ಬೆಂಕಿಯಿಂದ ಬಾಣಲೆಗೆ ಬಿದ್ದೀತು ಜೋಕೆ.!

ಕರಾವಳಿ

ಉತ್ಸಾಹಿ, ಪಕ್ಷ ಸಂಘಟಿಸುವ, ಅಡ್ಜೆಸ್ಟ್ ಮೆಂಟ್ ಇಲ್ಲದವರಿಗೆ ಪಟ್ಟ ಕಟ್ಟಿ.. ಜಿಲ್ಲೆಯ ಕಾಂಗ್ರೆಸ್ ಕಾಪಾಡಿ.!

ಎರಡನೇ ಹಂತದ ನಾಯಕರಿಗೆ ಅಧಿಕಾರ ಭಾಗ್ಯ ಇನ್ಯಾವಾಗ..?

ಕಳೆದ ಆರೇಳು ವರ್ಷಗಳಿಂದ ಹರೀಶ್ ಕುಮಾರ್ ಅನ್ನುವ ಎಲ್ಲೂ ಸಲ್ಲದ ನಾಯಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಗೆ ಪಟ್ಟಾಭಿಷೇಕ ಮಾಡಿ ಪೂರ್ತಿ ಕಾಂಗ್ರೆಸ್ ನೆಲಕಚ್ಚಿದೆ. ಇನ್ನೇನೂ ಕಾಂಗ್ರೆಸ್ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುವುದೊಂದೇ ಬಾಕಿ. ಆದರೆ ಕೆಪಿಸಿಸಿ ಇದೀಗ ಎಚ್ಙೆತ್ತುಕೊಂಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಮುಂದಾಗಿದೆ. ಜಿಲ್ಲಾ ನಾಯಕರ ಅಭಿಪ್ರಾಯವನ್ನು ಪಡೆದಿದೆ. ಈಗಲಾದರೂ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿತ್ತಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಒಳಗೊಳಗೆ ಸಮಾಧಾನ ಪಡುತ್ತಿದ್ದಾರೆ.

