ದೇವಸ್ಥಾನಕ್ಕೆಂದು ಅಪ್ರಾಪ್ತೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ , ರಾತ್ರಿ ಪೂರ್ತಿ ಇಬ್ಬರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜುಲೈ 17ರ ರಾತ್ರಿ ಈ ನೀಚ ಕೃತ್ಯ ನಡೆದಿದ್ದು, ದೇವನಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನವೀನ್, ವೆಂಕಟರಮಣ ಮತ್ತು ರೇಣುಕಾ ಎಂದು ಗುರುತಿಸಲಾಗಿದೆ.
ದೇವಸ್ಥಾನಕ್ಕೆ ಹೋಗೋಣಾ ಅಂತಾ ಅಪ್ರಾಪ್ತೆಯನ್ನು ಪುಸಲಾಯಿಸಿ ರೇಣುಕಾ ಕರೆ ತಂದಿದ್ದಳು. ಈ ವೇಳೆ ಆಟೋದಲ್ಲಿ ಬೇರೆಡೆಗೆ ರೇಣುಕಾ, ವೆಂಕಟರಮಣ ಮತ್ತು ನವೀನ್ ಕರೆದುಹೋಗಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಅಪ್ರಾಪ್ತೆ ಮೇಲೆ ಹಲ್ಲೆ ಮಾಡಿ, ಮದ್ಯ ಕುಡಿಸಿ ಅತ್ಯಾಚಾರ ಮಾಡಿದ್ದಾರೆ. ಬೆಳಗ್ಗೆ ಮನೆ ಬಳಿ ಬಿಟ್ಟು ಯಾರಿಗಾದ್ರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ರಾತ್ರಿಯೆಲ್ಲ ಮನೆಗೆ ಬಾರದೆ ಬೆಳಗ್ಗೆ ಮನೆಗೆ ಬಂದ ಮಗಳ ಬಗ್ಗೆ ಅನುಮಾನಗೊಂಡ ತಾಯಿ ಪ್ರಶ್ನಿಸಿದ್ದಾರೆ. ಈ ವೇಳೆ ನಡೆದ ಘಟನೆ ಬಗ್ಗೆ ಹೇಳಿ ಪೊಲೀಸ್ ಠಾಣೆಗೆ ಅಪ್ರಾಪ್ತೆ ದೂರು ನೀಡಿದ್ದು, ದೂರಿನ ಮೇರೆಗೆ ಮೂರು ಮಂದಿ ಆರೋಪಿಗಳ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
