ನಗರಸಭೆ ಪೌರಾಯುಕ್ತೆ ಅಮೃತಗೌಡ ರವರಿಗೆ ನಿಂದನೆ ಮತ್ತು ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡರನ್ನು ಪೊಲೀಸರು ಕರ್ನಾಟಕ-ಕೇರಳ ಗಡಿಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ- ಕೇರಳ ಗಡಿಯಲ್ಲಿ ಪೊಲೀಸರು ರಾಜೀವ್ ಗೌಡರನ್ನು ಬಂಧಿಸಿ, ಅವರನ್ನು ಚಿಕ್ಕಬಳ್ಳಾಪುರಕ್ಕೆ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ. ಬ್ಯಾನರ್ ವಿಚಾರಕ್ಕೆ ಸಂಬಂಧಿಸಿ ಜ.12 ರಂದು ರಾಜೀವ್ ಗೌಡ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ನಿಂದನೆ ಮತ್ತು ಜೀವ ಬೆದರಿಕೆ ಹಾಕಿದ್ದರು.
ಧಮ್ಕಿ ಹಾಕಿ, ನಿಂದಿಸಿದ್ದಕ್ಕೆ ರಾಜೀವ್ ಗೌಡ ವಿರುದ್ಧ ದೂರು ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಜನವರಿ 14ರಂದು ದೂರು ದಾಖಲಾಗಿತ್ತು. ಆ ಬಳಿಕ ಚಿಂತಾಮಣಿ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಜೊತೆಗೆ ಹೈಕೋರ್ಟ್ ನಲ್ಲಿ ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯೂ ವಜಾಗೊಂಡಿತ್ತು. ರಾಜೀವ್ ಗೌಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಕಾಂಗ್ರೆಸ್ ಪಕ್ಷ ಅವರನ್ನು ಅಮಾನತು ಮಾಡಿತ್ತು.
ಕಳೆದ 12 ದಿನಗಳಿಂದ ರಾಜೀವ್ ಗೌಡ ಪೊಲೀಸರ ಬಂಧನದ ಭೀತಿಯಿಂದ ತಲೆಮರಿಸಿಕೊಂಡಿದ್ದರು. ರಾಜೀವ್ ಗೌಡ ಬಂಧನಕ್ಕೆ ಲುಕ್‌ಔಟ್ ನೋಟಿಸ್ ಜಾರಿ ಆಗಿತ್ತು. ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದರು. ಇದೀಗ ರಾಜೀವ್ ಗೌಡರನ್ನು ಬಂಧಿಸಲಾಗಿದೆ.
