ಮುಂದಿನ ಟಾರ್ಗೆಟ್ ಪಶ್ಚಿಮ ಬಂಗಾಳ, ತಮಿಳುನಾಡು; ಪ್ರಾದೇಶಿಕ ಪಕ್ಷಗಳ ವಿನಾಶ.. ಬಿಜೆಪಿ ಜಯಭೇರಿಯ ರಹಸ್ಯ.!
ಪ್ರಾದೇಶಿಕ ಪಕ್ಷಗಳು ಉಸಿರಾಡುತ್ತಿರುವ ಕಾರಣ ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ಇದ್ದರೂ ಭಾರತ ಗೆಲ್ಲಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷಗಳ ವಿನಾಶವೊಂದೇ ಬಿಜೆಪಿಯ ಅಜೆಂಡಾ
ಬಿಹಾರದಲ್ಲಿ ಮತದಾರ ಎನ್ ಡಿಎ ಕೂಟಕ್ಕೆ ಜೈ ಅಂದಿದ್ದಾನೆ. ಮಹಾ ಘಟಬಂದನ್ ಅನ್ನು ಮಕಾಡೆ ಮಲಗಿಸಿದ್ದಾರೆ. 2014 ರ ನಂತರ ಬಿಜೆಪಿ ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಮೋದಿ -ಶಾ ಜುಗಲ್ ಬಂಧಿ ಬಿಜೆಪಿಗೆ ಬೂಸ್ಟ್ ಕೊಟ್ಟಿದೆ. ವೋಟ್ ಚೋರಿ, ಇವಿಎಂ ತಿರುಚುವಿಕೆ ಬಗ್ಗೆ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿದೆಯಾದರೂ ಮೋದಿ -ಶಾ ಜೋಡಿ ಮಾತ್ರ ಯಾವುದಕ್ಕೂ ಬಗ್ಗದಂತೆ ಕಾಣುತ್ತಿದೆ. ಚುನಾವಣಾ ರಾಜಕಾರಣದಲ್ಲಿ ತಂತ್ರ ಮಂತ್ರ ಬಳಸಿ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳನ್ನು ಮಕಾಡೆ ಮಲಗಿಸುತ್ತಿದ್ದಾರೆ. ತಂತ್ರಕ್ಕೆ ಪ್ರತಿ ತಂತ್ರ ಬಳಸಿ ಮೋದಿ -ಶಾ ಕಟ್ಟಿ ಹಾಕುವ ಪ್ಲ್ಯಾನ್ ಮಹಾಘಟಬಂಧನ್ ಕೂಟದ ಯಾವುದೇ ನಾಯಕರಲ್ಲೂ ಕಾಣುತ್ತಿಲ್ಲ. ಎಂಭತ್ತರ ದಶಕದಲ್ಲಿ ದುಡಿಯದೆ ಗೆಲ್ಲುತ್ತಾ ಬಂದಿದ್ದ ಕಾಂಗ್ರೆಸ್ ಈಗಲೂ ಅದೇ ಮೂಡ್ ನಲ್ಲಿದೆ. ಇಂತಹ ಕೆಟ್ಟ ತಂತ್ರಗಳು ಕಾಂಗ್ರೆಸ್ ಅನ್ನು ಪಾತಾಳಕ್ಕೆ ತಳ್ಳಿದೆ. ಕರ್ನಾಟಕ, ತೆಲಂಗಾಣ ಬಿಟ್ಟರೆ ಉಳಿದೆಲ್ಲ ಕಡೆ ಕಾಂಗ್ರೆಸ್ ಮುಕ್ತವಾಗಿದೆ. ಆದರೆ ಪ್ರಾದೇಶಿಕ ಪಕ್ಷಗಳು ಉಸಿರಾಡುತ್ತಿರುವ ಕಾರಣ ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ಇದ್ದರೂ ಇನ್ನು ಕೂಡ ಭಾರತ ಗೆಲ್ಲಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷಗಳ ವಿನಾಶವೊಂದೇ ಬಿಜೆಪಿಯ ಈಗಿರುವ ಅಜೆಂಡಾ. ಇದನ್ನು ಅರ್ಥೈಸಲು ಕಾಂಗ್ರೆಸ್ ಹಾಗೂ ಅವರ ಪರವಿರುವ ಪ್ರಾದೇಶಿಕ ಪಕ್ಷಗಳು ವಿಫಲರಾಗುತ್ತಿರುವುದು ಬಿಜೆಪಿಗೆ ಸಿಕ್ಕಿರುವ ದೊಡ್ಡ ಯಶಸ್ಸು ಅನ್ನುವುದು ನೂರಕ್ಕೆ ನೂರು ಸತ್ಯ.

