ಸಿಪಿಎಸ್ ತಜ್ಞರ ತಂಡ ಇತ್ತೀಚೆಗೆ ತಿಹಾರ್ ಜೈಲಿಗೆ ಭೇಟಿ, ಹೈ ಪ್ರೊಫೈಲ್ ಬ್ಯಾರಕ್ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಶಿಫಾರಸು
ವಿದೇಶದಲ್ಲಿ ಅವಿತಿರುವ ಮಲ್ಯ, ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ನ್ಯಾಯಾಂಗ ವ್ಯವಸ್ಥೆ ಈಗಾಗಲೇ ಒಪ್ಪಿಗೆ ನೀಡಿದ್ದು, ಈಗಾಗಲೇ ಅಲ್ಲಿನ ತಜ್ಞರ ತಂಡವೊಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ಮಲ್ಯ ಅಥವಾ ನೀರವ್ ಮೋದಿಯವರಿಗಾಗಿ ನಿಗದಿಗೊಳಿಸಲಾಗಿರುವ ಹೈ ಸೆಕ್ಯುರಿಟಿ ಜೈಲು ಕೊಠಡಿಗಳ ಸಮುಚ್ಛಯಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಈಗಾಗಲೇ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ, ಯುಕೆ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೆ ಯುಕೆಯಲ್ಲಿ ನೆಲೆಸಿರುವ ಭಾರತ ಮೂಲತ ಕಳ್ಳಸಾಗಣೆದಾರರು, ಅಕ್ರಮ ಶಸ್ತ್ರಾಸ್ತ್ರ ಸರಬರಾಜುದಾರರು ಸೇರಿ ಒಟ್ಟು 20 ಮಂದಿಯನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಭಾರತ ಸರ್ಕಾರ, ಯುಕೆ ಸರ್ಕಾರವನ್ನು ಕೋರಿದೆ.

ಮಲ್ಯ ಹಾಗೂ ನೀರವ್ ಮೋದಿ ಈಗಾಗಲೇ ಯುಕೆ ಪ್ರಜೆಗಳಾಗಿರುವುದರಿಂದ ಭಾರತಕ್ಕೆ ಅವರನ್ನು ಹಸ್ತಾಂತರಿಸುವ ಮುನ್ನ ಅವರ ಭದ್ರತೆ ಹಾಗೂ ಅವರ ಯೋಗಕ್ಷೇಮದ ಬಗ್ಗೆ ಮೊದಲೇ ಮನದಟ್ಟು ಮಾಡಿಕೊಳ್ಳಲು ಯುಕೆಯ ಸಿಪಿಎಸ್ ತಜ್ಞರ ತಂಡ ಇತ್ತೀಚೆಗೆ ತಿಹಾರ್ ಜೈಲಿಗೆ ಭೇಟಿ ನೀಡಿತ್ತು ಎಂದು ರಾಷ್ಟ್ರೀಯ ಪತ್ರಿಯೊಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.(ಕ್ರೌನ್ ಪ್ರಾಸೆಕ್ಯೂಷನ್ ಸರ್ವೀಸ್ (ಸಿಪಿಎಸ್) ಎಂಬುದು ಯುಕೆ ನಲ್ಲಿ ಸಂವಿಧಾನಾತ್ಮಕ ರಚನೆಯಾಗಿರುವ ಸ್ವಾಯತ್ತ ಸಂಸ್ಥೆ).

ತಿಹಾರ್ ಜೈಲಿಗೆ ಬಂದಿದ್ದ ಅಧಿಕಾರಿಗಳು, ಹೈ ಪ್ರೊಫೈಲ್ ಕೈದಿಗಳ ಬರಾಕ್ ನಲ್ಲಿ ಈಗಾಗಲೇ ಇರುವ ಕೆಲವು ಗಣ್ಯ ಕೈದಿಗಳನ್ನು ಮಾತನಾಡಿಸಿ, ಜೈಲಿನಲ್ಲಿ ಹಾಗೂ ಅವರ ಬ್ಯಾರಕ್ ಗಳಲ್ಲಿ ಇರುವ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದಿದೆ. ಜೈಲು ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದೆ. ಇದೀಗ ಯುಕೆ ಗೆ ವಾಪಸ್ಸಾಗಿರುವ ಆ ತಂಡ, ಅಲ್ಲಿ ತಾನು ತಿಹಾರ್ ಜೈಲಿನಲ್ಲಿ ಕಲೆಹಾಕಿರುವ ಮಾಹಿತಿಯೆಲ್ಲವನ್ನೂ ಅವಲೋಕಿಸುತ್ತದೆ. ಅವಶ್ಯಕತೆಯಿದ್ದರೆ, ನೀರವ್ ಮೋದಿ, ವಿಜಯ್ ಮಲ್ಯರಂಥವರಿಗೆ ಮತ್ತಷ್ಟು ಉನ್ನತ ಮಟ್ಟದ ಭದ್ರತೆ ಒದಗಿಸಬೇಕು ಅಥವಾ ಅವರಿಗಾಗಿ ತೀವ್ರ ಭದ್ರತೆಯುಳ್ಳ ಹೊಸ ಬ್ಯಾರಕ್ ಗಳನ್ನೇ ಸೃಷ್ಟಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಗಳಿವೆ.
