ಮಧ್ಯರಾತ್ರಿ ನಡೆದ ಭಯಾನಕ ಮರ್ಡರ್ ಗೆ ಕಾರ್ಕಳ ಕುಂಟಲ್ಪಾಡಿ ಜನತೆ ಬೆಚ್ಚಿಬಿದ್ದಿದ್ದರು. ಅಷ್ಟಕ್ಕೂ ಹತ್ಯೆಯಾದವ ಮಂಗಳೂರು ಮೂಲದ ನವೀನ್ ಪೂಜಾರಿ. ಹತ್ಯೆಯ ಹಿನ್ನೆಲೆಯನ್ನು ಕೆಲವೇ ಗಂಟೆಗಳಲ್ಲಿ ಭೇದಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಈ ಹತ್ಯೆ ನಡೆದಿದ್ದು ‘ಬಂಗಾರಿ’ ಗಾಗಿ. ಹಂತಕ ಬೆಳ್ತಂಗಡಿ ಮೂಲದ ಪರೀಕ್ಷಿತ್ ಅಂದರ್ ಆಗಿದ್ದಾನೆ.

ಬಂಗಾರಿ’ ಬುಲ್ ಬುಲ್!
ಮಂಗಳೂರು ಮೂಲದ ಪಡೀಲ್ ನಿವಾಸಿಯಾಗಿರುವ ನವೀನ್ ಪೂಜಾರಿ ಪತ್ನಿ, ಮಕ್ಕಳನ್ನು ಮಂಗಳೂರಿನಲ್ಲಿ ಬಿಟ್ಟು ಕಳೆದ ನಾಲ್ಕೈದು ವರ್ಷಗಳಿಂದ ಕಾರ್ಕಳದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ. ಬಡ್ಡಿ ವ್ಯವಹಾರ ನಡೆಸುತ್ತಾ ಇಲ್ಲೇ ಸೆಟ್ಲ್ ಆಗಿದ್ದಾನೆ. ಈತನಿಗೊಬ್ಬ ಕುಚುಕು ಕುಚುಕು ದೋಸ್ತ್ ಇದ್ದ. ಆತನೇ ಬೆಳ್ತಂಗಡಿ ಮೂಲದ ಪರೀಕ್ಷಿತ್. ಪದ್ಮಾಂಬಿಕ ಬಸ್ ಚಾಲಕನಾಗಿರುವ ಈತ ಪತ್ನಿಗೆ ವಿಚ್ಛೇದನೆ ಕೊಟ್ಟು ದೂಪದಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ನವೀನ್ ಪೂಜಾರಿ ಪತ್ನಿಯನ್ನು ದೂರವೇ ಬಿಟ್ಟು ವಾಸವಿದ್ದ, ಪರೀಕ್ಷಿತ್ ಡೈವೋರ್ಸ್ ಕೊಟ್ಟು ಹೊಸ ಗರ್ಲ್ ಫ್ರೆಂಡ್ ಜೊತೆ ಚಕ್ಕಂದವಾಡುತ್ತಿದ್ದ. ಪ್ರಾಣ ಸ್ನೇಹಿತನ ಗರ್ಲ್ ಫ್ರೆಂಡ್ ಜೊತೆ ನವೀನ್ ಪೂಜಾರಿ ಕಣ್ಣು ಹಾಕಿದ್ದ. ನವೀನ್ -ಬಂಗಾರಿ ನಡುವಿನ ಆತ್ಮೀಯತೆ ಪರೀಕ್ಷಿತ್ ನನ್ನು ಕೆಣಕಿತ್ತು. ಇವರಿಬ್ಬರ ನಡುವೆ ಹೊಡೆದಾಟ ಕೂಡ ನಡೆದಿತ್ತು. ಸೋಮವಾರದಂದು ದೂಪದಕಟ್ಟೆ ಬಾರ್ ನಲ್ಲಿ ಒಟ್ಟಿಗೆ ಕುಳಿತು ಪೆಗ್ ಹಾಕಿದ್ದರು. ಎಣ್ಣೆ ಏಟು ನವೀನ್ -ಬಂಗಾರಿ ಮಧ್ಯೆ ಸಂಬಂಧದ ರೌದ್ರಾವತಾರ ತೋರಿತ್ತು. ಪರೀಕ್ಷಿತ್ ತನ್ನ ಗರ್ಲ್ ಫ್ರೆಂಡ್ ಜೊತೆಗಿನ ಸಖ್ಯದ ಬಗೆಗೆ ಪ್ರಶ್ನಿಸಿದ್ದ. ನಂತರ ಇವರಿಬ್ಬರೂ ಮನೆ ಸೇರಿದ್ದರು. ಎಣ್ಣೆಯ ಮಹಿಮೆಯೋ ಏನೋ ಮಧ್ಯರಾತ್ರಿ ಹೊತ್ತಿಗೆ ನವೀನ್ ಪರೀಕ್ಷಿತ್ ನಿಗೆ ಫೋನಾಯಿಸಿ ದಬಾಯಿಸಿದ್ದ. ಆನೆಕೆರೆಯಲ್ಲಿನ ಬಾರ್ ಗೆ ಬರುವಂತೆ ಸೂಚಿಸಿದ್ದ. ಮೊದಲೇ ಗಲಾಟೆ ನಡೆದಿದ್ದುದರಿಂದ ಪರೀಕ್ಷಿತ್ ಚೂರಿ ಇಟ್ಟುಕೊಂಡು ತೆರಳಿದ್ದ. ‘ಬಂಗಾರಿ’ ವಿಷಯ ಮತ್ತೆ ಹೊರ ಬಂದ ಕಾರಣ ತನ್ನಲ್ಲಿದ್ದ ಚಾಕುವಿನಿಂದ ಪರೀಕ್ಷಿತ್ ಇರಿದು ಪ್ರಾಣ ಸ್ನೇಹಿತನನ್ನೇ ಕೊಂದು ಬಿಟ್ಟಿದ್ದ. ಕುಚುಕು ಕುಚುಕು ದೋಸ್ತ್ ನ ಭಯಾನಕ ಇರಿತಕ್ಕೆ ನವೀನ್ ಸ್ಪಾಟಲ್ಲೇ ಉಸಿರು ಚೆಲ್ಲಿದ್ದ.

ತಿಂಗಳ ಅಂತರದಲ್ಲಿ ಎರಡು ಮರ್ಡರ್
ಉಡುಪಿ ಜಿಲ್ಲೆಯಲ್ಲಿ ಪಾತಾಳಕ್ಕಿಳಿದಿದ್ದ ಕ್ರೈಂ ಮತ್ತೆ ಚಿಗಿತುಕೊಳ್ಳಲು ಆರಂಭಿಸಿದೆ. ಆದರೆ ಇದು ವೈಯಕ್ತಿಕ ಕಾರಣಕ್ಕಾಗಿ ನಡೆಯುತ್ತಿರುವುದರಿಂದ ದೊಡ್ಡ ಸದ್ದು ಮಾಡುತ್ತಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಉಡುಪಿಯ ಪುತ್ತೂರಿನಲ್ಲಿ ಕ್ಲುಲ್ಲಕ ಕಾರಣಕ್ಕಾಗಿ ಮೂವರು ಸ್ನೇಹಿತರು ಮನೆಗೆ ನುಗ್ಗಿ ಪತ್ನಿ, ಮಕ್ಕಳ ಎದುರೇ ಪ್ರಾಣ ಸ್ನೇಹಿತನನ್ನೇ ಕೊಚ್ಚಿ ಕೊಂದಿದ್ದರು. ಇದೀಗ ಗರ್ಲ್ ಫ್ರೆಂಡ್ ವಿಚಾರದಲ್ಲಿ ಪ್ರಾಣ ಸ್ನೇಹಿತನ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ. ಕಷ್ಟಕಾಲದಲ್ಲಿ ಕೈ ಹಿಡಿಯಬೇಕಾದ ಗೆಳೆಯರೇ ಕಿರಾತಕರಾಗುತ್ತಿರುವುದು ಮಾತ್ರ ದುರಂತ.