ರಾಜಕಾರಣದಲ್ಲಿ ಶತ್ರುವಿನ ಶತ್ರು ಮಿತ್ರ ಅನ್ನುವ ಮಾತು ಚಾಲ್ತಿಯಲ್ಲಿದೆ. ಇದನ್ನೇ ಅಧಿಕಾರಕ್ಕೇರುವ ಏಣಿಯಾಗಿ ಬಳಸಿಕೊಂಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳನ್ನೇ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ. ಒಂದೇ ಕಲ್ಲಿನಿಂದ ಎರಡು ಹಣ್ಣು ಉದುರಿಸಿದಂತೆ ತನ್ನ ಪ್ರಾದೇಶಿಕ ಮಿತ್ರನನ್ನೇ ಬಳಸಿ ಕಾಂಗ್ರೆಸ್ ಅನ್ನು ಧೂಳೀಪಟಗೊಳಿಸುತ್ತಿದೆ. ತನ್ನ ಮಿತ್ರ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಕೊಟ್ಟು ಬಿಜೆಪಿ ಉದಾರಿಯಂತೆ ವರ್ತಿಸುತ್ತದೆ. ಎದುರಾಳಿಗಳು ಮಣ್ಣು ಮುಕ್ಕಿದ ನಂತರ ನಡೆಯುವುದೇ ಅಸಲಿ ಆಟ. ಬಿಜೆಪಿ ಅನ್ನುವ ಸರ್ಪದ ಜೊತೆಗೆ ಸ್ನೇಹ ಬೆಳೆಸಿದ ಪ್ರಾದೇಶಿಕ ಪಕ್ಷವನ್ನೇ ಪೂರ್ತಿ ಮುಳುಗಿಸಿ ಅಲ್ಲಿ ಬಿಜೆಪಿಯ ಪತಾಕೆ ಹಾರಿಸುತ್ತದೆ. ಬಿಜೆಪಿಗೆ ಕಾಂಗ್ರೆಸ್ ಅನ್ನುವ ಪಕ್ಷವನ್ನು ಸುಲಭವಾಗಿ ಸೋಲಿಸಬಹುದು. ಆದರೆ ಪ್ರಾದೇಶಿಕ ಪಕ್ಷಗಳನ್ನು ಅಷ್ಟು ಸುಲಭದಲ್ಲಿ ಮಕಾಡೆ ಮಲಗಿಸಲು ಸಾಧ್ಯವಿಲ್ಲ. ಅದಕ್ಕಾಗಿ ತಂತ್ರ, ರಣತಂತ್ರ ಬೇಕು. ಈಗ ಬಿಜೆಪಿ ಮಾಡುತ್ತಿರುವುದು ಅಂತಹದ್ದೇ ಖತರ್ನಾಕ್ ರಣತಂತ್ರಗಳನ್ನು.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾಗಿ ಅಸ್ತಿತ್ವ ಉಳಿಸಿಕೊಂಡಿದ್ದ ಜೆಡಿಎಸ್ ಬಿಜೆಪಿ ಜೊತೆ ಸಖ್ಯ ಬೆಳೆಸಿದ ನಂತರ ರಾಜ್ಯದಲ್ಲಿ ಜೆಡಿಎಸ್ ಇದೀಗ ಪೂರ್ತಿ ಮಣ್ಣು ಮುಕ್ಕಿದೆ. ಜೆಡಿಎಸ್ ಗೆಲುವು ಕಾಣುತ್ತಿದ್ದ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆದಿದೆ. ದೋಸ್ತಿ ಮೂಲಕವೇ ಜೆಡಿಎಸ್ ಅನ್ನು ಬಿಜೆಪಿ ಖೆಡ್ಡಾಕ್ಕೆ ಬೀಳಿಸಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಅನ್ನುವ ಪ್ರಾದೇಶಿಕ ಪಕ್ಷ ಬಲಿಷ್ಠವಾಗಿತ್ತು. ಹಲವು ವರ್ಷಗಳಿಂದ ಮಹರಾಷ್ಟ್ರವನ್ನು ಆಳಿತ್ತು. ಶಿವಸೇನೆ ಜೊತೆ ಸೇರಿಕೊಂಡ ಬಿಜೆಪಿ ಶಿವಸೇನೆಯನ್ನೇ ಇಬ್ಭಾಗ ಮಾಡಿ ಶಿಂಧೆ ಬಣವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿತ್ತು. ಇದೀಗ ಶಿಂಧೆ ಶಿವಸೇನೆ ಬಣ ಕೇವಲ ಒಂದು ಪಕ್ಷವಾಗಿ ಉಳಿದಿಲ್ಲ. ಅದರ ಬಹುತೇಕ ನಾಯಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಇನ್ನು ಕೆಲವರು ಪಕ್ಷಾಂತರಕ್ಕೆ ಕಾಯುತ್ತಿದ್ದಾರೆ. ಶಿಂಧೆ ಬಣವನ್ನೇ ಪುಡಿ ಪುಡಿ ಮಾಡಿ ಅಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆದು ನಿಂತಿದೆ.

ಒರಿಸ್ಸಾದಲ್ಲಿ ಬಿಜೆಡಿ ಪಕ್ಷ ಅಜೇಯವಾಗಿ ಆಳ್ವಿಕೆ ಮಾಡಿತ್ತು. ಬಿಜೆಡಿ ಯನ್ನು ತನ್ನ ತೆಕ್ಕೆಗೆ ಬೀಳಿಸಿ ಕೇಂದ್ರದಲ್ಲಿ ಮಂತ್ರಿ ಹುದ್ದೆ ಕೊಟ್ಟು ಸಂತೃಪ್ತಿ ಗೊಳಿಸುವಂತೆ ಮಾಡಿತ್ತು. ಕೊನೆ ಕೊನೆಗೆ ಬಿಜೆಡಿ ಯನ್ನೇ ಮುಗಿಸಿ ಒರಿಸ್ಸಾದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿತ್ತು.
ಮೊನ್ನೆ ನಡೆದ ಬಿಹಾರ ಚುನಾವಣೆ ಕೂಡ ಪ್ರಾದೇಶಿಕ ಪಕ್ಷದ ವಿನಾಶಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಿತೇಶ್ ಕುಮಾರ್ ಜೆಡಿಯು ಬಣವನ್ನು ಹಿಂಡಿ ಹಿಪ್ಪೆ ಮಾಡಲು ಚಿರಾಗ್ ಪಾಸ್ವಾನ್ ಬಣವನ್ನು ಸೃಷ್ಟಿಸಿತ್ತು. ಬಿಹಾರದಲ್ಲಿ ಶೂನ್ಯದಲ್ಲಿದ್ದ ಬಿಜೆಪಿ 90 ರ ಸೀಟು ಆಸುಪಾಸು ಬರಲು ಕಾರಣವಾಗಿದ್ದೇ ಪ್ರಾದೇಶಿಕ ಪಕ್ಷಗಳ ಸಖ್ಯ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಪೂರ್ತಿ ಮುಗಿಸಿ ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಏರುವುದು ಶತಸಿದ್ಧ.

ಉತ್ತರಪ್ರದೇಶದಲ್ಲಿ ಮಾಯಾವತಿ ಯ ಆನೆ ಏರಿ ಹೋದ ಬಿಜೆಪಿ ಅಲ್ಲಿ ಮಾಯಾವತಿಗೆ ಸಿಗುತ್ತಿದ್ದ ಓಟುಗಳೆಲ್ಲ ಬಿಜೆಪಿಗೆ ಶಿಫ್ಟ್ ಆಗಿದೆ. ಕ್ಷಣಿಕ ಅಧಿಕಾರದ ಸುಖಕ್ಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪಕ್ಷಗಳೆಲ್ಲ ನಿರ್ನಾಮವಾಗಿದೆ.
