ರಾಜಕೀಯ ಪಕ್ಷದ ಪ್ರಭಾವಿಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿ; ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖೆ ಅಗತ್ಯವಿದೆ: ಹೈಕೋರ್ಟ್

ರಾಜ್ಯ

ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳಲ್ಲಿನ ಪ್ರಭಾವಿ ವ್ಯಕ್ತಿಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ಗೃಹ ಸಚಿವ ಜಿ.ಪರಮೇಶ್ವರ್‌ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ದಾಖಲಿಸಿಕೊಂಡಿದೆ. ಅಲ್ಲದೇ, ಇದೊಂದು ಗಂಭೀರ ವಿಚಾರವಾಗಿರುವುದರಿಂದ ನ್ಯಾಯಾಲಯದ ನಿಗಾದಲ್ಲಿ ಕೇಂದ್ರೀಯ ಸಂಸ್ಥೆ ಅಥವಾ ವಿಶೇಷ ತನಿಖಾ ಸಂಸ್ಥೆಯಿಂದ ತನಿಖೆ (ಎಸ್‌ಐಟಿ) ನಡೆಸಬೇಕಾದ ಅಗತ್ಯವಿದೆ’ ಎಂದೂ ಹೇಳಿದೆ.

ಮರಳು ಮಾಫಿಯಾಗಳಿಂದ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಕ್ರಮ ಕೈಗೊಳ್ಳುವಲ್ಲಿ ರಾಜ್ಯದ ಗೃಹ ಸಚಿವರು ವಿಧಾನಸಭೆಯಲ್ಲಿ ಅಸಹಾಯಕತೆ ತೋರಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ಅಗತ್ಯವಿರಲಿದೆ ಎಂದು ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ಮತ್ತು ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ರಾಜಕೀಯ ಪ್ರಭಾವಿಗಳ ಭಾಗಿಯಾಗುತ್ತಿರುವುದು ಅತ್ಯಂತ ಗಂಭೀರ ವಿಚಾರ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖೆ ಅಗತ್ಯವಿದೆ. ಎಸ್‌ಐಟಿ ಅಥವಾ ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕು. ಎಸ್‌ಐಟಿ ಅಥವಾ ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕು. ಜೊತೆಗೆ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದು, ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ 3 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ. ಹಾಗೆಯೇ, ಅರ್ಜಿಯನ್ನು ವಿಚಾರಣೆಗೆ ಸೂಕ್ತ ನ್ಯಾಯಪೀಠಕ್ಕೆ ನಿಯೋಜನೆ ಮಾಡುವಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಿದೆ. ಸರ್ಕಾರದ ಪರ ವಕೀಲರಿಗೆ, ಗೃಹ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಗಳ ಪರವಾಗಿ ನೋಟಿಸ್‌ ಪಡೆಯಲು ಸೂಚಿಸಿದ್ದು, ಪ್ರತಿವಾದಿಗಳಿಗೆ 3 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ.