ನಳಿನ್ ಗೆ ಠಕ್ಕರ್..ಭಟ್ರ ‘ರಿಪಬ್ಲಿಕ್’.. ಕಲ್ಲಡ್ಕ ಫ್ಲೈ ಓವರ್: ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಗಾಢ ನಿದ್ರೆಯಲ್ಲಿ..?

ಕರಾವಳಿ

ಕರಾವಳಿಯಲ್ಲಿ ಅನಧಿಕೃತ ಸರಕಾರ ಏನಾದರೂ ಅಸ್ತಿತ್ವದಲ್ಲಿದೆಯೋ ಅನ್ನುವ ಪ್ರಶ್ನೆ ಪದೇ ಪದೇ ಕಾಡುತ್ತಿದೆ. ಇದಕ್ಕೆ ಕಾರಣ ಸೋಮವಾರದಂದು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾದ ನೂತನ ಮೇಲ್ಸೆತುವೆಯನ್ನು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದ್ದಾರೆ. ಪೂಜೆ ಮಾಡಿ, ಭಾಷಣ ಮಾಡಿ, ಜೈ ಶ್ರೀರಾಮ್ ಘೋಷಣೆ ಕೂಗಿ ಪ್ಲೈ ಓವರ್ ಗೆ ಚಾಲನೆ ನೀಡಿದ್ದಾರೆ. ಮಾತ್ರವಲ್ಲ ಈ ಪ್ಲೈ ಓವರ್ ಗೆ ಶ್ರೀರಾಮ ಅಂತ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ಕಲ್ಲಡ್ಕ ಫ್ಲೈ ಓವರ್ ಉದ್ಘಾಟನೆ ಮಾಡಲು ಕಲ್ಲಡ್ಕ ಪ್ರಭಾಕರ ಭಟ್ ಯಾರು? ಕೇಂದ್ರ ಸರಕಾರದ ಮಂತ್ರಿಯೋ? ಮಂಗಳೂರಿನ ಸಂಸದರೋ? ಜನಪ್ರತಿನಿಧಿಯೋ?

ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬಹುಪಾಲು ಕೇಂದ್ರ ಸರಕಾರದ ಅನುದಾನ ಇರುವುದೇನೋ ನಿಜ. ಅದೇ ರೀತಿ ಶೇಕಡಾ 30 ರಷ್ಟು ರಾಜ್ಯ ಸರಕಾರದ ಅನುದಾನ ಕೂಡ ವಿನಿಯೋಗಿಸಿದ್ದಾರೆ. ಸರಕಾರದ ವತಿಯಿಂದ ನಡೆದ ಕಾಮಗಾರಿಯನ್ನು ಜನಪ್ರತಿನಿಧಿಯೇ ಅಲ್ಲದ ಸಂಘಪರಿವಾರದ ಮುಖಂಡರು ಉದ್ಘಾಟಿಸುತ್ತಾರೆಂದಾದರೆ ಕರಾವಳಿಯಲ್ಲಿ ಆಳುತ್ತಿರುವುದು ಯಾವ ರಿಪಬ್ಲಿಕ್ ಸರಕಾರ.

ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ಅಂದಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಬೇಕು. ಮಂಗಳೂರಿನಲ್ಲಿ ಇತ್ತೀಚೆಗೆ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಉದ್ಘಾಟಿಸಲಾಗಿತ್ತು. ಅಂದಿನ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಮುತುವರ್ಜಿಯಿಂದ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ರಮಾನಾಥ ರೈ ಗೆ ಸಂಪೂರ್ಣ ಕ್ರೆಡಿಟ್ ನೀಡಿತ್ತು. ಆದರೆ ಕಲ್ಲಡ್ಕ ಫ್ಲೈ ಓವರ್ ತರಾತುರಿ ಉದ್ಘಾಟನೆ ಹಿಂದೆ ನಳಿನ್ ಕುಮಾರ್ ಕಟೀಲ್ ರಿಗೆ ಕ್ರೆಡಿಟ್ ತಪ್ಪಿಸಲು ಈಗಿನ ಸಂಸದರು ತನ್ನ ರಾಜಕೀಯ ಗುರುವಿನ ಮೂಲಕ ಉದ್ಘಾಟಿಸಿದ್ದಾರೆ ಅನ್ನುವ ಮಾತುಗಳು ಇದೀಗ ಕೇಳಿ ಬರತೊಡಗಿದೆ.

ಕಲ್ಲಡ್ಕ ಪ್ಲೈ ಓವರ್ ತರಾತುರಿಯ ಉದ್ಘಾಟನೆ ಹಲವಾರು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಕಾರ್ಯಕ್ರಮವನ್ನೇ ಆಯೋಜಿಸಿಯೇ ಇರಲಿಲ್ಲ. ಪ್ರೋಟೋಕಾಲ್ ಅನ್ನುವುದಿದೆ. ಆದರೆ ಅದೆಲ್ಲವನ್ನೂ ಬದಿಗಿಟ್ಟು ಸಂಘಪರಿವಾರದ ಮುಖಂಡರೇ ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಕಾರ್ಯಕ್ರಮ ನಡೆಸುತ್ತಾರೆಂದಾದರೆ ಇಲ್ಲಿ ಜಿಲ್ಲಾಡಳಿತ ಯಾಕೆ? ಸಂಸದರು, ಶಾಸಕರು ಯಾಕೆ? ಜಿ.ಪಂ, ತಾ.ಪಂ, ಗ್ರಾ.ಪಂ ಸದಸ್ಯರು ಯಾಕೆ.? ಚುನಾವಣೆ ನಡೆಸುವುದು ಯಾಕೆ? ಕಲ್ಲಡ್ಕರ ಕೈಗೆ ಕರಾವಳಿ ಕೊಟ್ಟು ಬಿಟ್ಟರೆ ಸಾಕಲ್ಲವೇ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದ್ವೇಷ ಭಾಷಣಕ್ಕೆ ಎಫ್ ಐ ಆರ್ ದಾಖಲಿಸಿದ ದಿನವೇ ಅನಧಿಕೃತವಾಗಿ ಉದ್ಘಾಟನೆ ನಡೆಸಿರುವುದು ಸರಕಾರ, ಪೊಲೀಸ್ ಇಲಾಖೆಯ ಅಣಕವಲ್ಲವೇ.!