ಪ್ರಭಾವೀ ಬ್ಯಾರಿ ನಾಯಕನ ಒಲವು ಯಾರ ಕಡೆ?
ನಿಗಮ ಮಂಡಳಿಗಳ ಗಡಿಬಿಡಿ ಬಹುತೇಕ ಮುಗಿದಿದೆ. ಈಗ ಏನಿದ್ದರೂ ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ಪೂರ್ಣಾವಧಿ ಸಿಎಂ ಆಗುತ್ತಾರೋ? ಡಿಕೆಶಿ ಸಿಎಂ ಆಗುತ್ತಾರೋ ಅನ್ನುವ ಕುತೂಹಲ ಗರಿಗೆದರಿದೆ. ಈ ಮಧ್ಯೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅವಧಿ ಮುಗಿದು ಎರಡು ತಿಂಗಳಾಗುತ್ತಾ ಬಂದಿದೆ. ಜಿಲ್ಲಾ ವಕ್ಫ್ ಸಮಿತಿಗೆ ಅಧ್ಯಕ್ಷರಾಗುವ ಕನಸಿನಲ್ಲಿ ಹಲವರು ತೆರೆಮರೆಯ ಲಾಬಿ ನಡೆಸುತ್ತಿದ್ದಾರೆ ಅನ್ನುವ ಸಮಾಚಾರಗಳು ಸಿಗತೊಡಗಿದೆ.
ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾ ವಕ್ಫ್ ಅಧ್ಯಕ್ಷರಾಗಿ ನಾಸೀರ್ ಲಕ್ಕಿಸ್ಟಾರ್ ಆಯ್ಕೆಯಾಗಿದ್ದರು. ಬಿಜೆಪಿ ಪಕ್ಷದೊಳಗೆ ಗುರುತಿಸಿರುವ ಕೆಲವು ಸದಸ್ಯರು ನೇಮಕಗೊಂಡಿದ್ದರು. ದ.ಕ. ಜಿಲ್ಲಾ ವಕ್ಫ್ ಸದಸ್ಯರ ಕೆಲವೊಂದು ಕಿತಾಪತಿಗಳು ಸಮುದಾಯದೆಡೆಯಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲವೊಂದು ಸದಸ್ಯರು ಖಾಸಗಿ ವಿಚಾರಕ್ಕೆ ಸಂಬಂಧಿಸಿ ಜೈಲಿಗೂ ಹೋಗಿ ಬಂದಿದ್ದರು. ಇನ್ನು ಕೆಲವು ಸದಸ್ಯರು ಮೋದಿ, ಬಿಜೆಪಿಗೆ ಬಕೆಟ್ ಹಿಡಿದು ಸಮುದಾಯದ ಅವಕೃಪೆಗೆ ಪಾತ್ರರಾಗಿದ್ದರು. ನಾಸಿರ್ ಲಕ್ಕಿಸ್ಟಾರ್ ಬಿಜೆಪಿ ಅವಧಿಯಲ್ಲಿ ಅಧ್ಯಕ್ಷರಾದರೂ ತದನಂತರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಯಾದರು. ಮುಸ್ಲಿಂ ಸಮುದಾಯದ ಮಸೀದಿ, ಮದರಸ ಸಂರಕ್ಷಣೆಯ ದೊಡ್ಡ ಜವಾಬ್ದಾರಿ ಹೊಂದಿರುವ ವಕ್ಫ್ ಸಮಿತಿಯಲ್ಲಿ ಧಾರ್ಮಿಕ ಹಿನ್ನಲೆ ಇರದ, ವಿವಾದದ ವ್ಯಕ್ತಿಗಳು ಸದಸ್ಯರಾಗುವ ಮೂಲಕ ವಕ್ಫ್ ಸಮಿತಿಗೆ ದೊಡ್ಡ ಕಳಂಕವೂ ಅಂತಿತ್ತು. ಈ ಮಧ್ಯೆ ವಕ್ಫ್ ಸಮಿತಿ ಅಂದರೆ ಜಿಲ್ಲೆಯ ಜನತೆಗೆ ಪರಿಚಯವೇ ಇದ್ದಿರಲಿಲ್ಲ. ವಕ್ಫ್ ಸದಸ್ಯರೆಂದರೆ ಅಂಬಡೆ, ಚಹಾಕ್ಕೆ ಮಾತ್ರ ಸೀಮಿತರಾಗಿದ್ದರು. ಅಂತಹ ವಕ್ಫ್ ಕಮಿಟಿಗೆ ಸ್ವಲ್ಪ ಇಮೇಜ್, ಜಿಲ್ಲೆಯೆಲ್ಲಡೆ ಇಂತಹದ್ದೊಂದು ಕಮಿಟಿ ಇದೆಯೆಂದು ತೋರಿಸಿಕೊಟ್ಟಿದ್ದು ನಾಸೀರ್ ಲಕ್ಕಿಸ್ಟಾರ್ ಅವಧಿಯಲ್ಲಿ ಎಂದರೂ ತಪ್ಪಾಗಲ್ಲ.