ಕಾಂಗ್ರೆಸ್ ಹೈಕಮಾಂಡ್‌ ಸಚಿವ ಸಂಪುಟ ಪುನಾರಚನೆಗೆ ಚಿಂತನೆ

ರಾಜ್ಯ

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಅಮಾಯಕರ ಹತ್ಯೆ, ಕಾರ್ಯಕರ್ತರ ಮುನಿಸು, ಆಡಳಿತ ವೈಪಲ್ಯ ವರದಿಗಳು ಹೈಕಮಾಂಡ್‌ ಅಂಗಳಕ್ಕೆ

ಕಾಂಗ್ರೆಸ್ ಹೈಕಮಾಂಡ್‌ ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ದಿಸೆಯಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ ವರಿಷ್ಠ ರಾಹುಲ್‌ ಗಾಂಧಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ಬುಲಾವ್‌ ನೀಡಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ದೆಹಲಿಯಲ್ಲಿದ್ದು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರುಗಳೊಂದಿಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ಸಭೆಯಲ್ಲಿ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆದು ಎಂಟರಿಂದ ಹತ್ತು ಮಂದಿ ಹಿರಿಯ ಸಚಿವರುಗಳ ಕಾರ್ಯವೈಖರಿ ಬಗ್ಗೆ ಹೈಕಮಾಂಡ್‌ ತೀವ್ರ ಅಸಮಾಧಾನ ಹೊಂದಿದ್ದು, ಅವರನ್ನು ಸಂಪುಟದಿಂದ ಕೈಬಿಡುವ ಸಾದ್ಯತೆ ಇದೆ ಎನ್ನಲಾಗಿದೆ. ಭ್ರಷ್ಟಾಚಾರ, ಅವ್ಯವಹಾರ, ಹೊಂದಾಣಿಕೆಯ ರಾಜಕೀಯ, ಪಕ್ಷದ ಕಾರ್ಯಕರ್ತರ ಕಡೆಗಣನೆ, ಕಾರ್ಯಕರ್ತರಿಗೆ ಅವಕಾಶ ದೊರಕಿಲ್ಲ. ಕರಾವಳಿ ಬಾಗದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಅಮಾಯಕರ ಹತ್ಯೆ, ಕಾರ್ಯಕರ್ತರ ಹಾಗೂ ನಾಯಕರ ಮುನಿಸು, ಆಡಳಿತ ವೈಪಲ್ಯ ಎಂಬ ವರದಿಗಳು ಹೈಕಮಾಂಡ್‌ ಅಂಗಳಕ್ಕೆ ಮುಟ್ಟಿವೆ ಎನ್ನಲಾಗಿದೆ. ವಿಧಾನಸಭೆ ಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸಭಾಪತಿ ಸ್ಥಾನಗಳಿಗೂ ಬದಲಾವಣೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ ವಿಧಾನ ಪರಿಷತ್‌ನ ಪಕ್ಷದ ಕೆಲ ಹಿರಿಯ ಸದಸ್ಯರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವ ಆಲೋಚನೆ ಇದೆ ಎಂದು ಹೇಳಲಾಗುತ್ತಿದೆ.