ಮಂಗಳೂರು RTO: ಸೂಪರಿಟೆಂಡೆಂಟ್ ರೇಖಾ ಏನಿದು ನಿನ್ನ ದೋಖಾ.! ಭ್ರಷ್ಟ ಅಧಿಕಾರಿಗಳ ಬಗ್ಗೆ ಈ ಹಿಂದೆ ಇಂಚಿಂಚೂ ವರದಿ ಮಾಡಿದ್ದ ಸ್ಪೆಷಲ್ ನ್ಯೂಸ್ ಮೀಡಿಯಾ

ಕರಾವಳಿ

ಮೂವರು ಭ್ರಷ್ಟ ಖದೀಮರು ಸಸ್ಪೆಂಡ್; ಹೆಗ್ಗಣಗಳು ಸೇಫ್ ಝೋನ್.!

ಮಂಗಳೂರು RTO ಕಚೇರಿಯ ಲಂಚವತಾರದ ವೆರೈಟಿ ವೆರೈಟಿ ಕಥೆಗಳನ್ನು ಸ್ಪೆಷಲ್ ನ್ಯೂಸ್ ಮೀಡಿಯಾ ಈ ಹಿಂದೆ ಹಲವು ಬಾರಿ ಪ್ರಕಟಿಸಿತ್ತು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಭ್ರಷ್ಟ ಖದೀಮರು ಸೇಫಾಗಿ ಇನ್ನಷ್ಟು ಅನಾಹುತಕಾರಿ ಕೆಲಸ ಮಾಡಲು ಅವಕಾಶ ನೀಡುವಂತಾಗಿತ್ತು. ಆದರೆ ಈ ಬಾರಿ ಮಾತ್ರ ಭ್ರಷ್ಟರ ಆಟ ನಡೆಯಲಿಲ್ಲ. ಕೋಟಿ ಕೋಟಿ ಡೀಲಿಂಗ್ ಗೆ ಇಳಿದು ಅಮಾನತ್ತಾಗಿ ಹೋಗಿದ್ದಾರೆ. ಮಂಗಳೂರು ಆರ್ ಟಿ ಓ ಕಚೇರಿಯಲ್ಲಿ ಸಾರಿಗೇತರ ವಿಭಾಗದ ಸೂಪರಿಟೆಂಡೆಂಟ್ ಆಗಿದ್ದ ರೇಖಾ ಅನ್ನುವಾಕೆ ಸೇರಿ ಮೂವರು ಅಧಿಕಾರಿಗಳು ಡೀಲಿಂಗ್ ಗೆ ಇಳಿದು ಸಸ್ಪೆಂಡ್ ಆಗಿದ್ದಾರೆ. ಈ ರೇಖಾಳ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಈ ಹಿಂದೆ ‘ರೇಖಾ ಏನಿದು ನಿನ್ನ ದೋಖಾ’ ಹೆಡ್ ಲೈನಿನೊಂದಿಗೆ ಸಮಗ್ರ ಕರ್ಮಕಥೆಯ ವಿವರವನ್ನು ಪ್ರಕಟಿಸಿತ್ತು.

ಮಂಗಳೂರು ಆರ್ ಟಿ ಓ ಕಚೇರಿಯಲ್ಲಿ ರಾಜಾರೋಷವಾಗಿ ಲಂಗು ಲಗಾಮಿಲ್ಲದೆ ನಿರಾಂತಕವಾಗಿ ಭ್ರಷ್ಟಾಚಾರ ಮೇಳೈಸುತ್ತಿದೆ. ಕೆಲಸಕ್ಕೆಂದು ಬರುವ ಸಾರ್ವಜನಿಕರಲ್ಲಿ ಕನಿಕರವಿಲ್ಲದಂತೆ ವರ್ತಿಸುತ್ತಿದ್ದಾರೆ. ಹಣವಿಲ್ಲದೆ ಒಂದು ಕೆಲಸವೂ ನಡೆಯುವುದಿಲ್ಲ. ಇನ್ನು ಬ್ರೋಕರ್ ಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಕೆಲವೊಂದು ಅಧಿಕಾರಿಗಳು ನೇರವಾಗಿಯೇ ಜನರೊಂದಿಗೆ ಲಂಚ ಕೇಳುವಷ್ಟರ ಮಟ್ಟಿಗೆ ಇಲ್ಲಿನ ಕಥೆ ಅಧೋಗತಿಗೆ ಇಳಿದಿದೆ. ಆರ್ ಟಿ ಓ ಕಚೇರಿಯಲ್ಲಿ ದಿನನಿತ್ಯ ಇಂತಹ ಖರಾಬ್ ಕಥೆ ನಡೆಯುತ್ತಿದ್ದರೂ ಲೋಕಾಯುಕ್ತ ಇಲಾಖೆ ಮಾತ್ರ ಇಲ್ಲಿಗೆ ರೈಡ್ ಮಾಡುವ ಸಾಹಸವನ್ನು ಈವರೆಗೂ ತೋರಿಸಿಲ್ಲ ಅನ್ನುವ ಸಾಹಸವನ್ನು ಮೆಚ್ಚಲೇಬೇಕು!

