ಡಿವೈಎಸ್ಪಿ, ಪಿಎಸ್ಐ ಹೆಸರು ಬಳಸಿ ಹಣ ವಸೂಲಿ, ಸಿಸಿಬಿ ಪೊಲೀಸರ ತನಿಖೆಯಿಂದ ಬಹಿರಂಗ
ಉದ್ಯಮಿ ರಾಕೇಶ್ ವೈಷ್ಣವ್ ಎಂಬುವರನ್ನು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಿಕ್ಷಕಿ ಮತ್ತು ಆಕೆಯ ಪ್ರಿಯಕರ ಸೇರಿ ಮೂವರು ಆರೋಪಿಗಳು ಡಿವೈಎಸ್ಪಿ ಹಾಗೂ ಪಿಎಸ್ಐ ಹೆಸರು ಬಳಸಿಕೊಂಡಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಡಿವೈಎಸ್ಪಿ ಅರುಣ್ ಮತ್ತು ಪಿಎಸ್ಐ ಮುರಳಿ ಎಂಬುವರ ಹೆಸರು ಬಳಸಿಕೊಂಡಿದ್ದಾರೆ. ಆದರೆ, ಪ್ರಕರಣಕ್ಕೂ ಅಧಿಕಾರಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಸದ್ಯದ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮಹಾಲಕ್ಷ್ಮೀ ಲೇಔಟ್ ನಿವಾಸಿ ಶ್ರೀದೇವಿ ರೂಡಗಿ, ಆಕೆಯ ಪ್ರಿಯಕರ ಸಾಗರ್ ಮೊಳೆ, ಬಿಜಾಪುರ ಮೂಲದ ರೌಡಿಶೀಟರ್ ಗಣೇಶ್ ಕಾಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿಚಾರಣೆಯಲ್ಲಿ ಉದ್ಯಮಿ ರಾಕೇಶ್ ವೈಷ್ಣವ್ಗೆ 20 ಲಕ್ಷ ರೂ.ಗೆ ಒಪ್ಪಿಸಲಾಗಿತ್ತು. ಮುಂಗಡವಾಗಿ 2 ಲಕ್ಷ ರೂಪಾಯಿ ರಾಕೇಶ್, ಶ್ರೀದೇವಿ ಕೆಲಸ ಮಾಡುತ್ತಿದ್ದ ಶಾಲೆ ಬಳಿ ಕೊಟ್ಟಿದ್ದರು. ಬಾಕಿ ಹಣ ಕೊಟ್ಟಿರಲಿಲ್ಲ. ಆಗ ಪ್ರಿಯಕರ ಮತ್ತು ರೌಡಿಶೀಟರ್ನನ್ನು ಬೆಂಗಳೂರಿಗೆ ಕರೆಸಿಕೊಂಡು ಬೆದರಿಕೆ ಹಾಕಿಸಿದ್ದಳು. ಅಲ್ಲದೆ, ತನ್ನ ಜತೆಗಿನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ತೋರಿಸಿ ರಾಕೇಶ್ಗೆ ಬಾಕಿ ಹಣಕ್ಕೆ ಬೇಡಿಕೆ ಇರಿಸಿದ್ದಳು. ಈ ವೇಳೆ ನೀನು ಕೊಡುವ 5 ಲಕ್ಷ ರೂಪಾಯಿಯನ್ನು ಡಿವೈಎಸ್ಪಿ ಎಸ್. ಅರುಣ್ಗೆ ಕೊಡಬೇಕು. ಸಾಗರ್ ಮತ್ತು ಗಣೇಶ್ಗೆ ತಲಾ 1 ಲಕ್ಷ ರೂ. ಕೊಡಬೇಕು. ಬಾಕಿ ಹಣ ನಾನು ಇಟ್ಟುಕೊಳ್ಳುತ್ತೇನೆ ಎಂದಿದ್ದಳು. ಆ ಬಳಿಕ ಖಾಸಗಿ ವಿಡಿಯೋಗಳನ್ನು ಡಿಲೀಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂದು ರಾಕೇಶ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಸದ್ಯ ನಗರದಲ್ಲಿ ಡಿವೈಎಸ್ಪಿ ಅರುಣ್ ಮತ್ತು ಪಿಎಸ್ಐ ಮುರಳಿ ಎಂಬುವರು ಯಾರು ಇಲ್ಲ. ದೂರುದಾರ ರಾಜಸ್ಥಾನ ಮೂಲದವನಾಗಿದ್ದರಿಂದ ಆತನನ್ನು ಬೆದರಿಸಲು ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿ ಗಣೇಶ್ ವಿರುದ್ಧ ಬಿಜಾಪುರ ಠಾಣೆಯಲ್ಲಿ 9 ಅಪರಾಧ ಪ್ರಕರಣಗಳಿದ್ದು, ರೌಡಿಶೀಟರ್ ಆಗಿದ್ದಾನೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