ಬಿಹಾರ ರಿಸಲ್ಟ್ ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಚುನಾವಣೆಗೆ ಬೂಸ್ಟ್ ಕೊಟ್ಟಂತಾಗಿದೆ. ಕೇರಳದಲ್ಲಿ ಬಿಜೆಪಿ ಆಟ ನಡೆಯದಿದ್ದರೂ ಪಶ್ಚಿಮ ಬಂಗಾಳ ದಲ್ಲಿ ಈ ಬಾರಿ ಕಮಲ ಅರಳಿಸಲು ಮೋದಿ -ಶಾ ಜೋಡಿ ಭಯಂಕರ ರಣತಂತ್ರ ಹೆಣೆಯುವುದಂತೂ ಸತ್ಯ. ತಮ್ಮ ಆತ್ಮೀಯ ಓವೈಸಿ ಬಾಣ ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತ ಏರಿಯಾಗಳಲ್ಲಿ ಕಮಾಲ್ ಮಾಡುವ ಸಂಭವ ಜಾಸ್ತಿ ಇದೆ. ಇದು ಬಿಜೆಪಿಗೆ ಪ್ಲಸ್ ಆಗಲಿದೆ. ದೀದಿ ಮಟ್ಟ ಹಾಕಲು ಪಶ್ಚಿಮ ಬಂಗಾಳ ದತ್ತ ಮೋದಿ -ಶಾ ಜೋಡಿ ರಣತಂತ್ರ ನಡೆಯಲಿದೆ.
ಇನ್ನು ದ್ರಾವಿಡ ನೆಲ ತಮಿಳುನಾಡಿನಲ್ಲಿ ಪಕ್ಕಾ ರಾಜಕೀಯ ತಂತ್ರ ಕುತಂತ್ರಕ್ಕೆ ಮೋದಿ -ಶಾ ಮುಂದಾಗಿದ್ದಾರೆ. ಅಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ. ಆದರೂ ಎಐಎಡಿಎಂಕೆ ಜೊತೆ ಸೇರಿ ತಮಿಳುನಾಡಿನಲ್ಲಿ ತನ್ನ ಮತ ಪ್ರಮಾಣವನ್ನು ಹೆಚ್ಚಿಸಿದೆ. ಡಿಎಂಕೆ ಯನ್ನು ಎಐಎಡಿಎಂಕೆ ಎದುರಿಸಲು ಸಾಧ್ಯವಿಲ್ಲ ಅನ್ನುವುದನ್ನು ಅರಿತು ಅಲ್ಲಿ ಸೂಪರ್ ಸ್ಟಾರ್ ವಿಜಯ್ ಪಕ್ಷ ಕಟ್ಟಿ ಡಿಎಂಕೆ ಗೆ ಸಾಕಷ್ಟು ಹಾನಿ ಮಾಡುವ ಸಾಧ್ಯತೆ ಇದೆ. ವಿಜಯ್ ಪಕ್ಷದಿಂದ ಡಿಎಂಕೆ ಗೆ ಎಷ್ಟು ಹಾನಿಯಾಗುತ್ತೋ ಅಷ್ಟು ಅಲ್ಲಿ ಬಿಜೆಪಿಗೆ ಲಾಭ. ವಿಜಯ್ ಹಿಂದೆ ಮೋದಿ -ಶಾ ತಂತ್ರಗಾರಿಕೆ ಇರುವುದಂತೂ ಸತ್ಯ. ಇದನ್ನು ಅಲ್ಲಿನ ಜನ ಅರ್ಥೈಸಿಕೊಳ್ಳದಿದ್ದರೆ ಮುಂದಿನ ಒಂದೆರಡು ಚುನಾವಣೆ ನಂತರ ಅಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯುವುದಂತೂ ಸತ್ಯ.

