ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಮನೆಯೊಂದರ ಕೊಠಡಿಯ ಛಾವಣಿ ಮತ್ತು ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಸುತ್ತಿದ್ದ ಅವಧಿಯಲ್ಲಿ ಮನೆಯೊಳಗಿನ ಕಪಾಟಿನಲ್ಲಿಟ್ಟಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರ ಮತ್ತು ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್ ಒಟ್ಟು 6.37 ಲಕ್ಷ ರೂಪಾಯಿ ಬೆಲೆ ಬಾಳುವ ಸೊತ್ತುಗಳು ಕಳವಾಗಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 68/2026ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮನೆ ಕೆಲಸಕ್ಕೆ ಬಂದಿದ್ದ ಕೆಲಸಗಾರರನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ, ಉತ್ತರ ಪ್ರದೇಶ ಮೂಲದ ಆರೋಪಿ ಜಹೀರುದ್ದೀನ್, ಹಾಲಿ ವಾಸ: ಅಝೀಝುದ್ದೀನ್ ರಸ್ತೆ, ಬಂದರು, ಮಂಗಳೂರು ಎಂಬಾತನು ಚಿನ್ನಾಭರಣ ಹಾಗೂ ವಾಚನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಯಿಂದ ಕಳವಾಗಿದ್ದ ಸ್ವತ್ತುಗಳನ್ನು ಪೋಲೀಸರು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.
