ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಅವರ ಖಾಸಗಿ ವೀಡಿಯೋ ಮಾಡಿ 50 ಲಕ್ಷಕ್ಕೆ ಬೇಡಿಕೆ; ಮೂವರು ಯೂಟ್ಯೂಬರ್‌ಗಳ ಬಂಧನ, ಸ್ವತ್ತು ವಶ

ರಾಜ್ಯ

ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಅವರ ಖಾಸಗಿ ಆಗುಹೋಗುಗಳ ವೀಡಿಯೋ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಯೂಟ್ಯೂಬರ್‌ಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಗೋಕಾಕ್‌ನ ಅಬ್ದುಲ್‌ ರಷೀದ್ ನಜರ್ ಮಕಾನದಾರ, ಸಮೀರ್ ನಿಸಾರ್‌ಅಹಮದ್ ಶೇಖ್, ಮೊಹಮ್ಮದ್ ದಿಲಾವರ ನಜೀರ್‌ಅಹಮದ್ ಬಾಳೇಕಿಂದ್ರಿ ಬಂಧಿತರು. ಆರೋಪಿಗಳಿಂದ ವೀಡಿಯೋ, ಮೈಕ್ರೋ ಸೀಕ್ರೆಟ್ ಕ್ಯಾಮೆರಾಗಳು, ಲ್ಯಾಪ್‌ಟಾಪ್, ಪೆನ್‌ಡ್ರೈವ್, ಮೊಬೈಲ್‌, ಚಿಪ್‌ಗಳು, ಸಿಮ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇವರ ತಂಡದಲ್ಲಿ ಯಾರ್ಯರು ಇದ್ದಾರೆ, ಇವರಿಗೆ ಸಹಾಯ ನೀಡಿದವರು, ಇವರಿಗೆ ಸಹಕಾರ ನೀಡಿದವರು ಹಾಗೂ ಯಾರಿಗೆ ವಿಡಿಯೊ ಹಂಚಿದ್ದಾರೆ ಎಂಬ ವಿವರಗಳ ಕುರಿತು ತನಿಖೆ ನಡೆಸಲಾಗುತ್ತಿದೆ.

ಮಹಿಳಾ ಅಧಿಕಾರಿಯೊಬ್ಬರ ಮನೆಗೆ ಸ್ನೇಹಿತರೊಬ್ಬರು ಆಗಾಗ ಬರುತ್ತಿದ್ದರು. ಪ್ರತಿ ದಿನ ಕಚೇರಿಗೆ ಹೋಗುವ ಮುನ್ನ ಮನೆಯ ಬೀಗದ ಕೈಯನ್ನು ಕಿಟಕಿಯಲ್ಲೇ ಇಟ್ಟು ಹೋಗುತ್ತಿದ್ದರು. ಮನೆಯ ಕೆಲಸಗಾರನೊಬ್ಬ ಈ ವಿಷಯವನ್ನು ಯೂಟ್ಯೂಬರ್‌ಗಳಿಗೆ ತಿಳಿಸಿದ್ದ. ಹೊಂಚುಹಾಕಿದ ಮೂವರೂ ಯೂಟ್ಯೂಬರ್‌ಗಳು ಅಕ್ರಮವಾಗಿ ಅಧಿಕಾರಿಯ ಮನೆ ಪ್ರವೇಶಿಸಿ, 11 ಕಡೆ ಬಲ್ಟ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟಿದ್ದರು. ಮಹಿಳಾ ಅಧಿಕಾರಿ ತಮ್ಮ ಸ್ನೇಹಿತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೊ ಮಾಡಿಕೊಂಡಿದ್ದರು. ಅವುಗಳನ್ನು ತೋರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಹಿಳಾ ಅಧಿಕಾರಿ ಮಾಳಮಾರುತಿ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಬಿ.ಆ‌ರ್.ಗಡೇಕರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.