ಬಿಜೆಪಿ ಮುಖಂಡನಿಂದ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೋ ಪ್ರಕರಣ ದಾಖಲು, ಆರೋಪಿ ನಾಪತ್ತೆ

ರಾಜ್ಯ

ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ದ.ಕ ಜಿಲ್ಲೆಯ ಬಿಜೆಪಿ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಬಂಟ್ವಾಳ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ ಆಗಿರುವ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಗುಸು ಗುಸು ಕೇಳಿ ಬಂದಿವೆ.

ಅಪ್ರಾಪ್ತ ದಲಿತ ಬಾಲಕಿಗೆ ಸುಳ್ಳು ಆಮಿಷ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾಗಿ ಆರೋಪಿ ಪ್ರಯತ್ನಿಸಿದ್ದ ಎಂಬ ಮಾಹಿತಿಯೂ ಕೇಳಿಬಂದಿದೆ. ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕನೂ ಆಗಿರುವ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬ ವ್ಯಕ್ತಿ ಜಿಲ್ಲಾ ವ್ಯಾಪ್ತಿಯಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದ ಎನ್ನಲಾಗಿದೆ.

ಇದೀಗ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮಹೇಶ್ ಭಟ್ ತಲೆಮರೆಸಿಕೊಂಡಿದ್ದಾನೆ. ಬಾಲಕಿಯ ಪೋಷಕರು ಆರೋಪಿಯ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ, ಕಳೆದ ಜನವರಿ ತಿಂಗಳಲ್ಲಿ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗುತ್ತಿದೆ.

ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗಿರಲಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದರೂ ಯಾಕೆ ಶಾಲೆಗೆ ಬಂದಿಲ್ಲವೆಂದು ಶಾಲೆಯ ಶಿಕ್ಷಕರು ವಿಚಾರಿಸುವ ಸಲುವಾಗಿ ಆಕೆಯ ಮನೆಗೆ ತೆರಳಿದ್ದರು. ಈ ವೇಳೆ, ಬಾಲಕಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಶಿಕ್ಷಕರನ್ನು ನೋಡಲು ಬಿಟ್ಟಿರಲಿಲ್ಲ. ಆರೋಪಿ ಮಹೇಶ್ ಭಟ್ ರಾಜಕೀಯ ಪ್ರಭಾವದ ಕಾರಣಕ್ಕೆ ಶಿಕ್ಷಕರಿಗೆ ಬಾಲಕಿಯ ಭೇಟಿಗೂ ಅವಕಾಶ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ವಿಷಯ ಪೊಲೀಸ್ ಠಾಣೆಗೆ ತಿಳಿದು ವಿಟ್ಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಮೇಲ್ನೋಟಕ್ಕೆ ಈ ಪ್ರಕರಣ ಹಾದಿ ತಪ್ಪುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಯಾಕೆಂದರೆ ಪೊಲೀಸರು ಪ್ರಕರಣ ದಾಖಲಿಸಿರುವುದೂ ಸಹ ತೀರಾ ಗಂಭೀರವಾಗಿ ವಿಷಯ ದಾಖಲಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.