ಗೃಹಜ್ಯೋತಿ ಯೋಜನೆ: ಜುಲೈ 31 ಅಂತಿಮ ಗಡುವಲ್ಲ; ಆಗಸ್ಟ್ 31 ವರೆಗೆ ಅವಕಾಶ

ರಾಜ್ಯ

ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಗಳ ಪುನರ್ ಪರಿಶೀಲನೆ ಪ್ರಕ್ರಿಯೆ ರಾಜ್ಯಾದ್ಯಂತ ಚುರುಕಿನಿಂದ ಸಾಗಿದೆ. ಈ ನಡುವೆ, ಪರಿಶೀಲನೆಗೆ ಜುಲೈ 31 ಕೊನೆಯ ದಿನಾಂಕ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಆದರೆ, ಈ ವದಂತಿಗಳಿಗೆ ತೆರೆ ಎಳೆದಿರುವ ಬೆಸ್ಕಾಂ ಹಿರಿಯ ಅಧಿಕಾರಿಗಳು, ಜುಲೈ 31 ಅಂತಿಮ ಗಡುವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿ ಮನೆಗೆ ತೆರಳುತ್ತಿರುವ ಮೀಟರ್ ರೀಡರ್ ಹಾಗೂ ಲೈನ್ ಮ್ಯಾನ್‌ಗಳು ಪ್ರಸ್ತುತ ವಾಸವಿರುವವರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯೋಜನೆಯು ಅರ್ಹರಿಗೆ ಮಾತ್ರ ತಲುಪಬೇಕು ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಅಥವಾ ಅಕ್ರಮವಾಗಿ ಬಳಸುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅನ್ಯರಾಜ್ಯದವರು ಮತ್ತು ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಸರ್ವೇ ನಡೆಯುತ್ತಿದೆ.

ಸರ್ವರ್ ಸಮಸ್ಯೆ ಮತ್ತು ಸೂಕ್ತ ಮಾಹಿತಿ ಸಿಗದ ಕಾರಣ ಪರಿಶೀಲನೆಗೆ ಕಾಲಾವಕಾಶ ಬೇಕಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಸುಮಾರು 68.86 ಲಕ್ಷ ಫಲಾನುಭವಿಗಳ ಪೈಕಿ ಜುಲೈ 28ರ ವೇಳೆಗೆ ಅರ್ಧದಷ್ಟು ಎಂದರೆ ಶೇ. 50 ರಷ್ಟು ಜನರ ದಾಖಲೆಗಳ ಪರಿಶೀಲನೆ ಮಾತ್ರ ಪೂರ್ಣಗೊಂಡಿದೆ. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ಆಗಸ್ಟ್ ತಿಂಗಳ ಕೊನೆಯವರೆಗೂ ಮನೆ ಮನೆಗೆ ತೆರಳಿ ಈ ಪ್ರಕ್ರಿಯೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ.

ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮನೆಗೆ ಭೇಟಿ ನೀಡುವ ಸಿಬ್ಬಂದಿಗೆ ವಾಸಸ್ಥಳದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಪಾನ್ ಕಾರ್ಡ್, ಭಾವಚಿತ್ರ ಹಾಗೂ ಬಾಡಿಗೆದಾರರಾಗಿದ್ದರೆ ಬಾಡಿಗೆ ಒಪ್ಪಂದದ ಪತ್ರವನ್ನು ತೋರಿಸಿ ಸಹಕರಿಸಬಹುದು.