ಹರೀಶ್ ಕುಮಾರ್ ನಂತರ ಅಧ್ಯಕ್ಷ ಪಟ್ಟ ಯಾರಿಗೆ.? ಈ ಬಗ್ಗೆ ಕಾಂಗ್ರೆಸ್ ನಾಯಕರೊಳಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹರೀಶ್ ಕುಮಾರ್ ನಂತರ ಆ ನಾಲ್ಕು ಹೆಸರುಗಳು ಮುಂಚೂಣಿಯಲ್ಲಿದೆ. ಆ ನಾಲ್ಕು ಹೆಸರುಗಳು ಕೇಳಿಯೇ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ಶಾಕ್ ಗೆ ಒಳಗಾಗಿದ್ದಾರೆ. ಕರಾವಳಿಯಲ್ಲಿ ಬಿಜೆಪಿ ಶಕ್ತಿಯನ್ನು ಮಣಿಸಲು ಯಾವುದೇ ಕರಾಮತ್ತು ತೋರಿಸದ, ತನ್ನ ವೈನ್ ಮಾಫಿಯಾ ಉದ್ಯಮ ಬೆಳೆಸಲು ಪಕ್ಷವನ್ನು ಉಪಯೋಗಿಸಿದ, ಬೆಳಿಗ್ಗೆ ಕಾಂಗ್ರೆಸ್, ರಾತ್ರಿ ಬಿಜೆಪಿಯೊಂದಿಗೆ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದರೆ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಜಿಲ್ಲಾಧ್ಯಕ್ಷರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾಧ್ಯಕ್ಷ ಹಠಾವೋ ಅಭಿಯಾನವನ್ನು ಕಾಂಗ್ರೆಸ್ ಕಾರ್ಯಕರ್ತರೇ ಆರಂಭಿಸಿದ್ದರು. ಜಿಲ್ಲಾಧ್ಯಕ್ಷ ಬದಲಾವಣೆಗೆ ಕೆಪಿಸಿಸಿ ಮುಂದಾಗಿರುವ ವಿಚಾರ ತಿಳಿದು ಇನ್ನು ಪಕ್ಷಕ್ಕೆ ಶುಕ್ರದೆಸೆ ಲಭಿಸಬಹುದು ಅಂದುಕೊಂಡರೆ ಈಗಿನ ಕೆಲವು ವಿಧ್ಯಮಾನಗಳನ್ನು, ಮುಂಚೂಣಿ ಆಕಾಂಕ್ಷಿಗಳ ಪಟ್ಟಿ ನೋಡುವಾಗ ಕಾಂಗ್ರೆಸ್ ಬೆಂಕಿಯಿಂದ ಬಾಣಲೆಗೆ ಬೀಳಬಹುದಾ ಅನ್ನುವ ಆತಂಕ ಎದುರಾಗಿದೆ. ಅಡ್ಜೆಸ್ಟ್ ಮೆಂಟ್ ರಾಜಕಾರಣಕ್ಕೆ ತೀಲಾಂಜಲಿ ಇಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸುತ್ತಿದ್ದರೂ, ಮತ್ತೆ ಅಡ್ಜಸ್ಟ್ ಮೆಂಟ್ ವೀರರಿಗೆ ಕಾಂಗ್ರೆಸ್ ಮಣೆ ಹಾಕುತ್ತಾ.? ಕೇವಲ ನಾಯಕರ ಅಭಿಪ್ರಾಯ ಕೇಳಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುತ್ತಾ.? ಕಾರ್ಯಕರ್ತರ ಅಭಿಪ್ರಾಯ ಕೇಳುವುದಿಲ್ಲ ಯಾಕೆ.? ಅನ್ನುವ ಮಾತುಗಳು ಕೇಳಿ ಬರತೊಡಗಿದೆ.

