ಮಣ್ಣಿನ ಮೊಮ್ಮಗನಿಗೆ ಜೀವಾವಧಿ.! ನೂರಾರು ಹೆಣ್ಣುಮಕ್ಕಳ ಮೈ ಹುರಿದು ಮುಕ್ಕಿದ ಪ್ರಜ್ವಲ್ ಜ್ವಾಲೆ ಕರಟಿತು..!

ರಾಜ್ಯ

ಹಣ ಮತ್ತು ಅಧಿಕಾರದ ದರ್ಪದಿಂದ ಅಮಾಯಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಪ್ರತಿಷ್ಠಿತರಿಗೆ ಇದು ಪಾಠವಾಗಬೇಕು

ಕಾಮಾತುರಣಂನ ಲಜ್ಜ ನ ಭಯಂ! ಎಂಬಂತೆ ಸೀತೆಯ ಸಾಂಗತ್ಯ ಬಯಸಿದ ರಾವಣ ದುರಂತ ಅಂತ್ಯ ಕಂಡ. ದ್ರೌಪದಿಯ ಮೋಹಕ್ಕೆ ಸಿಲುಕಿದ ದುರ್ಯೋಧನ ಸರ್ವನಾಶವಾದ. ಪಾಂಚಾಲಿಯ ಮುಡಿಗೆ ಕೈ ಹಾಕಿದ, ಸೀರೆಯ ಸೆಳೆದ ದುಶ್ಯಾಸನ ಸೇರಿದಂತೆ ಇಡೀ ಕುರುವಂಶವೇ ನಾಶವಾಯಿತು. ಇತಿಹಾಸಕ್ಕೆ ಬಂದರೆ ರಾಜಾಧಿರಾಜರುಗಳೇ ಹೆಣ್ಣಿನ ಚಪಲಕ್ಕೆ ಅಂಟಿಕೊಂಡಿದ್ದರಿಂದ ಕೋಟೆ -ಕೊತ್ತಲಗಳೇ ಉರುಳಿ ಹೋಗಿವೆ. ಇಷ್ಟೆಲ್ಲಾ ನಿದರ್ಶನಗಳಿರುವಾಗ ಹುಲುಮಾನವರು ಲೋಲುಪ್ತತೆಯ ಕಾರಣಕ್ಕೆ ಹೆಣ್ಣು ಮಕ್ಕಳ ಮೋಹಿಸಿ, ಕಾಮಿಸಿ, ಪೀಡಿಸಿ ಮಾನ ಕಳೆಯುವುದರ ಜೊತೆಗೆ, ಪ್ರಾಣದ ಜೊತೆಗೂ ಆಟವಾಡುವುದು ತರವಲ್ಲ. ಹೆಣ್ಣು ಮಕ್ಕಳ ಮಾನ -ಪ್ರಾಣದೊಂದಿಗೆ ಸರಸವಾಡಿದರೆ ಬೀದಿಗೆ ಬೀಳಬೇಕಾಗುತ್ತದೆ. ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬುದಕ್ಕೆ ಲೇಟೆಸ್ಟ್ ಉದಾಹರಣೆ ಪ್ರಜ್ವಲ್ ರೇವಣ್ಣ.

ನರ್ಸ್ ಜಯಲಕ್ಷ್ಮಿ ಸಹವಾಸದಲ್ಲಿ ಖುಲ್ಲಂ ಖುಲ್ಲಾ ಮಿಂದೆದ್ದ ರೇಣುಕಾಚಾರ್ಯ ಗೂಟದ ಕಾರು ಕಳೆದುಕೊಂಡರು. ಸ್ನೇಹಿತನ ಮನೆಯಲ್ಲಿ ಹಾದರ ಮಾಡಿದ ಹರತಾಳು ಹಾಲಪ್ಪ ಅಧಿಕಾರ ಕಳೆದುಕೊಂಡರು. ಮನೆ ಕೆಲಸದವಳ ಜೊತೆ ಸುಖದ ವೀಣೆ ಮೀಟಿದ ಮೇಟಿಯ ಜಿಲ್ಲಾ ರಾಜಕಾರಣದ ಯಜಮಾನಿಕೆಗೆ ಕುತ್ತು ಬಂತು. ಕೆಲಸ ಕೊಡಿಸುವ ಆಮಿಷವೊಡ್ಡಿ ಹುಡುಗಿ ಜೊತೆ ರಸಿಕತೆ ಮೆರೆದ ರಮೇಶ್ ಜಾರಕಿಹೊಳಿ ರಾಜಕಾರಣದಲ್ಲಿ ಬರ್ಬಾದ್ ಆಗಿ ಹೋದರು. ಹುಡುಗಿಯೊಂದಿಗೆ ಪೋಲಿ ಮಾತುಗಳಾಡಿದ್ದ ಮಾಜಿ ಸಿಎಂ ಸದಾನಂದ ಗೌಡರ ರಾಜಕಾರಣವೇ ನೇಪಥ್ಯಕ್ಕೆ ಸರಿಯಿತು. ಈವಾಗ ನೂರಾರು ಹೆಣ್ಣುಮಕ್ಕಳ ಮೈ ಹುರಿದು ಮುಕ್ಕಿದ ಪ್ರಜ್ವಲ್ ಜ್ವಾಲೆಯೇ ಕರಟಿ ಹೋಯಿತು. ಸಂಸದ ಚುನಾವಣೆಯಲ್ಲಿ ಮಕಾಡೆ ಮಲಗಿ, ವಿದೇಶದಲ್ಲಿ ಬರೋಬ್ಬರಿ ಮೂವತ್ತನಾಲ್ಕು ದಿನ ತಲೆ ಮರೆಸಿ ಎಸ್ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿ ಇದೀಗ ಮನೆಕೆಲಸದಾಕೆಯ ಮೇಲೆ ರೇಪ್ ಸಾಬೀತಾಗಿ ನ್ಯಾಯಾಲಯದಿಂದ ದೋಷಿ ಅನ್ನಿಸಿಕೊಂಡು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಮೊದಲ ಕೇಸ್ ನಲ್ಲೇ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ. ಇನ್ನು ಮೂರು ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. ಅದರಲ್ಲೂ ಆರೋಪ ಸಾಬೀತಾದರೆ ಜೀವನ ಪರ್ಯಂತ ಜೈಲಿನಿಂದ ಹೊರಬರಲು ಮಣ್ಣಿನ ಮೊಮ್ಮಗನಿಗೆ ಸಾಧ್ಯವಿಲ್ಲ. ಪ್ರತಿಷ್ಠಿತ ಕುಟುಂಬದ ಕುಡಿಯೊಂದು ಹೆಣ್ಣಿನ ಮೋಹ, ವಿಕೃತ ಕೆಲಸಕ್ಕೆ ಸಿಲುಕಿ ಮೂರಾಬಟ್ಟೆಯಾಗಿದೆ . ಹಣ ಮತ್ತು ಅಧಿಕಾರದ ದರ್ಪದಿಂದ ಅಮಾಯಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಪ್ರತಿಷ್ಠಿತರಿಗೆ ಇದೊಂದು ಪಾಠವಾಗಬೇಕು.