ಇ ಒ, ತಹಶೀಲ್ದಾರ್ ರವರ ಭರವಸೆಗೆ ಜಗ್ಗದೆ, ಸತತವಾಗಿ ಸುರಿಯುತ್ತಿರುವ ಮಹಾಮಳೆಯನ್ನೂ ಲೆಕ್ಕಿಸದೆ ಧರಣಿ ಮುಂದುವರಿಸಿದ ಸಂತ್ರಸ್ತರು
ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ಕುಪ್ಪೆಪದವು ಗ್ರಾಮದಲ್ಲಿ ಸ್ವಂತ ಮನೆ, ಸ್ವಂತ ಭೂಮಿ ಇಲ್ಲದ ನೂರಾರು ಬಡ ಕುಟುಂಬಗಳು ದಶಕದಿಂದ ನಿವೇಶನಕ್ಕಾಗಿ ಕುಪ್ಪೆಪದವು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು. ಆರು ವರ್ಷಗಳ ಹಿಂದೆ ಚುನಾವಣಾ ಪೂರ್ವದಲ್ಲಿ ಬಹಳ ತರಾತುರಿಯಿಂದ ಶಾಸಕ ಭರತ್ ಶೆಟ್ಟಿ 97 ಕುಟುಂಬಗಳಿಗೆ ನಿವೇಶನ ತೋರಿಸಿ ಹಕ್ಕು ಪತ್ರ ವಿತರಿಸಿದರು. ಆದರೆ, ಹಕ್ಕುಪತ್ರ ನೀಡಿ ಆರು ವರ್ಷ ಕಳೆದರೂ 97 ಕುಟುಂಬಳಿಗೂ ನಿವೇಶನ ಹಸ್ತಾಂತರ ಮಾಡಲಿಲ್ಲ.
ಕಾದು ಬಸವಳಿದ ಈ ಬಡ ಕುಟುಂಬಗಳು ಈಗ ಸ್ಥಳೀಯ ಕಾರ್ಮಿಕ ಸಂಘಟನೆಗಳು, ಸಿಪಿಐಎಂ ಮುಖಂಡರ ಮಾರ್ಗದರ್ಶನದಲ್ಲಿ ಹೋರಾಟ ಸಮಿತಿ ರಚಿಸಿ ಹೋರಾಟ ಶುರು ಮಾಡಿದ್ದಾರೆ. ಕಳೆದ ಜನವರಿಯಿಂದ ಹಲವಾರು ಬಾರಿ ಧರಣಿ, ಪ್ರತಿಭಟನೆ ನಡೆಸಿದರೂ ನ್ಯಾಯ ದೊರಕದ ಹಿನ್ನಲೆಯಲ್ಲಿ ಬೆಸತ್ತ ಸಂತ್ರಸ್ತರು ಇದೀಗ ಕುಪ್ಪೆಪದವು ಗ್ರಾ.ಪಂ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ.

ಸತತವಾಗಿ ಸುರುಯುತ್ತಿರುವ ಮಹಾಮಳೆಯನ್ನೂ ಲೆಕ್ಕಿಸದೆ ಬಡ ನಿವೇಶನ ಸಂತ್ರಸ್ತರು ಅನಿರ್ಧಿಷ್ಟಾವಧಿ ಧರಣಿಗೆ ಚಾಲನೆ ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್ ಧರಣಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದ್ದಾರೆ. ಆದಷ್ಟು ಬೇಗ ನಿವೇಶನ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.
ಭರವಸೆಗೆ ಜಗ್ಗದೆ ಸಂತ್ರಸ್ತರು ರಾತ್ರಿಯೂ ಧರಣಿ ಮುಂದುವರಿಸಿದ್ದಾರೆ
ಕಳೆದ ಆರು ವರ್ಷಗಳ ಕಾಲ ಭರವಸೆಗಳನ್ನಷ್ಟೆ ಕೇಳಿ ಭ್ರಮನಿರಸನ ಗೊಂಡಿರುವ ನಿವೇಶನ ರಹಿತರು ತಾಲೂಕು ಆಡಳಿತದ ಭರವಸೆಗೆ ಬಗ್ಗದೆ, ನಿವೇಶನ ಸ್ವಾಧೀನದನ ಲಿಖಿತ ಪತ್ರ ನೀಡುವವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರಾತ್ರಿ 8 ಗಂಟೆಯ ವರೆಗೂ ಮನವೊಲಿಸಲು ಯತ್ನಿಸಿದ ಅಧಿಕಾರಿಗಳು ಪ್ರತಿಭಟನಾಕಾರರ ದೃಢ ನಿಲುವಿನಿಂದ ವಾಪಾಸ್ ಆಗಿದ್ದಾರೆ. ತರುವಾಯ ರಾತ್ರೆಯೂ ಧರಣಿ ಮುಂದುವರಿದಿದ್ದು ಇದೀಗ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಗ್ರಾಮದ ಯುವಕರು ಬಡ ನಿವೇಶನ ರಹಿತರ ಬೆಂಬಲಕ್ಕೆ ನಿಂತಿದ್ದಾರೆ
ನೀವೂ ಬೆಂಬಲಿಸಿ, ಧರಣಿ ಸ್ಥಳಕ್ಕೆ ಭೇಟಿ ನೀಡಿ. ಈಗಿನ ರಾಜಕಾರಣದಲ್ಲಿ ಕಳೆದು ಹೋಗುತ್ತಿರುವ ಜನಸಾಮಾನ್ಯರ ಬದುಕಿನ ಪ್ರಶ್ನೆಯ ಈ ಹೋರಾಟಕ್ಕೆ ಬಲ ತುಂಬಬೇಕು ಎಂದು ವಿನಂತಿಸುತ್ತಿದ್ದಾರೆ.
