ಕೇರಳ ರಾಜ್ಯದಿಂದ ಅಕ್ರಮವಾಗಿ ಅಂದಾಜು ರೂ.ಕೋಟಿ, ಕೋಟಿ ಮೌಲ್ಯದ 10.390 ಗ್ರಾಂ ಅಂಬರ್‌ಗ್ರೀಸ್ ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ತಿರುವನಂತಪುರದಿಂದ ಅಕ್ರಮವಾಗಿ ಅಂಬರ್‌ಗ್ರೀಸ್ ಮಾರಾಟ ಮಾಡುವ ಸಲುವಾಗಿ ವಾಹನದಲ್ಲಿ ಸಾಗಿಸುತ್ತಿರುವ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು.

ತಿರುವನಂತಪುರ ನಿವಾಸಿ ಶಂಶುದ್ದೀನ್.ಎಸ್, ಎಂ.ನವಾಜ್, ಕಣ್ಣೂರು ಜಿಲ್ಲೆಯ ವಿ.ಕೆ.ಲತೀಶ್, ರಿಜೇಶ್.ವಿ., ಪ್ರಶಾಂತ್.ಟಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ರಾಘವೇಂದ್ರ ಎ.ವಿ., ಕಾಸರಗೋಡಿನ ಬಾಲಚಂದ್ರ ನಾಯಕ್, ಕ್ಯಾಲಿಕಟ್ ನ ಸಾಜುಥಾಮೋಸ್, ಕಣ್ಣೂರಿನ ಜೋಬಿಸ್.ಕೆ.ಕೆ ಹಾಗೂ ಜಿಜೇಸ್.ಎಂ, ಬಂಧಿತರು.

ಬಂಧಿತರಿಂದ ಅಂದಾಜು ರೂ.10 ಕೋಟಿ ಮೌಲ್ಯದ 10 ಕೆ.ಜಿ 390 ಗ್ರಾಂ ಅಂಬರ್‌ಗ್ರೀಸ್, ಎರಡು ನೋಟು ಎಣಿಸುವ ಯಂತ್ರ ಮತ್ತು ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್.ಎಸ್, ಸಿಪಿಐ ಅನೂಪ್ ಮಾದಪ್ಪ.ಪಿ, ಪಿಎಸ್‌ಐ ಪ್ರಮೋದ್.ಹೆಚ್.ಎಸ್, ವಿರಾಜಪೇಟೆ ಠಾಣಾ ಸಿಬ್ಬಂದಿಗಳು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳ ತಂಡ ವಿರಾಜಪೇಟೆಯ ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ..
