ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿಟ್ಲದ ಸುಂದರ ನಾಯ್ಕರದ್ದು. ಸ್ಪೆಷಲ್ ನ್ಯೂಸ್ ವರದಿ ನಿಜವಾಯಿತು.
ವಿಟ್ಲದ ಖಾಸಗಿ ಬಸ್ ಸ್ಟ್ಯಾಂಡ್ ಹಿಂಬದಿಯ ಪಾಳುಬಿದ್ದ ಕೆರೆಯಲ್ಲಿ ಪತ್ತೆಯಾದ ಪುರುಷನ ಮೃತದೇಹ ಯಾರದ್ದು ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.
ಆರು ತಿಂಗಳ ಹಿಂದೆ ನವರಾತ್ರಿ ಹಬ್ಬದ ಸಂದರ್ಭ ನಾಪತ್ತೆಯಾದ ವೇಷಧಾರಿ ಸುಂದರ ನಾಯ್ಕ ಎಂಬವರು ಮೃತಪಟ್ಟ ವ್ಯಕ್ತಿ.
ವಿಟ್ಲ ಕಸಬಾ ಗ್ರಾಮದ ಪಳಿಕೆ ನಿವಾಸಿ ಸುಂದರ ನಾಯ್ಕ ನವರಾತ್ರಿ ದಿನದಂದು ವೇಷ ಹಾಕಲು ಪರವಾನಿಗೆ ಪಡೆದು ಬರುತ್ತೇನೆಂದು ಹೇಳಿ ಹೋದವರು ಮರಳಿ ಬಂದಿಲ್ಲ ಎಂದು ಪತ್ನಿ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರು ತಿಂಗಳ ಕಾಲ ಜಿಲ್ಲೆಯಾದ್ಯಂತ ಹುಡುಕಾಡಿದ್ದರೂ ಸುಂದರ ನಾಯ್ಕ ಪತ್ತೆಯಾಗಿಲ್ಲ. ಶುಕ್ರವಾರ ಸಂಜೆ ವಿಟ್ಲ ಖಾಸಗಿ ಬಸ್ ಸ್ಟ್ಯಾಂಡ್ ಹಿಂಬದಿಯ ಪಾಳುಬಿದ್ದ ಕೆರೆಯಲ್ಲಿ ಪುರುಷನ ಮೃತದೇಹದ ಗುರುತು ಹಿಡಿಯಲಾರದ ಸ್ಥಿತಿಯಲ್ಲಿ ಅವಶೇಷಗಳು ಪತ್ತೆಯಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡದ ಅಧಿಕಾರಿಗಳು ಮೃತದೇಹದ ಅವಶೇಷಗಳನ್ನು ಉನ್ನತ ತನಿಖೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದರು. ಶನಿವಾರ ಬೆಳಗ್ಗೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಾಪತ್ತೆಯಾಗಿದ್ದ ಮೂರು ವ್ಯಕ್ತಿಗಳ ಮನೆಯವರನ್ನೂ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದರು. ಆ ಸಂದರ್ಭ ಮೃತ ವ್ಯಕ್ತಿಯ ದೇಹದ ಭಾಗಗಳಿಗೂ ಸುಂದರ ನಾಯ್ಕರ ಕುಟುಂಬಸ್ಥರಿಗೂ ಸಂಬಂಧ ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಮೃತದೇಹದ ಅವಶೇಷಗಳನ್ನು ಪೊಲೀಸರ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಮುರಳೀಧರ ನೇತೃತ್ವದ ಫ್ರೆಂಡ್ಸ್ ವಿಟ್ಲ ಸಂಘಟನೆಯ ನೇತೃತ್ವದಲ್ಲಿ ಸುಂದರ ನಾಯ್ಕರ ಕುಟುಂಬಸ್ಥರ ಸಮ್ಮುಖದಲ್ಲಿ ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