ಮೂಲಗಳ ಪ್ರಕಾರ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ತನಗೇ ಜಿಲ್ಲಾಧ್ಯಕ್ಷ ಸ್ಥಾನ ಬೇಕೆಂದು ಹಠ ಹಿಡಿದಿದ್ದಾರಂತೆ. ರಮಾನಾಥ ರೈ ಪೃಥ್ವಿರಾಜ್ ಎಡಪದವು ಅವರ ಹೆಸರು ಸೂಚಿಸಿದ್ದಾಗಿ, ಇನಾಯತ್ ಅಲಿ ಪೃಥ್ವಿರಾಜ್ ಮತ್ತು ಪದ್ಮರಾಜ್ ಹೆಸರು ಸೂಚಿಸಿರುವುದಾಗಿ ತಿಳಿದು ಬಂದಿದೆ. ಮಿಥುನ್ ರೈ ತನಗೆ ಅಧ್ಯಕ್ಷ ನೀಡಬೇಕೆಂದು, ಮಂಜುನಾಥ ಭಂಡಾರಿ ಹರೀಶ್ ಕುಮಾರ್ ಅವರನ್ನೇ ಮುಂದುವರಿಸುವಂತೆ ಮಲ್ಲಿಕಾರ್ಜುನ ಖರ್ಗೆ ಬಳಿ ಲಾಬಿ ನಡೆಸುತ್ತಿದ್ದಾರಂತೆ, ಉಳಿದಂತೆ ಶಶಿಧರ ಹೆಗ್ಡೆ, ಎಂ ಜಿ ಹೆಗ್ಡೆ, ಹೇಮನಾಥ ಶೆಟ್ಟಿ ಕಾವು, ಎಂ ಎಸ್ ಮುಹಮ್ಮದ್, ಮಮತಾ ಗಟ್ಟಿ, ಪ್ರತಿಭಾ ಕುಳಾಯಿ ಹೆಸರು ಜಿಲ್ಲಾಧ್ಯಕ್ಷ ರೇಸ್ ನಲ್ಲಿ ಕೇಳಿಬರುತ್ತಿದೆ. ಅದರಲ್ಲೂ ಐವನ್ ಡಿಸೋಜಾ, ಪದ್ಮರಾಜ್ ಪೂಜಾರಿ, ಶಶಿಧರ ಹೆಗ್ಡೆ, ಹರೀಶ್ ಕುಮಾರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಐವನ್ ಡಿಸೋಜಾ ಕ್ರೈಸ್ತ ಸಮುದಾಯಕ್ಕೆ ಮತ್ತು ಪ್ರಚಾರಕ್ಕೆ ಸೀಮಿತವಾಗಿರುವ ನಾಯಕ, ಜಿಲ್ಲೆಯಲ್ಲಿ ಇನ್ನಿತರ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆದಾಗ ತುಟಿಕ್ ಪಿಟಿಕ್ ಎನ್ನಲಿಲ್ಲ. ಕೇವಲ ಪ್ರಚಾರದ ಹಿಂದೆ ಹೋಗುವವರು ಪಕ್ಷ ಸಂಘಟನೆ ಇವರಿಂದ ಸಾಧ್ಯವಿಲ್ಲ. ಬಹುತೇಕ ಕ್ರೈಸ್ತ ಸಮುದಾಯವೇ ಇವರ ವಿರುದ್ಧವಿದೆ. ಇನ್ನು ಶಶಿಧರ ಹೆಗ್ಡೆ, ಪದ್ಮರಾಜ್ ಪೂಜಾರಿ ಬಿಜೆಪಿಯೊಂದಿಗೆ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುವವರು ಅನ್ನುವ ಆರೋಪವನ್ನು ಸ್ವತಹ ಕಾರ್ಯಕರ್ತರೇ ಆರೋಪಿಸುತ್ತಾರೆ. ಹೆಗ್ಡೆ ಮೇಯರ್ ಆಗಿದ್ದು ಬಿಟ್ಟರೆ, ಮುಂದೆ ನಡೆಸಿದೆಲ್ಲವೂ ಸ್ವ ಪಕ್ಷದ ನಾಯಕರ ವಿರುದ್ಧವೇ ತೆರೆಮರೆಯಲ್ಲಿ ಟೊಂಕ ಕಟ್ಟಿ ನಿಂತಿದ್ದು. ಪೂಜಾರಿ ವರ್ಷದ ಹಿಂದೆಯಷ್ಟೇ ಕಾಂಗ್ರೆಸ್ ಸೇರಿ ಎಂ.ಪಿ ಸ್ಥಾನಕ್ಕೆ ಸ್ಪರ್ಧಿಸಿದವರು. ಒಳಗೊಳಗೆ ನಾಯಕರ ವಿರುದ್ಧವೇ ಬುಸು ಗುಡುವವರು. ಇವರು ಯಾವಾಗ ಪಕ್ಷ ಚೇಂಜ್ ಮಾಡುತ್ತಾರೆ ಅನ್ನುವುದನ್ನು ಹೇಳಲಾಗದು. ಹರೀಶ್ ಕುಮಾರ್ ಕಾಂಗ್ರೆಸ್ ಗೆ ಶನಿಕಾಟ ಹಿಡಿಸಿದ್ದು ಗೊತ್ತೇ ಇದೆ.

ಉಳಿದವರಲ್ಲಿ ಪೃಥ್ವಿರಾಜ್, ಎಂ ಜಿ ಹೆಗ್ಡೆ, ಹೇಮನಾಥ ಶೆಟ್ಟಿ, ಪ್ರತಿಭಾ ಕುಳಾಯಿ ಬೆಸ್ಟ್ ಚಾಯಿಸ್. ಹೊಸ ಮುಖಗಳು. ಬಣ ರಾಜಕಾರಣಕ್ಕೆ ಸೆಡ್ಡು ಹೊಡೆದು ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಯೋಗ್ಯತೆ, ಪ್ರಾಮಾಣಿಕತೆ ಇರುವವರು. ಎಂ ಜಿ ಹೆಗ್ಡೆಯವರಂತೂ ಕೋಮುವಾದದ ವಿರುದ್ಧ ನಿರಂತರ ಸಮರ ಸಾರುತ್ತಿರುವವರು. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಚಾಕಚಕ್ಯತೆ ಇದೆ.

