ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಇದೀಗ ತೀವ್ರ ಅಸಮಾಧಾನದ ಹೊಗೆ; ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ

ರಾಜ್ಯ

ಜೆಡಿಯು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ. ಕರ್ನಾಟಕದಲ್ಲಿ ಬಿಜೆಪಿ ನಾಯಕರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ: ಎಚ್.ಡಿ. ದೇವೇಗೌಡ

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಓಟಕ್ಕೆ ಲಗಾಮು ಹಾಕುವ ಉದ್ದೇಶ ಹಾಗೂ ಅಧಿಕಾರ ಪಡೆಯಲು ಒಂದಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಇದೀಗ ತೀವ್ರ ಅಸಮಾಧಾನದ ಹೊಗೆಯಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಅನಿವಾರ್ಯವಾಗಿ ಒಂದಾಗಿದ್ದ ಉಭಯ ಪಕ್ಷಗಳು, ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಭವಿಷ್ಯದ ರಾಜಕೀಯ ಅಸ್ತಿತ್ವದ ಪ್ರಶ್ನೆ ಬಂದಾಗ ಬೇರೆ ಬೇರೆಯಾಗಿ ಮೈತ್ರಿ ಮುರಿಯುವ ಹಂತಕ್ಕೆ ಬಂದು ತಲುಪಿದೆ.

ಜೆಡಿಎಸ್ ವರಿಷ್ಠ ದೊಡ್ಡ ಗೌಡರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ನೇರವಾಗಿ ಘೋಷಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಗೌಡರ ಈ ದಿಢೀರ್ ನಿರ್ಧಾರದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಯೊಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ವಿಜಯೇಂದ್ರ ನೀಡಿದ ಹೇಳಿಕೆ ಮೈತ್ರಿ ಧರ್ಮಕ್ಕೆ ವಿರುದ್ಧವಾಗಿದೆ ಎಂಬುದು ಜೆಡಿಎಸ್ ವಲಯದ ಅಸಮಾಧಾನ.

ಮೈತ್ರಿಯಲ್ಲಿದ್ದಾಗ ಪಾಲುದಾರ ಪಕ್ಷವನ್ನು ಕಡೆಗಣಿಸಿ ಸ್ವಬಲದ ಮಾತನಾಡಿದ್ದು ಗೌಡರ ಕಣ್ಣು ಕೆಂಪಾಗಿಸಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಎನ್ ಡಿಎ ಮೈತ್ರಿಯಲ್ಲಿದ್ದಾಗಲೂ ಎಂದಿಗೂ ಜೆಡಿಯು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ ಎಂದು ಹೇಳಿರಲಿಲ್ಲ. ಆದರೆ ಕರ್ನಾಟಕದಲ್ಲಿ ಬಿಜೆಪಿ ನಾಯಕರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂಬ ಭಾವನೆ ದಳಪತಿಗಳಲ್ಲಿ ಮೂಡಿದೆ.

ಮೇಲ್ಮಟ್ಟದಲ್ಲಿ ನಾಯಕರು ಕೈ ಕುಲುಕಿದರೂ, ತಳಮಟ್ಟದಲ್ಲಿ ಕಾರ್ಯಕರ್ತರ ಮನಸ್ಸುಗಳು ಒಂದಾಗಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಇದೊಂದು ರೀತಿಯ ಬಲವಂತದ ಮದುವೆಯಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಲವು ದಶಕಗಳಿಂದ ಹಳ್ಳಿಗಳಲ್ಲಿ ಪರಸ್ಪರ ಎದುರಾಳಿಗಳಾಗಿ ಕಾದಾಡಿರುವ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ರಾತ್ರೋರಾತ್ರಿ ಒಂದಾಗಲು ಸಾಧ್ಯವಾಗುತ್ತಿಲ್ಲ.

ವಿಶೇಷವಾಗಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸೀಟು ಹಂಚಿಕೆ ದೊಡ್ಡ ಕಗ್ಗಂಟಾಗಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ತನ್ನದೇ ಆದ ಭದ್ರ ನೆಲೆ ಹೊಂದಿದೆ. ಆದರೆ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡಲು ತಯಾರಿಲ್ಲ. ಈ ಸಂಘರ್ಷವೇ ಈಗ ಮೈತ್ರಿಗೆ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮೈತ್ರಿಯ ಬಗ್ಗೆ ಕೇವಲ ಕಾರ್ಯಕರ್ತರಲ್ಲಷ್ಟೇ ಅಲ್ಲ, ಹಾಲಿ ಶಾಸಕರಲ್ಲೂ ತೀವ್ರ ವಿರೋಧವಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ 2028ರ ವಿಧಾನಸಭಾ ಚುನಾವಣೆಯ ವೇಳೆಗೆ ಈ ಮೈತ್ರಿ ಉಳಿಯುವುದು ಕಷ್ಟಸಾಧ್ಯ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.