ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಅನುಭವಿಸಿದ ಹೀನಾಯ ಸೋಲು, ದೆಹಲಿಯ ಹೈಕಮಾಂಡ್ನ ಶಕ್ತಿಯನ್ನು ಕುಗ್ಗಿಸಿದ್ದು, ಇದರ ನೇರ ಲಾಭ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊರೆತಿದೆ. ಈ ಮೂಲಕ ಅವರ ನಾಯಕತ್ವ ಇನ್ನಷ್ಟು ಬಲಿಷ್ಠಗೊಂಡು, ನಾಯಕತ್ವ ಚರ್ಚೆ ತಾತ್ಕಾಲಿಕ ತೆರೆ ಕಂಡಿದೆ. ಬಿಹಾರ ಚುನಾವಣೆ ಕೇವಲ ಒಂದು ರಾಜ್ಯದ ಫಲಿತಾಂಶವಾಗಿರಲಿಲ್ಲ, ಅದು ಕಾಂಗ್ರೆಸ್ನ ರಾಷ್ಟ್ರೀಯ ನಾಯಕತ್ವಕ್ಕೆ, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ ಅವರ ವರ್ಚಸ್ಸಿಗೆ ಒಂದು ಅಗ್ನಿಪರೀಕ್ಷೆಯಾಗಿತ್ತು. ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಅಬ್ಬರದ ಪ್ರಚಾರ ಕೈಗೊಂಡು, ಸರಣಿ ಸಭೆಗಳನ್ನು ನಡೆಸಿ, ಮತ ಯಾತ್ರೆಗಳ ಮೂಲಕ ಜನರ ಗಮನ ಸೆಳೆಯಲು ಯತ್ನಿಸಿದ್ದರು.
ಬಿಹಾರದ ಮತದಾರರು ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕಿದ್ದಾರೆಯೇ ಹೊರತು, ರಾಷ್ಟ್ರೀಯ ನಾಯಕರ ಭಾಷಣಗಳಿಗಲ್ಲ. ಆರ್ಜೆಡಿ ನಾಯಕತ್ವವನ್ನು ನೆಚ್ಚಿಕೊಂಡು, ತನ್ನ ಸ್ವಂತ ಬಲವನ್ನು ಕಡೆಗಣಿಸಿದ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದೆ. ಈ ಫಲಿತಾಂಶವು ಕಾಂಗ್ರೆಸ್ ಹೈಕಮಾಂಡ್ನ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿದ್ದು, ಅದರ ಪ್ರಭಾವ ರಾಜ್ಯ ಘಟಕಗಳ ಮೇಲೂ ಕಡಿಮೆಯಾಗುವಂತೆ ಮಾಡಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಯ ಸ್ಥಳೀಯ ನಾಯಕತ್ವ ಹಾಗೂ ಬಿಜೆಪಿಯ ಆಡಳಿತ ವಿರೋಧಿ ಅಲೆಯು ಪ್ರಮುಖ ಕಾರಣವಾಗಿತ್ತು. ಇಲ್ಲಿನ ಗೆಲುವು ಹೈಕಮಾಂಡ್ನ ತಂತ್ರಗಾರಿಕೆಗಿಂತ ಹೆಚ್ಚಾಗಿ, ರಾಜ್ಯ ನಾಯಕರ ಸಾಮೂಹಿಕ ಪ್ರಯತ್ನದ ಫಲವಾಗಿತ್ತು.

ಈಗ ಬಿಹಾರದಲ್ಲಿ ಹೈಕಮಾಂಡ್ನ ತಂತ್ರ ವಿಫಲವಾಗಿರುವುದರಿಂದ, ಕರ್ನಾಟಕದಂತಹ ಪ್ರಬಲ ರಾಜ್ಯದಲ್ಲಿ ಗೆಲುವು ತಂದುಕೊಟ್ಟಿರುವ ಸಿದ್ದರಾಮಯ್ಯ ಅವರಂತಹ ಪ್ರಾದೇಶಿಕ ನಾಯಕರ ಮಹತ್ವ ಮತ್ತಷ್ಟು ಹೆಚ್ಚಿದೆ. ಹೈಕಮಾಂಡ್ ದುರ್ಬಲವಾದಾಗ, ರಾಜ್ಯಗಳಲ್ಲಿನ ಜನಪ್ರಿಯ ಮತ್ತು ಸಮರ್ಥ ನಾಯಕರು ಹೆಚ್ಚು ಸ್ವತಂತ್ರರಾಗುತ್ತಾರೆ. ಇದೇ ಸೂತ್ರದ ಅನ್ವಯ, ಸಿದ್ದರಾಮಯ್ಯ ಅವರ ಕೈ ಮೇಲಾಗಿದ್ದು, ಸರ್ಕಾರದ ಯಾವುದೇ ಪ್ರಮುಖ ನಿರ್ಧಾರಗಳಲ್ಲಿ ಅವರ ಮಾತೇ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಸಚಿವ ಸಂಪುಟ ಪುನರ್ರಚನೆ, ನಿಗಮ-ಮಂಡಳಿ ನೇಮಕಾತಿ ಸೇರಿದಂತೆ ಎಲ್ಲದರಲ್ಲೂ ಅವರ ಹಿಡಿತ ಇನ್ನಷ್ಟು ಬಿಗಿಯಾಗಿ ವಿರೋದಿಗಳ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಬಿಹಾರದ ರಾಜಕೀಯ ವಿದ್ಯಮಾನವು ಕರ್ನಾಟಕ ಕಾಂಗ್ರೆಸ್ನ ಆಂತರಿಕ ಶಕ್ತಿ ಸಮತೋಲನವನ್ನು ಬದಲಿಸಿದ್ದು, ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಬಲಾಢ್ಯ ನಾಯಕರನ್ನಾಗಿ ಮಾಡಿದೆ. ‘ಕ್ರಾಂತಿ’ಯ ಮಾತುಗಳು ಸದ್ಯಕ್ಕೆ ಕೇವಲ ವದಂತಿಗಳಾಗಿಯೇ ಉಳಿದಿವೆ.
