ನಿಮಿಷಾ ಪ್ರಿಯಾ ಅವರಿಗೆ ವಿಧಿಸಿಲಾಗಿದ್ದ ಮರಣದಂಡನೆ ಶಿಕ್ಷೆಗೆ ತಾತ್ಕಾಲಿಕ ತಡೆ

ಅಂತಾರಾಷ್ಟ್ರೀಯ

ಈ ವಿಷಯದಲ್ಲಿ ಯಾವುದೇ ವ್ಯತಿರಿಕ್ತ ಬೆಳವಣಿಗೆ ನಡೆದಿಲ್ಲ, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ

ಯೆಮೆನ್‌ ನಲ್ಲಿ ಕೊಲೆ ಆರೋಪದಡಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ವ್ಯತಿರಿಕ್ತ ಬೆಳವಣಿಗೆ ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಈ ಪ್ರಕರಣದಲ್ಲಿ ಮಾತುಕತೆ ನಡೆಸಲು ಹೊಸ ಮಧ್ಯವರ್ತಿಯೊಬ್ಬರನ್ನು ನೇಮಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸಂದೀಪ್ ಮೇಹ್ತಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

38 ವರ್ಷದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ಈ ಮಾಹಿತಿ ನೀಡಲಾಗಿದೆ. ಈ ವೇಳೆ ನ್ಯಾಯಾಲಯ ನಿಮಿಷಾ ಮರಣದಂಡನೆ ವಿಷಯದ ಸ್ಥಿತಿಗತಿಯನ್ನು ಪ್ರಶ್ನಿಸಿದಾಗ, ಸದ್ಯಕ್ಕೆ ಮರಣದಂಡನೆಯನ್ನು ತಡೆಹಿಡಿಯಲಾಗಿದೆ ಎಂದು ಸೇವ್ ನಿಮಿಷಾ ಪ್ರಿಯಾ ಇಂಟರ್ ನ್ಯಾಷನಲ್ ಕೌನ್ಸಿಲ್ ಪರ ವಕೀಲರು ತಿಳಿಸಿದರು.

ಈ ಪ್ರಕರಣದಲ್ಲಿ ಹೊಸ ಮಧ್ಯವರ್ತಿಯೊಬ್ಬರನ್ನು ನೇಮಿಸಲಾಗಿದೆ. ಖುಷಿಯ ಸಂಗತಿಯೆಂದರೆ, ಈ ವಿಷಯದಲ್ಲಿ ಯಾವುದೇ ವ್ಯತಿರಿಕ್ತ ಬೆಳವಣಿಗೆಗಳು ನಡೆದಿಲ್ಲ ಎಂದು ಕೋರ್ಟ್‌ಗೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂಬ ಅರ್ಜಿದಾರರ ಪರ ವಕೀಲರು ಮನವಿ ಪುರಸ್ಕರಿಸಿದ ನ್ಯಾಯಾಲಯವು, “2026ರ ಜನವರಿಗೆ ವಿಚಾರಣೆಯನ್ನು ನಿಗದಿ ಪಡಿಸಲಾಗಿದೆ. ಪರಿಸ್ಥಿತಿಯ ಅಗನುಗುಣವಾಗಿ ವಾದಿಗಳು ಮುಂಚಿತವಾಗಿ ವಿಚಾರಣೆ ನಡೆಸಲು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದೆ.

2017ರಲ್ಲಿ ವ್ಯವಹಾರಿಕ ವಿಚಾರದಲ್ಲಿ ಕಿರುಕುಳ ನೀಡಲಾರಂಭಿಸಿದ ತಲಾಲ್‌ನನ್ನು ನಿಮಿಷಾ ಭೀಕರವಾಗಿ ಕೊಲೆ ಮಾಡಿದ್ದರು. ಯೆಮೆನ್ ನ್ಯಾಯಾಲಯ 2020ರಲ್ಲಿ ನಿಮಿಷಾಗೆ ಮರಣದಂಡನೆ ಶಿಕ್ಷೆ ವಿಧಿಸಿತು. 2023ರಲ್ಲಿ ಆಕೆಯ ಬಿಡುಗಡೆಗಾಗಿ ಸಲ್ಲಿಸಲಾಗಿದ್ದ ಅಂತಿಮ ಮೇಲ್ಮನವಿ ಅರ್ಜಿಯೂ ತಿರಸ್ಕೃತಗೊಂಡಿತು. ಈ ವಿಚಾರವಾಗಿ ಯೆಮೆನಿನ ಅಧಿಕಾರಿಗಳು ಮತ್ತು ಕೆಲ ಮಿತ್ರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿರುವ ಭಾರತ ಸರ್ಕಾರ, “ನಿಮಿಷಾ ಪ್ರಿಯಾ ಅವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ” ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.