ಬೆಲೆಬಾಳುವ ಕಾರು ನೋಂದಣಿಗೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ವಂಚಿಸಿದ ಆರೋಪದಲ್ಲಿ ಮೂವರು ಅಧಿಕಾರಿಗಳ ಆರೋಪ ಧೃಡವಾದ ಹಿನ್ನೆಲೆಯಲ್ಲಿ ಸಾರಿಗೇತರ ವಿಭಾಗದ ಸೂಪರಿಟೆಂಡೆಂಟ್ ರೇಖಾ ನಾಯಕ್, ಸ್ಥಾನೀಯ ಸಹಾಯಕಿ ಸರಸ್ವತಿ, ಪ್ರಥಮ ದರ್ಜೆ ಸಹಾಯಕ ನೀಲಪ್ಪ ಅಮಾನತುಗೊಂಡಿದ್ದಾರೆ.

2024 ರ ಡಿಸೆಂಬರ್ 19 ರಂದು 1.96 ಕೋಟಿಯ ಮರ್ಸಿಡಿಸ್ ಬೆಂಝ್ ಕಾರನ್ನು 32 ಲಕ್ಷ ಬೆಲೆಯದ್ದೆಂದು ಉಲ್ಲೇಖಿಸಿ ಮಂಗಳೂರು ಆರ್ ಟಿ ಓ ಕಚೇರಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಸಾರಿಗೇತರ ವಿಭಾಗದ ಸೂಪರಿಟೆಂಡೆಂಟ್ ರೇಖಾ ನಾಯಕ್, ಕೇಂದ್ರ ಸ್ಥಾನಿಕ ಸಹಾಯಕಾರ ಲಾಗಿನ್ ಐಡಿಯಲ್ಲಿ ಡಿಸೆಂಬರ್ 24 ರಂದು ಕಾರಿನ ನೋಂದಣಿಯೂ ಆಗಿತ್ತು. ಈ ಅಧಿಕಾರಿಗಳು ಕಾರಿನ ಮೂಲ ಬೆಲೆಯನ್ನು ಗೌಪ್ಯವಾಗಿರಿಸಿ 32 ಲಕ್ಷದ ಬೆಂಝ್ ಕಾರೆಂದು ದಾಖಲೆಗಳಲ್ಲಿ ತೋರಿಸಿದ್ದರು.2 ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರನ್ನು ನೋಂದಣಿ ಮಾಡಿಸುವುದಿದ್ದರೆ 40 ಲಕ್ಷ ತೆರಿಗೆ ಕಟ್ಟಬೇಕಿತ್ತು. ಆದರೆ ಕಾರಿನ ಬೆಲೆಯೇ 32 ಲಕ್ಷ ತೋರಿಸಿ ದೊಡ್ಡ ಡೀಲಿಂಗ್ ನಡೆಸಿದ್ದರು ಅಧಿಕಾರಿಗಳು!

ಈ ಡೀಲಿಂಗ್ ವ್ಯವಹಾರದಲ್ಲಿ ಮೂವರನ್ನು ಅಮಾನತು ಮಾಡಲಾಗಿದೆ. ಆದರೆ ಇದರಲ್ಲಿ ಕೆಲವು ಪ್ರಭಾವಿ ಅಧಿಕಾರಿಗಳು ಶಾಮೀಲಾಗಿದ್ದು, ಅವರೆಲ್ಲರೂ ಬಚಾವು ಆಗಿದ್ದಾರೆ ಅನ್ನುವ ಮಾತುಗಳು ಕೇಳಿ ಬರತೊಡಗಿದೆ. ಬಿಲದಲ್ಲಿ ಅಡಗಿದ ಅಧಿಕಾರಿಗಳು ಮುಂದಿನ ತಲಾಷೆಯಲ್ಲಿ ರಂಗಕ್ಕೆ ಬರಲಿದ್ದಾರೆ.