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ. ಕಾಂಗ್ರೆಸ್ಸಿನೊಂದಿಗೆ ಗುರುತಿಸಿಕೊಂಡಿರುವ ಕೆಲವು ನಾಯಕರು ವಕ್ಫ್ ಅಧ್ಯಕ್ಷ ಪಟ್ಟಕ್ಕೆ ಲಾಬಿ ಆರಂಭಿಸಿದ್ದಾರೆ. ವಕ್ಫ್ ಅಧ್ಯಕ್ಷಗಿರಿಗೆ ಸ್ಪೀಕರ್ ಖಾದರ್ ಅವರ ಅಭಯಗಿರಿ ಯಾರಿಗಿದೆಯೋ ಅವರ ಹೆಸರು ಅಂತಿಮಗೊಳ್ಳಲಿದೆ. ಇದಕ್ಕಾಗಿ ಕೆಲವು ನಾಯಕರು ಕಾಂಗ್ರೆಸ್ ಮಹಾನಾಯಕರ ಹಿಂದೆ ಮುಂದೆ ಸುತ್ತಾಡುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ನಿಕಟಪೂರ್ವ ಅಧ್ಯಕ್ಷರಾದ ನಾಸೀರ್ ಲಕ್ಕಿಸ್ಟಾರ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಇದೀಗ ಕಾಂಗ್ರೆಸ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಎರಡನೇ ಅವಧಿಗೂ ಅಧ್ಯಕ್ಷರಾಗುವ ಯತ್ನದಲ್ಲಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಹಿದಾಯ ಫೌಂಡೇಶನ್ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಹನೀಫ್ ಗೊಳ್ತಮಜಲು ಅವರ ಹೆಸರು ಕೂಡ ಪ್ರಬಲವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ನಾಯಕರು ಇವರ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಇದರ ಮಧ್ಯೆ ಈ ಬಾರಿ ಎಸ್ಕೆಎಸ್‍ಎಸ್‍ಎಫ್ ಸಂಘಟನೆಗೆ ವಕ್ಫ್ ಅಧ್ಯಕ್ಷ ಪಟ್ಟ ನೀಡುವ ಬಗ್ಗೆ ಕಾಂಗ್ರೆಸ್ ಬ್ಯಾರಿ ನಾಯಕರು ಒಲವು ಹೊಂದಿದ್ದಾರೆ ಅನ್ನುವ ಮಾತುಗಳಿವೆ.
ಎಸ್ಕೆಎಸ್‍ಎಸ್‍ಎಫ್ ಸಂಘಟನೆಗೆ ಈ ಬಾರಿ ವಕ್ಫ್ ಅಧ್ಯಕ್ಷ ಪಟ್ಟ ದೊರಕಲಿದೆ ಅನ್ನುವ ಸುದ್ದಿಗಳು ಹರಡುತ್ತಿರುವುದರಿಂದ ಎಸ್ಕೆಎಸ್‍ಎಸ್‍ಎಫ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇಕ್ಬಾಲ್ ಬಾಳಿಲ ರಂಗಕ್ಕೆ ಇಳಿದಿದ್ದಾರಂತೆ. ಉತ್ತಮ ವಾಕ್ಚಾತುರ್ಯ ಹೊಂದಿರುವ ಸಂಘಟನಾ ಚತುರನಾಗಿರುವ ಬಾಳಿಲ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮುಖಾಂತರ ಲಾಬಿ ನಡೆಸುತ್ತಿದ್ದಾರಂತೆ! ವಕ್ಫ್ ಅಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟು ಡ್ರಗ್ಸ್ ವಿರುದ್ಧ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಅನ್ನುವ ಸುದ್ದಿಯೂ ಹರಡುತ್ತಿದೆ. ಇದರ ಮಧ್ಯೆ ಎಸ್ಕೆಎಸ್‍ಎಸ್‍ಎಫ್‍ನ ಅನೀಶ್ ಕೌಸರಿ ಹೆಸರು ಕೂಡಾ ಸೈಲೆಂಟಾಗಿ ಕೇಳಿ ಬರುತ್ತಿದೆ.
