ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕರೆತಂದು, ಸ್ಥಳ ಮಹಜರು ನಡೆಸಿದ ಬಂಟ್ವಾಳ ಪೊಲೀಸರು

ಕರಾವಳಿ

ಕೊಳ್ತಮಜಲು: ಇರಾ ಕೋಡಿಯಲ್ಲಿ ಮೇ 27ರಂದು ಸಂಜೆ ನಡೆದ ಪಿಕಪ್‌ ಚಾಲಕ ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬೆಳ್ತಂಗಡಿಯ ನಾಲ್ಕು ಸ್ಥಳಗಳಿಗೆ ಸೋಮವಾರ ಕರೆತಂದು ಮಹಜರು ನಡೆಸಿದ್ದಾರೆ. ಪ್ರಕರಣ ಸಂಬಂಧ ಐವರನ್ನು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸ್‌ ಆರೋಪಿಗಳು ಓಡಾಡಿದ ವಿವಿಧ ಸ್ಥಳಗಳಿಗೆ ತೆರಳಿ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಮುಂಡರ ಕೋಡಿ ನಿವಾಸಿ ದೀಪಕ್‌ ಮತ್ತು ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಸುಮಿತ್‌ ಆಚಾರ್ಯ ಅವರನ್ನು ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್‌ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಜೂ. 2ರ ಸೋಮವಾರದಂದು ಬೆಳ್ತಂಗಡಿಯ ಗುರುವಾಯನಕೆರೆ ಅಂಗಡಿ, ಬೆಳ್ತಂಗಡಿಯ ಸಂತೆಕಟ್ಟೆಯ ಮೊಬೈಲ್‌ ಅಂಗಡಿ, ಬೆಳ್ತಂಗಡಿ ಮೂರು ಮಾರ್ಗದ ಬಳಿ, ಉಜಿರೆಯ ನಿಡಿಗಲ್‌ ನದಿಯ ಬಳಿ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ಪ್ರಮುಖ ಆರೋಪಿಗಳಾದ ದೀಪಕ್‌ ಮತ್ತು ಸುಮಿತ್‌ ಆಚಾರ್ಯ ರಹಿಮಾನ್‌ ಕೊಲೆ ಮಾಡಿದ ಬಳಿಕ ಬೈಕ್‌ ಮೂಲಕ ನೇರ ಬೆಳ್ತಂಗಡಿ ಕಡೆ ಪ್ರಯಾಣ ಮಾಡಿದ್ದರು. ಆಗ ಗುರುವಾಯನಕೆರೆಯ ಅಂಗಡಿಯೊಂದರಲ್ಲಿ ಹೊಸ ರೈನ್‌ ಕೋಟ್‌ ಖರೀದಿ ಮಾಡಿ ಬೆಳ್ತಂಗಡಿಯ ಸಂತೆಕಟ್ಟೆ ಮೊಬೈಲ್‌ ಶಾಪ್‌ಗೆ ಬಂದು ಸಿಮ್‌ ಪಡೆದು ಮೂರು ಮಾರ್ಗದ ಬಳಿಯ ಚರಂಡಿಗೆ ಸಿಮ್‌ ಎಸೆದು ನೇರ ಕಲ್ಮಂಜ ಗ್ರಾಮದ ನಿಡಿಗಲ್‌ ನದಿಗೆ ತಮ್ಮ ಮೊಬೈಲ್‌ ಎಸೆದು ಚಿಕ್ಕಮಗಳೂರು ಕಡೆ ಪರಾರಿಯಾಗಿದ್ದರು.