ನಿಯಮಬಾಹಿರವಾಗಿ ಅಕ್ರಮ ಸಾಗುವಳಿ ಚೀಟಿ ವಿತರಣೆ ಆರೋಪ; ಶಿರಸ್ತೇದಾರ್ ಹೇಮಂತ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಜ್ಯ

ನಿಯಮಬಾಹಿರವಾಗಿ ಅಕ್ರಮ ಸಾಗುವಳಿ ಚೀಟಿ ವಿತರಣೆ ಮಾಡಿದ ಆರೋಪದ ಮೇಲೆ ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್‌ ಕುಮಾರ್‌ ಕಳಸ ತಾಲ್ಲೂಕಿನ ಕಛೇರಿಯಲ್ಲಿ ಪ್ರಭಾರಿ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುವಾಗ 50 ಕ್ಕೂ ಹೆಚ್ಚು ಸಾಗುವಳಿ ಚೀಟಿ ಅಕ್ರಮವಾಗಿ ನೀಡಿದ್ದಾರೆಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

2022 ರ ಫೆಬ್ರವರಿ ತಿಂಗಳಲ್ಲಿ ಕಳಸ ತಾಲೂಕು ಪ್ರಭಾರ ತಹಶೀಲ್ದಾರ್ ಆಗಿ ಒಂದು ತಿಂಗಳು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಈ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಠಿಯಿಂದ ಕಚೇರಿ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದರೂ ಹೇಮಂತ್ ಕುಮಾರ್ ಕಾನೂನುಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ರಮವಾಗಿ 50 ಕ್ಕೂ ಹೆಚ್ಚು ಸಾಗುವಳಿ ಪತ್ರ ನೀಡಿದ್ದು, ಇದು ಕಾನೂನು ರೀತಿ ಅಕ್ಷಮ್ಯ ಅಪರಾಧವಾಗಿದ್ದು ಇವರ ಮೇಲೆ ಸರ್ಕಾರ ಕೂಡಲೇ ಕ್ರಮಕೈಗೊಂಡು
ಅವರನ್ನು ಬಂಧಿಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಎಂ. ಎ. ಸಲಾವುದ್ದೀನ್ ಒತ್ತಾಯಿಸಿದ್ದಾರೆ.

ಹೇಮಂತ್ ಕುಮಾರ್ 2017 ರಲ್ಲಿ ರಾಜಸ್ವ ನಿರೀಕ್ಷಕರಾಗಿದ್ದು ಅವರನ್ನು ಲೋಕಾಯುಕ್ತ ದಾಳಿ ನಡೆಸಿ ಬಂಧಿಸಿದ್ದು ನ್ಯಾಯಾಲಯದಲ್ಲಿ ದಾವೆ ಇದ್ದಾಗ ಬಡ್ತಿನೀಡಲು ಅವಕಾಶ ಇಲ್ಲದಿದ್ದರೂ ಶಿರಸ್ತೇದಾರರಾಗಿ ಬಡ್ತಿ ನೀಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಅಕ್ರಮ ಸಾಗುವಳಿ ಚೀಟಿ ಪ್ರಕರಣದಲ್ಲಿ ಕಳಸ ತಾಲೂಕು ಕಛೇರಿಯ ಸಿಬ್ಬಂದಿ ಪ್ರಕಾಶ್ ಮತ್ತು ಶರತ್ ರನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಮುಖ್ಯ ಆರೋಪಿ ಹೇಮಂತ್ ಕುಮಾರ್ ರ ಮೇಲೆ ಕ್ರಮ ಆಗದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತದೆ ಎಂದು ತಿಳಿಸಿದ್ದಾರೆ. ಕಳಸ ತಾಲೂಕು ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದು ಅಲ್ಲಿನ ತಹಶೀಲ್ದಾರರು ದಾಖಲೆ ನೀಡಲು ಮೀನಮೇಷ ಎಣಿಸುತ್ತಿದ್ದು ಲೋಕಾಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.