ಗ್ರಾಮೀಣ ಭಾಗದಲ್ಲಿ ಹಿಂದೆ ಒಂದು ಆಡುಮಾತು ಚಾಲ್ತಿಯಲ್ಲಿತ್ತು. ಮೀಸೆ ನುಗ್ಗಿಸಲು ಸ್ಥಳ ಸಿಕ್ಕರೆ ಸಾಕು, ಮತ್ತೆ ಅವನದ್ದೇ ಕಾರುಬಾರು. ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ಕೂಡ ಅದೇ ಸಿದ್ಧಾಂತದಲ್ಲಿ ಮಗ್ನವಾಗಿದೆ. ತನ್ನ ಅಸ್ತಿತ್ವ ಇಲ್ಲದ ರಾಜ್ಯಗಳಲ್ಲಿ ಕಾಂಗ್ರೆಸ್ ವಿರೋಧಿ ಪ್ರಾದೇಶಿಕ ಪಕ್ಷಗಳ ಜೊತೆ ಸೇರಿಕೊಳ್ಳುತ್ತದೆ. ಗೆದ್ದಲು ಮರವನ್ನು ನುಂಗುವಂತೆ ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡ ಪಕ್ಷವನ್ನೇ ಬಿಜೆಪಿ ಪೂರ್ತಿ ನುಂಗಿ ಹಾಕಿ ತನ್ನ ಅಧಿಪತ್ಯ ಸ್ಥಾಪಿಸುತ್ತದೆ. ಉತ್ತರಪ್ರದೇಶದಲ್ಲಿ ಮಾಯಾವತಿ, ಮಹಾರಾಷ್ಟ್ರದಲ್ಲಿ ಶಿವಸೇನೆ, ಕರ್ನಾಟಕದಲ್ಲಿ ಜೆಡಿಎಸ್, ಒರಿಸ್ಸಾದಲ್ಲಿ ಬಿಜೆಡಿ ಹೀಗೆ ಪಟ್ಟಿ ಮುಂದುವರಿಯುತ್ತಿದೆ.
ಇನ್ನಾದರೂ ಕೇವಲ ವೋಟ್ ಚೋರಿ, ಇವಿಎಂ ಎಂದು ಬೊಬ್ಬೆ ಹಾಕುವ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಬಿಜೆಪಿಯ ರಣತಂತ್ರವನ್ನು ಅರಿಯಬೇಕಿದೆ. ಬಲಿಷ್ಠ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್ ಸಂಯಮದಿಂದ ವರ್ತಿಸಿ ಬಿಜೆಪಿಗೆ ಪ್ರತಿಯಾಗಿ ರಣತಂತ್ರ ಪ್ರಯೋಗಿಸಬೇಕು. ಕೂತಲ್ಲೇ ಅಧಿಕಾರ ಸಿಗಲು ಇದು ಇಂದಿರಾ ಗಾಂಧಿ ಕಾಲವಲ್ಲ. ಮೋದಿ -ಶಾ ಜೋಡಿಯ ಕಾಲ. ಕಾಂಗ್ರೆಸ್ ಕೂಡ ಬಿಜೆಪಿಯವರಂತೆ ರಣತಂತ್ರಕ್ಕೆ ಇಳಿದರೆ ಮಾತ್ರ ಯುದ್ಧಭೂಮಿಯಲ್ಲಿ ಗೆಲುವಾಗಬಹುದು. ಜಾತ್ಯತೀತ ಸಿದ್ಧಾಂತ ಹೊಂದಿರುವ ಪ್ರಾದೇಶಿಕ ಪಕ್ಷಗಳು ಕ್ಷಣಿಕ ಅಧಿಕಾರದ ಸುಖಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸಬೇಕಿದೆ.
ಇನ್ನೂ ಅರ್ಥವಾಗದಿದ್ದರೆ ಪ್ರಾದೇಶಿಕ ಪಕ್ಷಗಳು ನಿರ್ನಾಮ ಹೊಂದುವುದಂತೂ ಸತ್ಯ. ಪ್ರಾದೇಶಿಕ ಪಕ್ಷಗಳು ವಿನಾಶಗೊಂಡರೆ ಮೋದಿ -ಶಾ ಜೋಡಿ ಇಡೀ ಭಾರತ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಆಗಿ ಹೋಗಿದೆ. ಜಾತ್ಯತೀತ ಮುಕ್ತ ಭಾರತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ.
