ಜುಗಾರಿ ಅಡ್ಡೆಗೆ ದಾಳಿ ನಡೆಸಿದಾಗ ಆರೋಪಿಗಳು ಎಸ್ಕೇಪ್.. ದ್ವಿಚಕ್ರ ವಾಹನ ಪತ್ತೆ..

ಕರಾವಳಿ

ಪ್ರಕರಣ ದಾಖಲಿಸದೇ ನಟೋರಿಯಸ್ ಜಮಾಲ್ ಮೂಲಕ ಹಣಕ್ಕೆ ಬೇಡಿಕೆಯಿಟ್ಟ ವಿಟ್ಲ ಎಸೈ ಕೌಶಿಕ್ ಸಸ್ಪೆಂಡ್.

ಹೌದು..ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿ ಹಣದಾಸೆಗಾಗಿ ಮಾನಗೆಟ್ಟ ಕುಖ್ಯಾತ ಕ್ರಿಮಿನಲ್ ಜೊತೆ ಕೈಜೋಡಿಸಿದರೆ ಏನಾಗುತ್ತೆ ಎಂಬುದಕ್ಕೆ ವಿಟ್ಲ ಎಸೈ ಬಿ.ಸಿ.ಕೌಶಿಕ್ ಸಸ್ಪೆಂಡ್ ಉದಾಹರಣೆ..

ಕಳೆದ ತಿಂಗಳು ಎಂಟರಂದು ವಿಟ್ಲದ ಪಳಿಕೆ ಎಂಬಲ್ಲಿ ನಾಲ್ವರು ಯುವಕರು ಜುಗಾರಿ ಆಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಎಸೈ ಬಿ.ಸಿ.ಕೌಶಿಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಜುಗಾರಿಕೋರರು ದ್ವಿಚಕ್ರ ವಾಹನ ಬಿಟ್ಟು ಹೋಗಿದ್ದರು. ಇದಾದ ಕೆಲ ಗಂಟೆಗಳ ಬಳಿಕ ಜುಗಾರಿಕೋರರ ಪೈಕಿ ಒಬ್ಬಾತನಿಗೆ ಕರೆ ಮಾಡಿದ ಎಸೈ ಕೌಶಿಕ್ ಅವರು ಮನೆಗೆ ನುಗ್ಗುತ್ತೇನೆ..ಇಲ್ಲವಾದರೆ ಬಂದು ಮಾತಾಡು ಎಂದು ಹೇಳಿದ್ದರೆನ್ನಲಾಗಿದೆ.

ಕರೆ ಮಾಡಿದ ವ್ಯಕ್ತಿ ಮತ್ತೆ ಎಸೈ ಕೌಶಿಕ್ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ವಿಚಾರಿಸಿದಾಗ ಜಮಾಲ್ ಬಳಿ ಹೋಗಿ ಮಾತಾಡಿ ಸೆಟ್ಲ್ ಮಾಡ್ಕೊಂಡ್ರೆ ಮುಗಿಯುತ್ತೆ. ಇಲ್ಲವಾದ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಹೇಳಿ ಎಚ್ಚರಿಕೆ ನೀಡಿದ್ದಾರೆ. ಜಮಾಲ್ ಬಳಿ ಮಾತಾಡಿದಾಗ ಮೂವತ್ತು ಸಾವಿರ ಕೊಡು. ಎಲ್ಲಾ ಮುಗಿಸುತ್ತೇನೆ ಎಂದು ಬೇಡಿಕೆ ಇಟ್ಟಿರುವ ಬಗ್ಗೆ ಸಂಭಾಷಣೆ ಸಾಮಾಜಿಕ ತಾಣಗಳಲ್ಲಿ ವೈರಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸೈ ಬಿ.ಸಿ.ಕೌಶಿಕ್ ಅವರನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಯಾರೀತ ಜಮಾಲ್.?
ಒಂದಲ್ಲ ಒಂದು ಕಮಾಲ್ ಮಾಡುತ್ತಿರುವ ವಿಟ್ಲದ ಜಮಾಲ್ ಅಂತಿಂಥ ಆಸಾಮಿಯಲ್ಲ. ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಹಿಂದೆ ಕೇರಳದ ಉದ್ಯಮಿಯೊಬ್ಬನ ಹನಿಟ್ರ್ರಾಪ್ ನಡೆಸಿದ ಕುಖ್ಯಾತ ಜಮಾಲ್ ಲಕ್ಷಗಟ್ಟಲೆ ಸುಲಿಗೆ ಮಾಡಿ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದ. ಅದಾದ ಕೆಲ ತಿಂಗಳ ಬಳಿಕ ಅದೇ ಕೇರಳದ ವ್ಯಕ್ತಿ ಬೇರೊಬ್ಬರ ಮುಖಾಂತರ ಜಮಾಲ್ ನನ್ನು ಬರಮಾಡಿಕೊಂಡು ಕೈಕಾಲು ಮುರಿದು ಹಾಕಿದ್ದ. ಸುಮಾರು ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ನರಳಾಡಿದ ಜಮಾಲ್ ಬಳಿಕ ಮತ್ತೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಹನಿಟ್ರ್ರಾಪ್ ನಡೆಸಿ ಪೊಲೀಸರ ಅತಿಥಿಯಾದ. ಬಳಿಕ ವಿಟ್ಲದ ಶಾಲಾ ರಸ್ತೆಯಲ್ಲಿ ನೆಪ ಮಾತ್ರಕ್ಕೆ ತರಕಾರಿ ಅಂಗಡಿ ಇಟ್ಟ ಜಮಾಲ್ ವಿಟ್ಲ ಮಾತ್ರವಲ್ಲದೇ ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳ ದಲ್ಲಾಳಿಯಾಗಿ ಅಮಾಯಕರ ಮುಂಡಾಮೋಚುವ ಕೆಲಸ ಮಾಡಿದ್ದ. ಇದೀಗ ಈತನ ಅಸಲಿಯತ್ತು ಅರಿಯದೇ ಎಸೈ ಬಿ.ಸಿ.ಕೌಶಿಕ್ ಅಮಾನತು ಆಗಬೇಕಾಗಿ ಬಂದುದು ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.