೆ. ನಿಕ್ಷಿತಾಳ ಹೆಸರಿನಲ್ಲಿದ್ದ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ಸುಮ ಪ್ರಭಾಕರ್ ಅವರು ಪಡೆದುಕೊಂಡು ತನ್ನ ಗಂಡನ ಜೊತೆಗೆ ಸೇರಿಕೊಂಡು ಮೋಸ , ವಿಶ್ವಾಸದ್ರೋಹ ಮಾಡುವ ಮತ್ತು ಸರ್ಕಾರಕ್ಕೆ ವಂಚಿಸುವ ಸಮಾನ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ಈಗ ಆರೋಪಿಸಲಾಗಿದೆ.

ವಿಕಲಚೇತನಳಾಗಿರುವ ನಿಕ್ಷಿತಾಳಿಗೆ ಮಂಜೂರುಗೊಂಡಿರುವ ಪಡಿತರ ಅಂಗಡಿಯನ್ನು ನಡೆಸುತ್ತಿರುವ ಸುಮಾ ಪ್ರಭಾಕರ್ ರಾಜಕೀಯ ಹಿನ್ನೆಲೆ ಹಾಗೂ ಪ್ರಭಾವವನ್ನು ಹೊಂದಿದ್ದಾರೆ. ಸುಮ ಪ್ರಭಾಕರ್ ಗಂಡ ಪ್ರಭಾಕರ ಶೆಟ್ಟಿ ಬಿಜೆಪಿ ಪಕ್ಷದ ಸ್ಥಳೀಯ ನಾಯಕರಾಗಿದ್ದು, ತಾಲೂಕು ಪಂಚಾಯತಿನ ಮಾಜಿ ಸದಸ್ಯರು ಕೂಡ ಆಗಿದ್ದಾರೆ. ತಮ್ಮ ಪ್ರಭಾವ ಬಳಸಿ ಬೆಳ್ತಂಗಡಿ ಆಹಾರ ಇಲಾಖೆ ಅಧಿಕಾರಿಗಳ ಮುಖಾಂತರ ಮಡಿವಾಳ ಕುಟುಂಬಕ್ಕೆ ಸೇರಿದ ಪಡಿತರ ಚೀಟಿಯಲ್ಲಿ ಬಂಟ ಸಮುದಾಯಕ್ಕೆ ಸೇರಿದ ಇವರು ಸೇರ್ಪಡೆಗೊಳಿಸಿ ನ್ಯಾಯ ಬೆಲೆ ಅಂಗಡಿಯನ್ನೇ ಮುಂಡಾಮೋಚಲು ಮುಂದಾಗಿದ್ದಾರೆ.

ಬೆಳ್ತಂಗಡಿ ಆಹಾರ ಇಲಾಖೆಯ ಅಧಿಕಾರಿಗಳ ಶಾಮೀಲಾತಿ ಇರುವುದು ಕಂಡುಬಂದಿದೆ. ಪಡಿತರ ಚೀಟಿ ಅನ್ನುವುದು ಕುಟುಂಬಕ್ಕೆ ಸಂಬಂಧಿಸಿದ ದಾಖಲೆ. ಕುಟುಂಬದ ರಕ್ತ ಸಂಬಂಧಿಗಳನ್ನು ಪಡಿತರ ಚೀಟಿಯಲ್ಲಿ ಸೇರ್ಪಡೆಗೊಳಿಸಬಹುದು. ಆದರೆ ಕುಟುಂಬಿಕರೇ ಅಲ್ಲದ, ಜಾತಿಯಲ್ಲಿ ಬಂಟರಾಗಿರುವವರು ಮಡಿವಾಳ ಜಾತಿಯ ಪಡಿತರ ಚೀಟಿಯಲ್ಲಿ ಸೇರ್ಪಡೆಗೊಳಿಸಿರುವುದು ಯಾವ ನ್ಯಾಯ.? ಇದು ಬೆಳ್ತಂಗಡಿ ಆಹಾರ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆದಿರುವುದಕ್ಕೆ ಸಾಕ್ಷಿ ಅಲ್ಲವೇ.. ಪ್ರಭಾವಿಗಳ ಜೊತೆ ಆಹಾರ ಇಲಾಖೆಯ ಆಧಿಕಾರಿಗಳು ಕೈ ಜೋಡಿಸಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಬಗ್ಗೆ ಸ್ಥಳೀಯರಾದ ಮೋಹನ್ ಶೆಟ್ಟಿ ಎಂಬವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಬೆಳ್ತಂಗಡಿ ಪೊಲೀಸ್ ಠಾಣೆಗೆ ನಿರ್ದೇಶನ ನೀಡುವಂತೆ ದೂರಿನಲ್ಲಿ ತಿಳಿಸಲಾಗಿದೆ.