ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಏಳು ದಿನಗಳ ಕಾಲ ಮದ್ಯ ಕುಡಿಸಿ, ಬರೋಬ್ಬರಿ 23 ಜನರಿಂದ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ದಾಖಲಾಗಿದೆ.
ಕಳೆದ ಮಾರ್ಚ್ 29 ರಿಂದ ಏಪ್ರಿಲ್ 4 ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ puc ತರಗತಿಯ ವಿದ್ಯಾರ್ಥಿನಿಯ ಮೇಲೆ 20 ಕ್ಕೂ ಅಧಿಕ ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರು 23 ಮಂದಿ ಪುರುಷರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಅವರಲ್ಲಿ 11 ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈವರೆಗೆ ಆರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 29 ರಂದು ವಾರಣಾಸಿಯ ಪಿಶಾಚ್‌ಮೋಚನ್ ಪ್ರದೇಶದಲ್ಲಿ ಸ್ನೇಹಿತೆಯೊಬ್ಬಳು ಹುಕ್ಕಾ ಬಾರ್‌ಗೆ ಕರೆದುಕೊಂಡು ಹೋದಾಗ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಪೊಲೀಸರ ಪ್ರಕಾರ ಸಂತ್ರಸ್ತೆ ಕ್ರೀಡಾ ಕೋರ್ಸ್‌ಗೆ ಪ್ರವೇಶಕ್ಕಾಗಿ ತಯಾರಿ ನಡೆಸುತ್ತಿದ್ದಳು ಮತ್ತು ನಿಯಮಿತವಾಗಿ ಯುಪಿ ಕಾಲೇಜಿಗೆ ರನ್ನಿಂಗ್ ರೇಸ್ ನ ಅಭ್ಯಾಸಕ್ಕಾಗಿ ಹೋಗುತ್ತಿದ್ದಳು. ಆಕೆಯ ಹೇಳಿಕೆಯ ಪ್ರಕಾರ ಮಾರ್ಚ್ 29 ರಂದು ತನ್ನನ್ನು ಸ್ನೇಹಿತೆಯೊಬ್ಬಳು ಪಿಶಾಚ್‌ಮೋಚನ್ ಪ್ರದೇಶದ ಹುಕ್ಕಾ ಬಾರ್‌ಗೆ ಕರೆದೊಯ್ದಿದ್ದಳು. ಅಲ್ಲಿ ಆಕೆಯೊಂದಿಗೆ ಇತರ ಪುರುಷರು ಕೂಡಾ ಸೇರಿಕೊಂಡಿದ್ದಾರೆ. ತನಗೆ ಅಮಲು ಪದಾರ್ಥ ಬೆರೆಸಿದ ತಂಪು ಪಾನೀಯವನ್ನು ನೀಡಿ, ನಂತರ ಸಿಗ್ರಾ ಪ್ರದೇಶದ ವಿವಿಧ ಹೋಟೆಲ್‌ಗಳಿಗೆ ಕರೆದೊಯ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಆರೋಪಿಗಳಲ್ಲಿ ಕೆಲವರು ಆಕೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತರು ಮತ್ತು ಕೆಲವರು ಮಾಜಿ ಸಹಪಾಠಿಗಳು ಎನ್ನಲಾಗಿದೆ. ಹುಡುಗಿಯ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಮತ್ತು ಹುಕ್ಕಾ ಬಾರ್‌ನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ಭಾಗವಾಗಿ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದೂರಿನ ಆಧಾರದ ಮೇಲೆ, ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
