ಸೈಬರ್ ಖದೀಮರ ಬೆಚ್ಚಿ ಬೀಳಿಸುವ ಬ್ರಹ್ಮಾಂಡ ರೂಪ.! ರಾಜ್ಯದಲ್ಲಿ ಏಳೇ ತಿಂಗಳಲ್ಲಿ 1,287 ಕೋಟಿ ರೂಪಾಯಿ ವಂಚನೆ

ರಾಷ್ಟ್ರೀಯ

ಪ್ರತಿಗಂಟೆಗೆ 65 ಲಕ್ಷ ರೂಪಾಯಿ ಸೈಬರ್ ವಂಚಕರ ಪಾಲು.. ಪೊಲೀಸರಿಗೆ ಸವಾಲಾಗುತ್ತಿರುವ ಕಿರಾತಕರು.!

ಭಾರತವು ಡಿಜಿಟಲ್ ಇಂಡಿಯಾದತ್ತ ಸಾಗುತ್ತಿದ್ದಂತೆ ಸೈಬರ್ ಅಪರಾಧಗಳ ಪಿಡುಗು ಕೂಡ ಭಯಾನಕ ವೇಗದಲ್ಲಿ ಹೆಚ್ಚುತ್ತಿದೆ. ಕರ್ನಾಟಕವು ದೇಶದ ಟೆಕ್ ಹಬ್ ಆಗಿ ಗುರುತಿಸಿಕೊಂಡಿದ್ದರೂ, ಸೈಬರ್ ಖದೀಮರ ಪಾಲಿಗೆ ಸುಲಭವಾಗಿ ತುತ್ತಾಗುತ್ತಿದೆ. ಸೈಬರ್ ಅಪರಾಧಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಆದರೆ ಇದಕ್ಕೆ ಕಡಿವಾಣ ಹಾಕುವಲ್ಲಿ ಈವರೆಗೂ ಯಶಸ್ಸು ಕಂಡಿಲ್ಲ ಅನ್ನುವುದೇ ದುರ್ದೈವದ ಸಂಗತಿ.

ಇಡೀ ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. 2025 ರ ಆರಂಭದಿಂದ ಜುಲೈ ಅಂತ್ಯದವರೆಗೆ ಕರ್ನಾಟಕದಲ್ಲಿ ಸೈಬರ್ ವಂಚನೆಯಿಂದ ಒಟ್ಟು 1,287 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. 8 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸೈಬರ್ ಖದೀಮರು ಪ್ರತಿದಿನ 4.6 ಕೋಟಿ ರೂಪಾಯಿ ಹಾಗೂ ಪ್ರತಿ ಗಂಟೆಗೆ ಅಂದಾಜು 65 ಲಕ್ಷ ರೂಪಾಯಿ ಕಬಳಿಸುತ್ತಿದ್ದಾರೆ .

ಹೂಡಿಕೆ, ಉದ್ಯೋಗ, ಉಡುಗೊರೆ, ಕೊರಿಯರ್ ಸೇವೆ ಇತ್ಯಾದಿ ಸುಳ್ಳು ಭರವಸೆಗಳನ್ನು ನೀಡಿ ಸೈಬರ್ ವಂಚಕರು ಅಮಾಯಕ ಜನರನ್ನು ಯಾಮಾರಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಂಚಕರು ದಿನದಿಂದ ದಿನಕ್ಕೆ ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಆನ್ ಲೈನ್ ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರ ಅಥವಾ ಒಟಿಪಿ ನಂಬರ್ ಕೇಳಿ ಸೈಬರ್ ವಂಚಕರು ಸಂಪರ್ಕಿಸಿ ಮುಂಡಾಮೋಚುತ್ತಿದ್ದಾರೆ.

ಕಳೆದ 17 ತಿಂಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ, ಈ ಪೈಕಿ ಕೇವಲ 3,257 ಪ್ರಕರಣಗಳನ್ನು ಮಾತ್ರ ಪತ್ತೆಹಚ್ಚಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಇದುವರೆಗೆ ಕೇವಲ 23 ಮಂದಿ ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವಂತೆ, ಅಪರಾಧ ಗಳನ್ನು ಪತ್ತೆ ಹಚ್ಚುವ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಪ್ರಮಾಣ ಕಡಿಮೆಯಾಗುತ್ತಿರುವ ತೀವ್ರ ಕಳವಳಕಾರಿಯಾಗಿದೆ.

ಬೆಂಗಳೂರು ಸೈಬರ್ ವಂಚಕರ ಹಾಟ್ ಸ್ಪಾಟ್ ಆಗಿದೆ. ಅದರ ಜೊತೆಗೆ ಮಂಗಳೂರು, ಮೈಸೂರು, ತುಮಕೂರು, ಹುಬ್ಬಳ್ಳಿ- ಧಾರವಾಡ ದಂತಹ ನಗರಗಳಲ್ಲೂ ಸೈಬರ್ ವಂಚಕರ ಆಟಾಟೋಪಗಳು ಮುಗಿಲು ಮುಟ್ಟಿದೆ.