ಕೇರಳದ ವಯನಾಡು ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಜನರು ‘ಮ್ಯೂಲ್ ಅಕೌಂಟ್’ (ಒಂದು ಬಗೆಯಲ್ಲಿ ಬಾಡಿಗೆ ರೂಪದಲ್ಲಿ ಬ್ಯಾಂಕ್ ಖಾತೆ ಪಡೆದು ಅದನ್ನು ಹಣ ಅಕ್ರಮ ವರ್ಗಾವಣೆ ಚಟುವಟಿಕೆಗಳಿಗೆ ಬಳಸುವುದು) ದಂಧೆಗೆ ಬಲಿಯಾಗಿ ಗಂಭೀರ ಕಾನೂನು ಸಂಕಷ್ಟ ಎದುರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರಿಂದ ಹೀಗೆ ಮೋಸ ಹೋದವರಲ್ಲಿ ಮಹಿಳೆಯರು ಹಾಗೂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸೈಬರ್ ಪೊಲೀಸರು ಹೇಳಿದ್ದಾರೆ.
ಜಿಲ್ಲೆಯ ಹೊರಗಿನಿಂದ ಬಂದ ವಂಚಕರು ಸ್ಥಳೀಯರಿಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆ ನೀಡುವಂತೆ ಆಮಿಷ ಒಡ್ಡಿ, ಬಳಿಕ ಅವರು ಆ ಖಾತೆಗಳನ್ನು ಅಕ್ರಮ ಹಣಕಾಸು ವಹಿವಾಟುಗಳಿಗೆ ಬಳಸಿದ್ದಾರೆ. ಇದರಿಂದಾಗಿ ಈಗ ಖಾತೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಖಾತೆ ನೀಡಿದ ಸ್ಥಳೀಯರು ಈಗ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

‘ಮ್ಯೂಲ್ ಅಕೌಂಟ್’ ದಂಧೆ ಪ್ರಕರಣ ಸಂಬಂಧ ಕಂಬಲಕ್ಕಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರು ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ಅವರ ಹೆಸರಿನಲ್ಲಿ ನಕಲಿ ಕಂಪನಿ ಹಾಗೂ ಬ್ಯಾಂಕ್ ಖಾತೆ ತೆರೆದು ಮಾರಾಟದ ಜಾಲ ದ.ಕ ಜಿಲ್ಲೆಗೂ ಆವರಿಸಿತ್ತು. ಕಾರ್ಮಿಕರಿಗೆ ಕಮಿಷನ್ ಆಸೆ ತೋರಿಸಿ ಅವರ ಆಧಾರ್ ಹಾಗೂ ಪಾನ್ ಕಾರ್ಡ್ ಪಡೆದುಕೊಳ್ಳುತ್ತಿದ್ದ ಆರೋಪಿಗಳು, ಅವರ ಹೆಸರಿನಲ್ಲಿ ನಕಲಿ ಕಂಪನಿ ಸೃಷ್ಟಿಸುತ್ತಿದ್ದರು. ಬಳಿಕ ಅದೇ ಕಂಪನಿಯ ಹೆಸರಿನಲ್ಲಿ ನೂರಾರು ಬ್ಯಾಂಕ್ ಖಾತೆಗಳನ್ನು ತೆರೆದು ಅವುಗಳನ್ನು ಸೈಬರ್ ವಂಚಕರಿಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು. ನಕಲಿ ದಾಖಲೆ ನೀಡಿ ತೆರೆದಿದ್ದ ಬ್ಯಾಂಕ್ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಇತ್ತೀಚೆಗೆ ಪುತ್ತೂರಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಈ ದಂಧೆ ಬೆಳಕಿಗೆ ಬಂದಿತ್ತು.
ಕಾರ್ಮಿಕರ ದಾಖಲೆಗಳನ್ನು ಆರೋಪಿಗಳು ಪಡೆದುಕೊಂಡು ಪ್ರತಿ ದಾಖಲೆಗೆ ರೂ. 4ಸಾವಿರದಿಂದ 5 ಸಾವಿರ ನೀಡುತ್ತಿದ್ದರು. ಬ್ಯಾಂಕ್ ಖಾತೆಗಳನ್ನು ಸೈಬರ್ ಕಳ್ಳರಿಗೆ ಮಾರಾಟ ಮಾಡಿ ಆರೋಪಿಗಳು ಅವರಿಂದ ಲಕ್ಷಾಂತರ ಮೊತ್ತದ ಹಣ ಪಡೆದುಕೊಳ್ಳುತ್ತಿದ್ದರು. ಈ ಖಾತೆಗಳನ್ನು ಸೈಬರ್ ಕಳ್ಳರು ವಂಚನೆಗೆ ಬಳಸಿಕೊಳ್ಳುತ್ತಿದ್ದರು. ಡಿಜಿಟಲ್ ಅರೆಸ್ಟ್, ಹೂಡಿಕೆ ಹೆಸರಿನಲ್ಲಿ ಈ ಖಾತೆಗಳಿಗೆ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದರು.
