ಅಧ್ಯಕ್ಷೆಯ ತಾಳಕ್ಕೆ ಹೆಜ್ಜೆ ಹಾಕಿದ ಬಿಲ್ ಕಲೆಕ್ಟರ್ ವಿಲಿಯಂ ಕೂಡಾ ಅಂದರ್
ವಿಟ್ಲ: ಕೃಷಿ ಜಮೀನಿಗೆ ಕೊಳವೆ ಬಾವಿ ಮಂಜೂರಾತಿಗೆ ಹತ್ತು ಸಾವಿರ ಲಂಚ ಪಡೆಯುತ್ತಿದ್ದಾಗ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಫೀಸಾ ಹಾಗೂ ಬಿಲ್ ಕಲೆಕ್ಟರ್ ವಿಲಯಂ ಎಂಬಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೆರುವಾಯಿ ಗ್ರಾಮದ ದೂರುದಾರರ ಮಾವನಾದ ವೃದ್ಧ (75) ರೊಬ್ಬರ ಒಂದು ಎಕರೆ ಕೃಷಿ ಜಮೀನಿಗೆ ಸರಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಕೊಳವೆ ಬಾವಿಗಾಗಿ 2024ರಲ್ಲಿ ಪೆರುವಾಯಿ ಗ್ರಾ ಪಂ ಪಿಡಿಒ ಅವರಿಗೆ ಅರ್ಜಿ ಸಲ್ಲಿಸಿದ್ದರು. 2024ನೇ ಸಾಲಿನಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸತಾಯಿಸಿ ಕೊನೆಗೆ ದೂರುದಾರರ ಮಾವನವರ ಹೆಸರನ್ನು ಕೊಳವೆ ಬಾವಿ ಲಿಸ್ಟಿನಲ್ಲಿ ಸೇರಿಸಿಲ್ಲವಾಗಿತ್ತು.
2025ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸರಕಾರ ಬಡ ಕೃಷಿಕರಿಗೆ ಕೊಳವೆ ಬಾವಿ ಮಾಡಿಕೊಡುತ್ತಿರುವ ವಿಚಾರ ತಿಳಿದುಬಂದಿತ್ತು. ದೂರುದಾರರ ಮಾವನವರು ಮತ್ತೆ 2025ರ ಮೇ ತಿಂಗಳಲ್ಲಿ ಕೊಳವೆ ಬಾವಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ದೂರುದಾರರ ಪತ್ನಿ ಪೆರುವಾಯಿ ಗ್ರಾಮ ಪಂಚಾಯತ್ ಕಛೇರಿಗೆ 2-3 ಬಾರಿ ಹೋಗಿ ವಿಚಾರಿಸಿದರೂ ಅಧ್ಯಕ್ಷೆ ನಫಿಸಾ ಮತ್ತು ಸಿಬ್ಬಂದಿಗಳು ಸರಿಯಾಗಿ ಪ್ರತಿಕ್ರಿಯೆ ನೀಡಿರುವುದಿಲ್ಲ. ದೂರುದಾರರ ಮಾವನಿಗೆ ಸುಮಾರು 75ವರ್ಷ ವಯಸ್ಸು ಹಾಗೂ ತೀರಾ ಅಸೌಖ್ಯ ಇದ್ದುದರಿಂದ ದೂರುದಾರರನ್ನು ಕರೆದು ಕೊಳವೆ ಬಾವಿ ಬಗ್ಗೆ ಪಂಚಾಯತ್ ಕಚೇರಿಗೆ ಹೋಗಿ ವಿಚಾರಿಸುವಂತೆ ತಿಳಿಸಿದ್ದಾರೆ.

ದೂರುದಾರರು ಸೆಪ್ಟೆಂಬರ್ 2ರಂದು ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಹೋಗಿ ಪಂಚಾಯತ್ ಅಧ್ಯಕ್ಷೆ ನಫಿಸಾ ಅವರಲ್ಲಿ ತನ್ನ ಮಾವನವರ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ ಎಂಬ ಬಗ್ಗೆ ವಿಚಾರಿಸಿದಾಗ ‘ನಿಮಗೆ ಕೊಳವೆ ಬಾವಿ ಉಚಿತ ಆಗುತ್ತದೆ, ಆದರೆ ಬೆಂಗಳೂರು ಆಫೀಸಿಗೆ ಹತ್ತು ಸಾವಿರ ಕೊಡಲಿಕ್ಕಿದೆ. ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ, ತಾನು ಬೆಂಗಳೂರಿಗೆ ಹೋಗಿ ನಿಮ್ಮ ಎಲ್ಲಾ ಕೆಲಸ ಮಾಡಿಸುತ್ತೇನೆ, ಹಣ ತಗೊಂಡು ಬನ್ನಿ, ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಮಂಜೂರು ಮಾಡಿಸುತ್ತೇನೆ’ ಎಂದು ನಫಿಸಾ ಹೇಳಿದ್ದರೆನ್ನಲಾಗಿದೆ. ಈ ಸಂದರ್ಭ ದೂರುದಾರರು ತನ್ನಲ್ಲಿ ಅಷ್ಟು ಹಣ ಇಲ್ಲ, ನಾವು ಬಡವರು ಎಂದು ಹೇಳಿ ವಾಪಾಸು ಬಂದಿರುತ್ತಾರೆ.
ಬಳಿಕ ದೂರುದಾರು ಸೆ 4ರಂದು ಮತ್ತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫಿಸಾ ಅವರಲ್ಲಿ ಕೊಳವೆ ಬಾವಿ ಮಂಜೂರು ಮಾಡಿಸಲು ಕೇಳಿಕೊಂಡಾಗ ಅವರು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಹಾಕಿಸಲು10 ಸಾವಿರ ರೂಪಾಯಿ ಲಂಚದ ಬೇಡಿಕೆಯಿಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತದಲ್ಲಿ ಪೆರುವಾಯಿ ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ನಫಿಸಾ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

ಶನಿವಾರ (ಸೆ 6) ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಫೀಸಾ ಅವರು ಪಂಚಾಯತ್ ಬಿಲ್ ಕಲೆಕ್ಟರ್ ವಿಲಿಯಂ ಅವರಿಗೆ ದೂರುದಾರರಿಂದ 10 ಸಾವಿರ ರೂಪಾಯಿ ಲಂಚದ ಹಣವನ್ನು ಪಡೆದುಕೊಳ್ಳಲು ಸೂಚಿಸಿದಂತೆ ಅವರು 10 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದಂತೆ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಂಚಾಯತ್ ಅಧ್ಯಕ್ಷೆ ನಫಿಸಾ ಹಾಗೂ ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಇಲಾಖೆಯ ಡಿವೈಎಸ್ಪಿಗಳಾದ ಡಾ ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀಮತಿ ಭಾರತಿ ಜಿ, ಚಂದ್ರಶೇಖರ್ ಕೆ ಎನ್, ರವಿ ಪವಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
