ಗುತ್ತಿಗೆದಾರನ ನಿರ್ಲಕ್ಷ್ಯ. ಶಾಲಾ ಮಕ್ಕಳ ಬಲಿ ಪಡೆಯಲು ಕಾದು ಕುಳಿತ ವಿಟ್ಲದ ಇಂದಿರಾ ಕ್ಯಾಂಟೀನ್ ಕಾಮಗಾರಿ.

ಕರಾವಳಿ

ವಿಟ್ಲದ ನಲಿ-ಕಲಿ ಶಾಲಾ ವಿದ್ಯಾರ್ಥಿಗಳ ಪ್ರಾಣ ಬಲಿ ಪಡೆಯಲು ಇಂದಿರಾ ಕ್ಯಾಂಟೀನ್ ಕಾಮಗಾರಿ ಪಡೆದ ಗುತ್ತಿಗೆದಾರ ಮತ್ತು ಅಧಿಕಾರಿಗಳು ಕಾರಣರಾಗುತ್ತಿದ್ದಾರೆ. ಇಲ್ಲಿನ ನಲಿ-ಕಲಿ ಶಾಲಾ ವಠಾರದಲ್ಲೇ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯಲ್ಲಿ ಗುತ್ತಿಗೆದಾರ ಮತ್ತು ಇಂಜಿನಿಯರುಗಳ ಬೇಜವಾಬ್ದಾರಿ ಎದ್ದುಕಾಣುತ್ತಿದೆ.

ಶಾಲಾ ಪುಟಾಣಿಗಳು ಓಡಾಡುತ್ತಿರುವ ಪರಿಸರದಲ್ಲೇ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಿಲ್ಲ. ಶಾಲಾ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತ್ಯಾಜ್ಯ ಶೇಖರಣೆಗಾಗಿ ಗುಂಡಿ ತೋಡಿದ್ದರೂ ಇನ್ನೂ ಮುಚ್ಚದೇ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೇ ಗುಂಡಿಯ ಸುತ್ತ ಮಕ್ಕಳು, ಆಡು, ದನ-ಕರುಗಳು ಓಡಾಡುತ್ತಿದ್ದರೂ ಕೆಳಕ್ಕೆ ಬೀಳದಂತೆ ತಡೆಬೇಲಿ ಕೂಡಾ ನಿರ್ಮಿಸಿರುವುದಿಲ್ಲ.

ಪ್ರತಿನಿತ್ಯ ಶಿಕ್ಷಕರಿಗೆ ಪಾಠ ಮಾಡುವ ಬದಲು ಪುಟಾಣಿಗಳ ನೋಡಿಕೊಳ್ಳುವುದೇ ಸವಾಲಾಗಿದೆ. ಗುತ್ತಿಗೆದಾರನ ತೀರಾ ನಿರ್ಲಕ್ಷ್ಯದ ಬಗ್ಗೆ ಪ್ರತಿಕ್ರಿಯೆ ಕೇಳಲು ಇಂದಿರಾ ಕ್ಯಾಂಟೀನ್ ಡೈರೆಕ್ಟರ್ ನಝೀರ್ ಎಂಬವರ ಮೊಬೈಲಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲವಾಗಿದೆ. ಅಮಾಯಕ ಪುಟಾಣಿಗಳ ಪ್ರಾಣ ಬಲಿ ಪಡೆಯುವ ಮುನ್ನ ಅಧಿಕಾರಿಗಳು ಮತ್ತು ಗುತ್ತಿಗೆದಾರ ಮರಣಗುಂಡಿಯನ್ನು ಮುಚ್ಚುವರೋ ಕಾದುನೋಡಬೇಕಿದೆ.