ಬೈಂದೂರು ಕ್ಷೇತ್ರಕ್ಕೆ ಅದು ಯಾರ ಶಾಪ ತಟ್ಟಿದೆಯೋ ಅ ದೇವರೇ ಬಲ್ಲ. ಕಾಂಗ್ರೆಸ್ ಗೆದ್ದರೂ ಹಾಗೆ, ಬಿಜೆಪಿ ಗೆದ್ದರೂ ಹಾಗೆ, ಬೈಂದೂರು ಬಿಜೆಪಿ ಬಡಿದಾಟ

ರಾಜ್ಯ

ಈ ಬೈಂದೂರು ಕ್ಷೇತ್ರಕ್ಕೆ ಅದು ಯಾರ ಶಾಪ ತಟ್ಟಿದೆಯೋ ದೇವರೇ ಬಲ್ಲ. ಕಾಂಗ್ರೆಸ್ ಗೆದ್ದರೂ ಹಾಗೆ, ಬಿಜೆಪಿ ಗೆದ್ದರೂ ಹಾಗೆ, ಈ ಕ್ಷೇತ್ರ ಹಾಗೆಯೇ ಇದೆ. ಗೋಪಾಲ ಪೂಜಾರಿಯವರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರದ ಇಂಚಿಂಚೂ ಕೂಡ ಬಲ್ಲವರು. ಗುರುರಾಜ ಗಂಟಿಹೊಳೆ ಅವರು ಹಿಂದುತ್ವದ ಅಲೆಯಲ್ಲಿ ಗೆದ್ದುಬಂದವರು. ಒಂದಿಷ್ಟು ದೂರದೃಷ್ಟಿ ಚಿಂತನೆಗಳು, ವಿಪರೀತ ನಾಲೇಜ್ ಎಲ್ಲವೂ ವರ್ಕೌಟ್ ಆಗುತ್ತಿಲ್ಲ.

ಬೈಂದೂರು ಬಿಜೆಪಿ ಅಧ್ಯಕ್ಷರಂತೂ ರಾಜಕೀಯವಾಗಿ ತೊಳಲಾಟದಲ್ಲಿದ್ದಾರೆ. ಆಳಿಗೊಂದು ಕಲ್ಲು ಎಂಬಂತೆ ಅಧ್ಯಕ್ಷರ ಮೇಲೆ ಬಣ ರಾಜಕೀಯದ ಬಿಜೆಪಿಗರು ಬಾರ ಹೊರೆಸಿಟ್ಟಿದ್ದಾರೆ. ಅತ್ತ ತಿರುಗಲು ಆಗದೇ ಇತ್ತ ಮೈ ಕೊಡವಿ ಏಳಲಾಗದ ಪರಿಸ್ಥಿತಿಯನ್ನ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರಿಗೆ ತಂದಿಟ್ಟಿದ್ದಾರೆ. ಒಂದು ರೀತಿಯಲ್ಲಿ ಮಂಡಲಾಧ್ಯಕ್ಷರಿಗಂತೂ ಬೈಂದೂರು ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತಾವರಣ ಸೃಷ್ಟಿ ಮಾಡಿದ್ದಾರೆ.

ದೀಪಕ್ ಕುಮಾರ್ ಶೆಟ್ಟಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುರುರಾಜ್ ಗಂಟಿಹೊಳೆ ಗೆಲುವಿಗಾಗಿ ಶ್ರಮಿಸಿದವರು. ಅಂದು ಟಿಕೆಟ್ ಸಿಗಲಿಲ್ಲ ಎಂದು ಸುಕುಮಾರ್ ಶೆಟ್ಟಿ ಅವರು ಬಿಜೆಪಿಯಿಂದ ಮುನಿಸಿಕೊಂಡು ಕಾಂಗ್ರೆಸ್ ಗೆ ಹೋದರೂ ತಾನು ಮಾತ್ರ ಪಕ್ಷ ಬದಲಿಸದೇ ಬಿಜೆಪಿ ಪಕ್ಷ ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದೆಯೋ ಅವರ ಪರ ಕೆಲಸ ಮಾಡಿ ಪಕ್ಷದ ಅಣತಿಯಂತೆ ಕಾರ್ಯನಿರ್ವಹಿಸಿದರು. ನಂತರ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇಂತಹ ಪಕ್ಷ ನಿಷ್ಠ ದೀಪಕ್ ಶೆಟ್ಟಿ ಯವರನ್ನು ಶಾಸಕ ಗಂಟಿಹೊಳೆ ನಿರ್ಲಕ್ಷ್ಯಿಸುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಿದೆ. ಕೆಲ ತಿಂಗಳ ಹಿಂದೆ ನಡೆದ ಬೈಂದೂರು ಉತ್ಸವ ಕಾರ್ಯಕ್ರಮದಲ್ಲೂ ದೀಪಕ್ ಶೆಟ್ಟಿ ಅವರನ್ನು ಕಡೆಗಣಿಸಲಾಗಿತ್ತು.