ಇನ್ನು ದ.ಕ. ಜಿಲ್ಲಾ ವಕ್ಫ್ ಅಧ್ಯಕ್ಷರಾದವರು ಬ್ಯಾರಿ ಸಮುದಾಯಕ್ಕೆ ಸೇರಿದವರಾಗಿದ್ದು, ಹನಫೀ ಸಮುದಾಯದ ನಾಯಕರಿಗೆ ಒಮ್ಮೆಯೂ ಅವಕಾಶ ನೀಡಿಲ್ಲ. ಈ ಬಾರಿ ಹನಫಿ ಸಮುದಾಯದ ನಾಯಕರಿಗೆ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಾಗೇನಾದರೂ ಆದರೆ ಹಿರಿಯ ಮುಸ್ಲಿಂ ಮುಖಂಡರಾದ ಹಾಜಿ ಮುಹಮ್ಮದ್ ಮಸೂದ್ ಅವರ ಪುತ್ರ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದಲ್ಲೂ ಗುರುತಿಸಿಕೊಂಡವರು ಕೂಡಾ ಒಂದು ಕೈ ನೋಡೋಣ ಅನ್ನುತ್ತಾ ಬೆಂಗಳೂರು ಹತ್ತುತ್ತಿದ್ದಾರೆ. ಪುತ್ತೂರು ಭಾಗದ ಕಾಂಗ್ರೆಸ್ ಮುಖಂಡರಾದ ನಝೀರ್ ಮಠ ಅವರ ಹೆಸರು ಕೂಡಾ ಕೇಳಿ ಬರುತ್ತಿದೆ.
ಪ್ರಭಾವೀ ಮುಸ್ಲಿಂ ನಾಯಕನ ಒಲವು ಯಾರ ಕಡೆ?
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧ್ಯಕ್ಷಗಾದಿಗೆ ಕರಾವಳಿ ಭಾಗದ ಪ್ರಭಾವೀ ಮುಸ್ಲಿಂ ನಾಯಕರೊಬ್ಬರ ಒಲವು ಯಾರು ಪಡೆಯುತ್ತಾರೋ ಅವರಿಗೆ ಫೈನಲ್ ಆಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಈ ಬಗ್ಗೆ ಒಂದೆರಡು ಮೀಟಿಂಗ್ ಕೂಡಾ ನಡೆದಿದ್ದು, ಎಸ್ಕೆ ಸಂಘಟನೆಯಲ್ಲಿ ಗುರುತಿಸಿಕೊಂಡವರಿಗೆ ವಕ್ಫ್ ಅಧ್ಯಕ್ಷ ಪಟ್ಟ ನೀಡುವ ಸಾಧ್ಯತೆ ಹೆಚ್ಚಿದೆ. ಪ್ರಭಾವೀ ಮುಸ್ಲಿಂ ನಾಯಕರೊಬ್ಬರು ಈ ಹಿಂದೆ ಎಸ್ಕೆ ವಿರುದ್ಧ ಮತ್ತೊಂದು ಸಂಘಟನೆಯನ್ನು ಎತ್ತಿಕಟ್ಟಿ ರಾಜಕೀಯ ನಿಪುಣಗಾರಿಕೆ ಪ್ರದರ್ಶಿಸಿದ್ದರು. ಆದರೆ ಈ ಬಾರಿ ಅವರು ಬೆಳೆಸಿದ ಸಂಘಟನೆಯ ನಾಯಕರೇ ರಾಜಕೀಯವಾಗಿ ತಿರುಗಿಬಿದ್ದಿದ್ದು, ಚುನಾವಣಾ ಸಮಯದಲ್ಲಿ ಇದು ಪ್ರತಿಫಲನವಾಗುವ ಸಾಧ್ಯತೆ ಹೆಚ್ಚಿದೆ. ಚುನಾವಣೆಯಲ್ಲಿ ಇನ್ನೊಂದು ಸಂಘಟನೆಯವರಿಂದ ಆಗುವ ಡ್ಯಾಮೇಜು ಕಂಟ್ರೋಲ್ ಮಾಡಲು ಈ ಬಾರಿ ಎಸ್ಕೆ ಸಂಘಟನೆಯವರಿಗೆ ಅಧ್ಯಕ್ಷ ಸ್ಥಾನ ಕೊಟ್ಟು ಒಲವು ಪಡೆಯಲು ಮುಂದಾಗಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ. ಇದೀಗ ಎಲ್ಲರ ಚಿತ್ತ ವಕ್ಫ್ ಅಧ್ಯಕ್ಷ ಯಾರಾಗಲಿದ್ದಾರೆ ಅನ್ನುವತ್ತ ನೆಟ್ಟಿದೆ.