ಇನ್ನು ಪೃಥ್ವಿರಾಜ್ ಎಡಪದವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರು. ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿದ್ದವರು, ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಬಹಳ ವರ್ಷಗಳ ಕಾಲ ಕೆಲಸ ಮಾಡಿ, ಪಕ್ಷವನ್ನು ಕಟ್ಟಿ ಬೆಳೆಸಿದ ಅನುಭವ ಇರುವವರು. ಜೊತೆಗೆ ಒಳ್ಳೆಯ ವ್ಯಕ್ತಿತ್ವ ಎಲ್ಲರನ್ನು ಒಂದುಗೂಡಿಸಿಕೊಂಡೊಗುವ ಸಾಮರ್ಥ್ಯ ಉಳ್ಳವರು. ತಳಮಟ್ಞದಿಂದಲೇ ಪಕ್ಷವನ್ನು ಕಟ್ಟಿಬೆಳೆಸಿದ ನೈಪುಣ್ಯತೆ ಇರುವುದರಿಂದ ಜಿಲ್ಲಾಧ್ಯಕ್ಷ ಹುದ್ದೆಗೆ ಹೆಚ್ಚು ಸೂಕ್ತಾದ ಆರ್ಹ ವ್ಯಕ್ತಿ ಇವರೇ. ಪಕ್ಷ ಸಂಘಟನೆ ಮಾಡುವುದರಲ್ಲೂ ಎತ್ತಿದ ಕೈ.

ಬಿಜೆಪಿಯವರು ಎರಡನೇ ಹಂತದ ನಾಯಕರನ್ನು ಬೆಳೆಸಿದಂತೆ ಕಾಂಗ್ರೆಸ್ ನವರು ಬೆಳೆಸುವುದಿಲ್ಲ ಅನ್ನುವುದು ಸತ್ಯ. ಎಂಎಲ್ಎ ಬೇಕೂ, ಅಧ್ಯಕ್ಷ ಪದವಿ ಎಲ್ಲವೂ ಅವರಿಗೆ ಬೇಕು. ಎರಡನೇ ಹಂತದ ನಾಯಕರು ಕೇವಲ ಪಕ್ಷಕ್ಕಾಗಿ ನಿಯತ್ತಿನಂತೆ ದುಡಿಯಬೇಕು ಮಾತ್ರ. ಒಂದು ಜುಜುಬಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಈ ಮೊದಲ ಹಂತದ ನಾಯಕರು ಎರಡನೇ ಹಂತದ ನಾಯಕರಿಗೆ ಕೊಡಲು ತಯಾರಿರುವುದಿಲ್ಲ. ಇವರೇನೂ ಬೆಳೆದು ಬಿಟ್ಟರೂ ಅನ್ನುವ ಭಯ ಇವರಿಗೆ. ಎಲ್ಲವೂ ನಮಗೆ ಬೇಕು ಅಂದರೆ ಭವಿಷ್ಯದಲ್ಲಿ ಪಕ್ಷ ಉಳಿಯುವುದಾದರೂ ಹೇಗೆ.? ಈ ಬಾರಿಯಾದರೂ ಜಿಲ್ಲಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ಎರಡನೇ ಹಂತದ ಉತ್ಸಾಹಿ, ಪ್ರಾಮಾಣಿಕ ನಾಯಕರಿಗೆ ಕೊಡಲಿ. ಪಕ್ಷ ಫೀನಿಕ್ಸ್ ನಂತೆ ಎದ್ದು ಬರುವುದರಲ್ಲಿ ಸಂಶಯವಿಲ್ಲ.