ದೀಪಕ್ ಶೆಟ್ಟಿಯವರು ಸುಕುಮಾರ ಶೆಟ್ಟಿಯವರ ಆಪ್ತರು. ಈ ಹಿಂದೆ ಸುಕುಮಾರ್ ಶೆಟ್ಟಿ ಅವರ ಗೆಲುವಿಗೆ ಸಾಕಷ್ಟು ಹೋರಾಟ ನೀಡಿದವರು. ಗಂಟಿಹೊಳೆಯವರು ತನಗೆ ಟಿಕೆಟ್ ತಪ್ಪಿಸಿದರು ಅನ್ನುವ ಎಂಬ ಸಿಟ್ಟು ಸುಕುಮಾರ್ ಶೆಟ್ಟರಿಗಿತ್ತು. ಆ ಅಸಮಾಧಾನ ಇಬ್ಬರಲ್ಲೂ ಇರುವುದರಿಂದ ಗಂಟಿಹೊಳೆ ದೀಪಕ್ ಅವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದೀಪಕ್ ಶೆಟ್ಟಿ ಅವರ ಪರ ಬಿಜೆಪಿಯ ಒಂದು ಗುಂಪು ಬೆಂಬಲಕ್ಕೆ ನಿಂತಿದೆ. ಇದು ಗಂಟಿಹೊಳೆ ಅವರಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಗಂಟಿಹೊಳೆ ನಿರೀಕ್ಷಿಸಿದಂತೆ ಸಮೃದ್ಧ ಬೈಂದೂರು ಕಟ್ಟುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಅನುಭವದ ಕೊರತೆಯೂ ಕಾರಣ. ಸಹಜವಾಗಿ ಇದು ಬಿಜೆಪಿಯಲ್ಲಿ ಗಂಟಿಹೊಳೆ ಪರ ಬಿಜೆಪಿಯಲ್ಲಿ ಅತೃಪ್ತಿಗೂ ಕಾರಣವಾಗಿದೆ.

ಜಟಾಪಟಿ !
ಬೈಂದೂರು ಪಟ್ಟಣ ಪಂಚಾಯತ್ ವಿವಾದ ತಾರಕಕ್ಕೇರಿದ್ದು, ಶಾಸಕ ಗಂಟಿಹೊಳೆ ಮತ್ತು ಬಿಜೆಪಿಯ ಮಾಜಿ ಮಂಡಲಾಧ್ಯಕ್ಷ, ರೈತ ಮುಖಂಡ ದೀಪಕ್ ಕುಮಾ‌ರ್ ಶೆಟ್ಟಿ ನಡುವೆ ಜಟಾಪಟಿ ನಡೆದಿದೆ.

ಬಿಜೆಪಿಯನ್ನು ಕಾಂಗ್ರೆಸ್ ಮಾಡಲು ಹೊರಟಿದ್ದೀರಾ ಎಂದು ಗುರುರಾಜ್ ಗಂಟಿಹೊಳೆ ಗರಂ ಆಗಿದ್ದಾರೆ. ಮಾತಿಗೆ ಮಾತು ಬೆಳೆದು ಇಬ್ಬರು ನಾಯಕರು ತಳ್ಳಾಡಿಕೊಂಡಿದ್ದಾರೆ. ಮಣಿಪಾಲದ ಖಾಸಗಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಸಮ್ಮುಖದಲ್ಲೇ ಈ ಹೈಡ್ರಾಮಾ ನಡೆದಿದ್ದು ಬಳಿಕ ಸಂಸದ ರಾಘವೇಂದ್ರ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಬೈಂದೂರು ಪಟ್ಟಣ ಪಂಚಾಯತ್ ರದ್ದುಗೊಳಿಸುವಂತೆ ದೀಪಕ್ ಕುಮಾರ್ ಶೆಟ್ಟಿ ಕೆಲದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ರೈತ ಸಂಘದ ಮೂಲಕ ಬೈಂದೂರು ಮತ್ತು ಉಡುಪಿಯಲ್ಲಿ ಪ್ರತಿಭಟನೆ ಕೂಡ ನಡೆದಿತ್ತು. ಪ್ರತಿಭಟನೆಯ ಮುಂದುವರೆದ ಭಾಗವಾಗಿ ಈ ಜಟಾಪಟಿ ನಡೆದಿದೆ.